ಬಾಲಿವುಡ್ ಫೈರ್ಬ್ರಾಂಡ್ ನಟಿ ಕಂಗನಾ ರಣಾವತ್ ಸೌತ್ ಚಿತ್ರರಂಗಕ್ಕೆ ಮರಳುತ್ತಿದ್ದಾರೆ ಎಂಬ ವರದಿಗಳು ಸದ್ಯ ಚಿತ್ರರಂಗದಲ್ಲಿ ಭಾರೀ ಕುತೂಹಲ ಮೂಡಿಸಿವೆ. ತೆಲುಗಿನ ಪ್ರಸಿದ್ಧ ನಿರ್ದೇಶಕ ರವಿಬಾಬು ನಿರ್ದೇಶನದ ಹೊಸ ಹಾರರ್ ಸಿನಿಮಾದಲ್ಲಿ ಕಂಗನಾ ರಣಾವತ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾತುಗಳು ಟಾಲಿವುಡ್ ವಲಯದಲ್ಲಿ ಬಿಸಿಯಾಗಿ ಹರಿದಾಡುತ್ತಿವೆ.
ಈ ಪ್ರಾಜೆಕ್ಟ್ ಕುರಿತು ಯಾವುದೇ ಅಧಿಕೃತ ಘೋಷಣೆ ಹೊರಬಿದ್ದಿಲ್ಲವಾದರೂ, ಚಿತ್ರದ ಶೂಟಿಂಗ್ ಸೈಲೆಂಟ್ ಆಗಿ ನಡೆಯುತ್ತಿದೆ ಎನ್ನಲಾಗಿದೆ. ಒಂದು ವೇಳೆ ಈ ವರದಿ ನಿಜವಾದರೆ, ಸುಮಾರು ೧೭ ವರ್ಷಗಳ ಸುದೀರ್ಘ ವಿರಾಮದ ನಂತರ ಕಂಗನಾ ರಣಾವತ್ ತೆಲುಗು ಚಿತ್ರರಂಗಕ್ಕೆ ಪ್ರವೇಶಿಸಿದಂತಾಗುತ್ತದೆ. ರವಿಬಾಬು ಅವರು ಹಾರರ್ ಸಿನಿಮಾಗಳನ್ನು ತೆರೆಮೇಲೆ ತರುವಲ್ಲಿ ತಮ್ಮದೇ ಆದ ವಿಶಿಷ್ಟ ಶೈಲಿ ಹೊಂದಿದ್ದು, ಈ ಕಾಂಬಿನೇಷನ್ ಪ್ರೇಕ್ಷಕರಲ್ಲಿ ಭಾರೀ ನಿರೀಕ್ಷೆ ಹುಟ್ಟುಹಾಕಿದೆ.
ಇನ್ನೊಂದೆಡೆ, ಕಂಗನಾ ರಣಾವತ್ ಕೈಯಲ್ಲಿ ಸಾಲು ಸಾಲು ಸಿನಿಮಾಗಳಿವೆ. ಕಂಟೆಂಟ್ ಆಧಾರಿತ ‘ಸರ್ಕಲ್’, ಸೂಪರ್ ಹಿಟ್ ಚಿತ್ರದ ಮುಂದುವರಿದ ಭಾಗಗಳಾದ ‘ಕ್ವೀನ್ 2’ ಮತ್ತು ‘ತನು ವೆಡ್ಸ್ ಮನು 3’ ಸೇರಿದಂತೆ ಹಲವು ಪ್ರಮುಖ ಸಿನಿಮಾಗಳಲ್ಲಿ ಅವರು ಬ್ಯುಸಿಯಾಗಿದ್ದಾರೆ. ಈ ನಡುವೆ ತೆಲುಗಿನ ಈ ಹಾರರ್ ಪ್ರಾಜೆಕ್ಟ್ ಅಭಿಮಾನಿಗಳಿಗೆ ನಿಜಕ್ಕೂ ಅಚ್ಚರಿ ತಂದಿದ್ದು, ಅಧಿಕೃತ ಮಾಹಿತಿಗಾಗಿ ಸಿನಿಕಲಾರಸಿಕರು ಕಾಯುತ್ತಿದ್ದಾರೆ.

