ಇದೇ 7ರಿಂದ ಐಸಿಸಿ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಆರಂಭವಾಗಲಿದ್ದು, ಇದಕ್ಕೂ ಮುನ್ನ ತಂಡಗಳು ಅಭ್ಯಾಸ ಪಂದ್ಯಗಳಲ್ಲಿ ಭಾಗವಹಿಸುತ್ತಿವೆ. ಇಂದು ( ಫೆಬ್ರವರಿ 4 ) ನವಿಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಹತ್ತನೇ ಅಭ್ಯಾಸ ಪಂದ್ಯ ನಡೆದಿದ್ದು, ಭಾರತ ದಕ್ಷಿಣ ಆಫ್ರಿಕಾ ವಿರುದ್ಧ 30 ರನ್‌ಗಳ ಗೆಲುವನ್ನು ದಾಖಲಿಸಿದೆ.
ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆರಿಸಿಕೊಂಡ ಭಾರತ ಟಾಪ್ ಆರ್ಡರ್ ಬ್ಯಾಟ್ಸ್‌ಮನ್‌ಗಳ ಅಬ್ಬರ ಹಾಗೂ ಹಾರ್ದಿಕ್ ಪಾಂಡ್ಯ ರನ್ ಮಳೆಯ ನೆರವಿನಿಂದ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 240 ರನ್ ಕಲೆಹಾಕಿ ದಕ್ಷಿಣ ಆಫ್ರಿಕಾಗೆ 241 ರನ್‌ಗಳ ಕಠಿಣ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 210 ರನ್ ಕಲೆಹಾಕಿತು.
ಭಾರತದ ಇನ್ನಿಂಗ್ಸ್: ಪರ ಆರಂಭಿಕರಾಗಿ ಕಣಕ್ಕಿಳಿದ ಇಶಾನ್ ಕಿಶನ್ ಹಾಗೂ ಅಭಿಷೇಕ್ ಶರ್ಮಾ 80 ರನ್‌ಗಳ ಜತೆಯಾಟವನ್ನಾಡಿದರು. 5.4 ಓವರ್ ಸಮಯಕ್ಕೆ ಇಶಾನ್ ಕಿಶನ್ 20 ಎಸೆತಗಳಲ್ಲಿ 2 ಬೌಂಡರಿ ಹಾಗೂ 7 ಸಿಕ್ಸರ್ ಸಹಿತ 53 ರನ್ ಬಾರಿಸಿದ್ದಾಗ ರಿಟೈರ್ಡ್ ಹರ್ಟ್ ಆದರು. ಬೆನ್ನಲ್ಲೇ 24 ರನ್ ಕಲೆಹಾಕಿದ್ದ ಅಭಿಷೇಕ್ ಶರ್ಮಾ ಸಹ ರಿಟೈರ್ಡ್ ಹರ್ಟ್ ಆದರು. ಬಳಿಕ ತಿಲಕ್ ವರ್ಮಾ 19 ಎಸೆತಗಳಲ್ಲಿ 3 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 45 ರನ್ ಬಾರಿಸಿದರೆ, ನಾಯಕ ಸೂರ್ಯಕುಮಾರ್ ಯಾದವ್ 30 ರನ್ ಬಾರಿಸಿದರು. ಇನ್ನುಳಿದಂತೆ ರಿಂಕು ಸಿಂಗ್ 16 ರನ್ ಗಳಿಸಿದರೆ, ಅಕ್ಷರ್ ಪಟೇಲ್ ಅಜೇಯ 35 ರನ್ ಬಾರಿಸಿದರು, ಯಾವುದೇ ರನ್ ಗಳಿಸದ ಹರ್ಷಿತ್ ರಾಣಾ ಅಜೇಯರಾಗಿ ಉಳಿದರು. ತಿಲಕ್ ವರ್ಮಾ ವಿಕೆಟ್ ಬಿದ್ದ ಬಳಿಕ ರನ್ ವೇಗದಲ್ಲಿ ಕುಸಿತ ಕಂಡಿದ್ದ ಭಾರತಕ್ಕೆ ಏಳನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಹಾರ್ದಿಕ್ ಪಾಂಡ್ಯ 10 ಎಸೆತಗಳಲ್ಲಿ 2 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 30 ರನ್ ಚಚ್ಚಿ ಬೃಹತ್ ಸುಧಾರಣೆ ತಂದರು.
ದಕ್ಷಿಣ ಆಫ್ರಿಕಾದ ಪರ ಮಾರ್ಕೊ ಯಾನ್‌ಸೆನ್, ಕಾರ್ಬಿನ್ ಬಾಷ್, ಅನ್ರಿಚ್ ನಾರ್ಕಿಯಾ ಹಾಗೂ ಮಫಾಕಾ ತಲಾ ಒಂದೊಂದು ವಿಕೆಟ್ ಪಡೆದರು.
ದಕ್ಷಿಣ ಆಫ್ರಿಕಾ ಇನ್ನಿಂಗ್ಸ್: ತಂಡದ ಪರ ಆರಂಭಿಕನಾಗಿ ಕಣಕ್ಕಿಳಿದ ಜಾರ್ಜ್ ಲಿಂಡೆ ಡಕ್‌ಔಟ್ ಆಗುವ ಮೂಲಕ ಆರಂಭಿಕ ಹಿನ್ನಡೆ ಅನುಭವಿಸಿತು. ಬಳಿಕ ಎರಡನೇ ವಿಕೆಟ್‌ಗೆ ಒಂದಾದ ನಾಯಕ ಏಡನ್ ಮಾರ್ಕ್ರಮ್ ಹಾಗೂ ರಿಕೆಲ್ಟನ್ 65 ರನ್‌ಗಳ ಜತೆಯಾಟವನ್ನಾಡಿದರು. 19 ಎಸೆತಕ್ಕೆ 38 ರನ್ ಗಳಿಸಿದ್ದ ಮಾರ್ಕ್ರಮ್ ರಿಟೈರ್ಡ್ ಹರ್ಟ್ ಆದರು. ರಿಕೆಲ್ಟನ್ 21 ಎಸೆತಕ್ಕೆ 44 ರನ್ ಬಾರಿಸಿದರು. ಇನ್ನುಳಿದಂತೆ ಡಿವಾಲ್ಡ್ ಬ್ರೆವಿಸ್ 2 ಹಾಗೂ ಡೇವಿಡ್ ಮಿಲ್ಲರ್ 13 ರನ್ ಗಳಿಸುವ ಮೂಲಕ ನಿರಾಸೆ ಮೂಡಿಸಿದರು. ಜೇಸನ್ ಸ್ಮಿತ್ 35 ರನ್, ಮಾರ್ಕೊ ಯಾನ್ಸೆನ್ 16ಕ್ಕೆ 31 ರನ್ ಹಾಗೂ ಟ್ರಿಸ್ಟನ್ ಸ್ಟಬ್ಸ್ 21ಕ್ಕೆ ಅಜೇಯ 45 ರನ್ ಗಳಿಸಿದರಾದರೂ ತಂಡವನ್ನು ಗೆಲುವಿನತ್ತ ಕೊಂಡೊಯ್ಯಲಾಗಿಲ್ಲ. ಕಾರ್ಬಿನ್ ಬಾಷ್ ಅಜೇಯ 2 ರನ್ ಕಲೆಹಾಕಿದರು.
ಭಾರತದ ಪರ ಅಭಿಷೇಕ್ ಶರ್ಮಾ ಎರಡು ವಿಕೆಟ್, ಅಕ್ಷರ್ ಪಟೇಲ್, ಶಿವಮ್ ದುಬೆ, ವರುಣ್ ಚಕ್ರವರ್ತಿ ಹಾಗೂ ಅರ್ಷ್‌ದೀಪ್ ಸಿಂಗ್ ತಲಾ ಒಂದೊಂದು ವಿಕೆಟ್ ಪಡೆದರು.

