ಹಿಂದೂ ವಿವಾಹ ಕಾಯ್ದೆಯಡಿ ಮದುವೆಯು ಕೇವಲ ಒಂದು “ವಾಣಿಜ್ಯ ಒಪ್ಪಂದ” ಅಥವಾ “ಹಾಡು-ಕುಣಿತದ ಕಾರ್ಯಕ್ರಮ”ವಲ್ಲ, ಬದಲಾಗಿ ಅದು ಒಂದು ಪವಿತ್ರ ಸಂಸ್ಕಾರ (Sacrament) ಎಂದು ಸುಪ್ರೀಂ ಕೋರ್ಟ್ ಒತ್ತಿ ಹೇಳಿದೆ. ಕೇವಲ ನೋಂದಣಿ ಪ್ರಮಾಣಪತ್ರ (Marriage Certificate) ಹೊಂದಿದ್ದ ತಕ್ಷಣ ಒಬ್ಬ ಪುರುಷ ಮತ್ತು ಮಹಿಳೆ ಕಾನೂನಾತ್ಮಕವಾಗಿ ಗಂಡ-ಹೆಂಡತಿಯಾಗುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಹೌದು.ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 7 ರ ಪ್ರಕಾರ, ಮದುವೆಯು ಮಾನ್ಯವಾಗಬೇಕಾದರೆ ಸೂಕ್ತವಾದ ಆಚರಣೆಗಳು ಮತ್ತು ಶಾಸ್ತ್ರಗಳು (ಸಪ್ತಪದಿಯಂತಹ ವಿಧಿಗಳು) ನಡೆಯಲೇಬೇಕು. ಇವುಗಳು ನಡೆಯದಿದ್ದರೆ ಆ ಮದುವೆಯನ್ನು ‘ಸೋಲೆಮನೈಸ್ಡ್’ ಎಂದು ಕರೆಯಲು ಸಾಧ್ಯವಿಲ್ಲ. ಹಿಂದೂ ವಿವಾಹ ಕಾಯ್ದೆಯಡಿ ವಿವಾಹವು ಮಾನ್ಯವಾಗಬೇಕಾದರೆ ಕೇವಲ ಸರ್ಕಾರಿ ನೋಂದಣಿ ಪ್ರಮಾಣಪತ್ರವಿದ್ದರೆ ಸಾಲದು, ಬದಲಾಗಿ ಮದುವೆಯ ಧಾರ್ಮಿಕ ವಿಧಿವಿಧಾನಗಳು ಕಡ್ಡಾಯವಾಗಿ ನಡೆದಿರಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ನೋಂದಣಿ ಪ್ರಮಾಣಪತ್ರದ ಮಿತಿ: ಮದುವೆಯ ನೋಂದಣಿ (Section 8) ಕೇವಲ ಆ ಮದುವೆ ನಡೆದಿದೆ ಎಂಬುದಕ್ಕೆ ಪುರಾವೆಯಾಗಿ ಕೆಲಸ ಮಾಡುತ್ತದೆ. ಆದರೆ, ಮೂಲಭೂತವಾಗಿ ಮದುವೆಯೇ ನಡೆಯದಿದ್ದ ಪಕ್ಷದಲ್ಲಿ, ಆ ನೋಂದಣಿ ಪ್ರಮಾಣಪತ್ರಕ್ಕೆ ಯಾವುದೇ ಕಾನೂನು ಮಾನ್ಯತೆ ಇರುವುದಿಲ್ಲ.
ಪ್ರಕರಣದ ಹಿನ್ನೆಲೆ (ಡಾಲಿ ರಾಣಿ v/s ಮನೀಶ್ ಕುಮಾರ್): ಈ ಪ್ರಕರಣದಲ್ಲಿ ಇಬ್ಬರು ಪೈಲಟ್ಗಳು ಖಾಸಗಿ ಸಂಸ್ಥೆಯೊಂದರಿಂದ ಮದುವೆ ಪ್ರಮಾಣಪತ್ರ ಪಡೆದಿದ್ದರು. ಆದರೆ, ಅವರಿಬ್ಬರ ನಡುವೆ ಭಿನ್ನಾಭಿಪ್ರಾಯ ಉಂಟಾಗಿ ವಿವಾಹ ವಿಚ್ಛೇದನಕ್ಕೆ ಅರ್ಜಿ ಸಲ್ಲಿಕೆಯಾಗಿತ್ತು. ಆದರೆ, ವಾಸ್ತವದಲ್ಲಿ ಅವರ ನಡುವೆ ಯಾವುದೇ ಹಿಂದೂ ಸಂಪ್ರದಾಯದ ಮದುವೆ ನಡೆದಿರಲಿಲ್ಲ. ಈ ಹಿನ್ನೆಲೆಯಲ್ಲಿ, ಸಂವಿಧಾನದ 142ನೇ ವಿಧಿಯಡಿ ತನ್ನ ವಿಶೇಷ ಅಧಿಕಾರ ಬಳಸಿ ಸುಪ್ರೀಂ ಕೋರ್ಟ್, “ಇಲ್ಲಿ ಮದುವೆಯೇ ನಡೆದಿಲ್ಲ” ಎಂದು ಘೋಷಿಸಿ ಎಲ್ಲ ಪ್ರಕರಣಗಳನ್ನು ವಜಾಗೊಳಿಸಿತು.
ವೀಸಾ ಪಡೆಯಲು ಅಥವಾ ಇನ್ಯಾವುದೋ ಪ್ರಾಯೋಗಿಕ ಕಾರಣಗಳಿಗಾಗಿ ಮದುವೆಯಾಗದೆಯೇ ಪ್ರಮಾಣಪತ್ರ ಪಡೆಯುವ ಟ್ರೆಂಡ್ ಬಗ್ಗೆ ನ್ಯಾಯಾಲಯ ಆತಂಕ ವ್ಯಕ್ತಪಡಿಸಿದೆ. ಮದುವೆ ಎಂಬುದು ಕೇವಲ ‘ಜಂಟಿ ಬ್ಯಾಂಕ್ ಖಾತೆ’ ಅಥವಾ ‘ವೀಸಾ’ ಪಡೆಯುವ ಮಾರ್ಗವಲ್ಲ, ಅದು ಭಾರತೀಯ ಸಮಾಜದ ಬುನಾದಿ ಎಂದು ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಅಗಸ್ಟಿನ್ ಜಾರ್ಜ್ ಮಸಿಹ್ ಅವರ ಪೀಠವು ಹೇಳಿದೆ.
ಯುವ ಪೀಳಿಗೆಗೆ ಎಚ್ಚರಿಕೆ: ಇತ್ತೀಚಿನ ದಿನಗಳಲ್ಲಿ ವೀಸಾ ಪಡೆಯಲು ಅಥವಾ ಕೆಲಸದ ಸೌಲಭ್ಯಗಳಿಗಾಗಿ ಮದುವೆ ಮಾಡಿಕೊಳ್ಳುವ ಮೊದಲೇ ನೋಂದಣಿ ಪ್ರಮಾಣಪತ್ರ ಪಡೆಯುವ ಪ್ರವೃತ್ತಿ ಹೆಚ್ಚುತ್ತಿದೆ. ಇಂತಹ ಅಭ್ಯಾಸಗಳು ಕಾನೂನುಬಾಹಿರ ಮತ್ತು ಅಪಾಯಕಾರಿ ಎಂದು ನ್ಯಾಯಾಲಯ ಕಳವಳ ವ್ಯಕ್ತಪಡಿಸಿದೆ.

