ಹಾಸನ: ಐದು ತಿಂಗಳ ಕಾಲ ಯುವತಿಯೊಂದಿಗೆ ಲಿವ್-ಇನ್ ಸಂಬಂಧದಲ್ಲಿದ್ದ ಯುವಕನೊಬ್ಬ ಆಕೆಗೆ ಕೈಕೊಟ್ಟು ನಾಪತ್ತೆಯಾಗಿದ್ದು, ಇದರಿಂದ ಮನನೊಂದ ಯುವತಿ ಯುವಕನ ಮನೆ ಮುಂದೆ ಏಕಾಂಗಿಯಾಗಿ ಧರಣಿ ನಡೆಸಿರುವ ಘಟನೆ ಹಾಸನದಲ್ಲಿ ನಡೆದಿದೆ.
ಮಳೆ ಧಾರಾಕಾರವಾಗಿ ಸುರಿದರೂ ಧರಣಿ ಕೈಬಿಡದ ಯುವತಿ ಬಿರುಗಾಳಿ, ಮಳೆಗೂ ಅಂಜದೆ ಹಗಲು-ರಾತ್ರಿ ಯುವಕನ ಮನೆ ಮುಂದೆ ಪ್ರತುಭಟನೆ ನಡೆಸಿದ್ದಾಳೆ.
ಮದುವೆಯಾಗುವುದಾಗಿ ನಂಬಿಸಿ ಲಿವ್ ಇನ್ ಸಂಬಂಧದಲ್ಲಿದ್ದ ಪ್ರಿಯಕರ ತನಗೆ ಮೋಸ ಮಾಡಿ ಪರಾರಿಯಾಗಿದ್ದಾನೆಂದು ಯುವತಿ ಆರೊಪಿಸಿದ್ದಾರೆ. ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ಆದರೆ ಪೊಲೀಸರು ಸೀಊಕ್ತ ನ್ಯಾಯಕೊಡಿಸದ ಕಾರಣಕ್ಕೆ ಬೇಸತ್ತ ಯುವತಿ ತಲೆಮರೆಸಿಕೊಂಡಿರುವ ಪ್ರಿಯಕರನ ಹಾಸನದಲ್ಲಿರುವ ಮನೆ ಎದುರು ಧರಣಿ ನಡೆಸುತ್ತಿದ್ದಾಳೆ.
ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಕಾಸರಗೋಡು ಮೂಲದ ಯುವತಿ ಹಾಗೂ ಹಾಸನ ಜಿಲ್ಲೆಯ ಕಲ್ಲೇಸೋಮನಹಳ್ಳಿಯ ಸೂರ್ಯ (26) ಪರಸ್ಪರ ಪ್ರೀತಿಸುತ್ತಿದ್ದರು. ಕಳೆದ ಐದು ತಿಂಗಳಿಂದ ಬೆಂಗಳೂರಿನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದ ಇವರ ಮದುವೆಗೆ ಸೂರ್ಯನ ಪೋಷಕರೂ ಆರಂಭದಲ್ಲಿ ಒಪ್ಪಿದ್ದರು. ಆದರೆ ಕೆಲ ದಿನಗಳ ಬಳಿಕ ಸೂರ್ಯನ ಪೋಷಕರಾದ ರಾಜಕುಮಾರ್ ಮತ್ತು ಪ್ರೇಮ್‌ಕುಮಾರಿ ಯುವತಿ ಬೇರೆ ಜಾತಿಯವಳು ಎಂಬ ವಿಷಯವನ್ನಿಟ್ಟುಕೊಂಡು ಮದುವೆ ನಿರಾಕರಿಸಿದ್ದಾರೆ. ಅಲ್ಲದೆ ಸೂರ್ಯನ ಸ್ನೇಹಿತನ ಮಾತನ್ನು ನಂಬಿ ಮದುವೆಗೆ ಒಪ್ಪುತ್ತಿಲ್ಲ ಎನ್ನಲಾಗಿದೆ.
ಪೋಷಕರ ಮಾತು ಕೇಳಿ ಸೂರ್ಯ ಆಫೀಸ್‌ಗೆಂದು ಹೋದವನು ಸೆಪ್ಟೆಂಬರ್ 24 ರಿಂದ ತಲೆಮರೆಸಿಕೊಂಡಿದ್ದ. ಪ್ರಿಯಕರ ಕೈಕೊಟ್ಟಿದ್ದರಿಂದ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದ ಯುವತಿ, ಚಿಕಿತ್ಸೆಯ ಬಳಿಕ ಗುಣಮುಖಳಾಗಿದ್ದು, ಈಗ ನ್ಯಾಯಕ್ಕಾಗಿ ಹೋರಾಟಕ್ಕಿಳಿದಿದ್ದಾಳೆ.
ಯುವತಿ ಲೈಂಗಿಕ ದೌರ್ಜನ್ಯ ಎಸಗಿ ಮೋಸ ಮಾಡಿರುವ ಬಗ್ಗೆ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕಳೆದ ಅಕ್ಟೋಬರ್ 22 ರಂದು ಯುವತಿ ಚನ್ನರಾಯಪಟ್ಟಣಕ್ಕೆ ಆಗಮಿಸಿದ್ದಾಗ, ಗ್ರಾಮಾಂತರ ಪೊಲೀಸರು ಮಧ್ಯಪ್ರವೇಶಿಸಿ ಪೋಷಕರೊಂದಿಗೆ ಮಾತುಕತೆ ನಡೆಸಿದ್ದರು. ಭಾನುವಾರದೊಳಗೆ ಮಗನನ್ನು ಕರೆಸುವುದಾಗಿ ಹೇಳಿದ್ದ ಪೋಷಕರು, ಇದೀಗ ಮನೆಗೆ ಬೀಗ ಹಾಕಿ ಅವರೂ ಎಸ್ಕೇಪ್ ಆಗಿದ್ದಾರೆ. ಇದರಿಂದ ಕಂಗಾಲಾದ ಯುವತಿ, ಗಾಳಿ, ಮಳೆ ಲೆಕ್ಕಿಸದೆ ಪ್ರಿಯಕರನ ಮನೆ ಮುಂಭಾಗ ಧರಣಿ ಕುಳಿತು ಆಕ್ರೋಶ ವ್ಯಕ್ತಪಡಿಸಿದಾಳೆ.

