ಭಾರತೀಯ ಅಡುಗೆಯಲ್ಲಿ ಚಟ್ನಿಗೆ ವಿಶೇಷ ಸ್ಥಾನವಿದೆ. ಬಿಸಿ ಅನ್ನ-ಸಾರು ಇರಲಿ ಅಥವಾ ಚಪಾತಿ-ಪರೋಟ ಇರಲಿ, ಒಂದು ಚಮಚ ಚಟ್ನಿ ಇದ್ದರೆ ಅದರ ರುಚಿಯೇ ಬೇರೆ. ಅದರಲ್ಲೂ ಬೇಸಿಗೆ ಬಂತೆಂದರೆ ಸಾಕು, ಮಾವಿನಕಾಯಿ ಚಟ್ನಿಯ ಘಮ ಎಲ್ಲರ ಮನೆಯಲ್ಲೂ ಇರುತ್ತದೆ. ಕೆಲವರಿಗೆ ಮಾವಿನಕಾಯಿಯ ಖಾರವಾದ ಚಟ್ನಿ ಇಷ್ಟವಾದರೆ, ಇನ್ನು ಕೆಲವರಿಗೆ ಸಿಹಿ ಮತ್ತು ಹುಳಿ ಮಿಶ್ರಿತ ‘ಲೊಂಜಿ’ ಇಷ್ಟ. ಆದರೆ ಹೋಟೆಲ್ ಶೈಲಿಯ ರುಚಿ ಮತ್ತು ಹದ ಮನೆಯಲ್ಲಿ ಸಿಗುವುದು ಸ್ವಲ್ಪ ಕಷ್ಟ. ನಿಮ್ಮ ಅಡುಗೆಯಲ್ಲೂ ಮಾವಿನಕಾಯಿ ಚಟ್ನಿ ಸದಾ ರುಚಿಯಾಗಿ ಬರಬೇಕೆಂದರೆ ಈ ಕೆಳಗಿನ ಸರಳ ಸಲಹೆಗಳನ್ನು ಪಾಲಿಸಿ.
ಮಾವಿನಕಾಯಿ ಚಟ್ನಿ ಮಾಡುವಾಗ ನೆನಪಿರಲಿ ಈ ಅಂಶಗಳು:
ಸರಿಯಾದ ಮಾವಿನಕಾಯಿ ಆಯ್ಕೆ: ಚಟ್ನಿ ಮಾಡಲು ಯಾವಾಗಲೂ ಗಟ್ಟಿಯಾದ, ಹಸಿರು ಬಣ್ಣದ ಮತ್ತು ಸಂಪೂರ್ಣವಾಗಿ ಕಾಯಿಯಾಗಿರುವ ಮಾವಿನಕಾಯಿಗಳನ್ನೇ ಆರಿಸಿ. ಹಣ್ಣಾದ ಅಥವಾ ಮೆತ್ತಗಿನ ಮಾವಿನಕಾಯಿ ಬಳಸಿದರೆ ಚಟ್ನಿಯ ರುಚಿ ಮತ್ತು ಬಾಳಿಕೆ ಅವಧಿ ಕಡಿಮೆಯಾಗುತ್ತದೆ. ಮಾವಿನಕಾಯಿಯನ್ನು ತೊಳೆದು, ಒಣಗಿಸಿ ನಂತರ ಸಿಪ್ಪೆ ತೆಗೆದು ತುರಿದುಕೊಳ್ಳಿ ಅಥವಾ ಸಣ್ಣದಾಗಿ ಹೆಚ್ಚಿಕೊಳ್ಳಿ.
ರುಚಿ ಮತ್ತು ಬಣ್ಣ ಹೆಚ್ಚಿಸಲು: ಖಾರವಾದ ಮಾವಿನಕಾಯಿ ಚಟ್ನಿ ಮಾಡುವಾಗ ಅದಕ್ಕೆ ಸ್ವಲ್ಪ ಪುದೀನಾ ಮತ್ತು ಹಸಿ ಕೊತ್ತಂಬರಿ ಸೊಪ್ಪು ಸೇರಿಸಿದರೆ ರುಚಿ ದ್ವಿಗುಣಗೊಳ್ಳುತ್ತದೆ. ಚಟ್ನಿ ದೀರ್ಘಕಾಲದವರೆಗೆ ಹಸಿರು ಬಣ್ಣದಲ್ಲೇ ಇರಬೇಕೆಂದರೆ, ರುಬ್ಬುವಾಗ ಎರಡು ಐಸ್ ಕ್ಯೂಬ್‌ಗಳನ್ನು ಹಾಕಿ. ಇದು ಬಣ್ಣ ಬದಲಾಗದಂತೆ ತಡೆಯುತ್ತದೆ.
ಖಾರ ನಿಯಂತ್ರಣ: ಹಸಿಮೆಣಸಿನಕಾಯಿ ಅತಿಯಾದ ಖಾರ ನೀಡಬಾರದು ಎಂದಿದ್ದರೆ, ರುಬ್ಬುವ ಮೊದಲು ಮೆಣಸಿನಕಾಯಿಯ ಒಳಗಿರುವ ಬೀಜಗಳನ್ನು ತೆಗೆಯಿರಿ. ಇದರಿಂದ ಚಟ್ನಿಗೆ ಉತ್ತಮ ಫ್ಲೇವರ್ ಸಿಗುತ್ತದೆ ಆದರೆ ಅತಿಯಾದ ಉರಿ ಇರುವುದಿಲ್ಲ.
ಒಗ್ಗರಣೆಯ ಮ್ಯಾಜಿಕ್: ಚಟ್ನಿ ಸಿದ್ಧವಾದ ನಂತರ ಸಾಸಿವೆ ಎಣ್ಣೆಯಲ್ಲಿ ಸಾಸಿವೆ ಮತ್ತು ಕರಿಬೇವು ಹಾಕಿ ಒಗ್ಗರಣೆ ನೀಡಿ. ಇದು ಚಟ್ನಿಗೆ ಹಳ್ಳಿಯ ಸೊಗಡಿನ ರುಚಿ ನೀಡುತ್ತದೆ.
ಸಿಹಿ ಮಾವಿನಕಾಯಿ ಚಟ್ನಿ (ಲೊಂಜಿ) ಮಾಡುವುದು ಹೇಗೆ? ಸಿಹಿ ಮಾವಿನಕಾಯಿ ಚಟ್ನಿ ಮಾಡುವಾಗ ಹೆಚ್ಚಿದ ಮಾವಿನಕಾಯಿ ತುಂಡುಗಳನ್ನು ಸ್ವಲ್ಪ ನೀರಿನಲ್ಲಿ ಬೇಯಿಸಿಕೊಳ್ಳಿ. ನಂತರ ಅದಕ್ಕೆ ಬೆಲ್ಲ ಅಥವಾ ಸಕ್ಕರೆ, ಅರಿಶಿನ, ಖಾರದ ಪುಡಿ, ಗರಂ ಮಸಾಲಾ ಮತ್ತು ಜೀರಿಗೆ ಪುಡಿ ಸೇರಿಸಿ 15-20 ನಿಮಿಷ ಬೇಯಿಸಿ.
- ಬೆಲ್ಲದ ಅಳತೆ: 500 ಗ್ರಾಂ ಮಾವಿನಕಾಯಿಗೆ ಸುಮಾರು 300 ಗ್ರಾಂ ಬೆಲ್ಲ ಸೇರಿಸಿದರೆ ಹುಳಿ-ಸಿಹಿಯ ಸಮತೋಲನ ಸರಿಯಾಗಿರುತ್ತದೆ.
- ಹದ ತಿಳಿಯಿರಿ: ಬೆಲ್ಲ ಸೇರಿಸಿದ ನಂತರ ಅತಿಯಾಗಿ ಬೇಯಿಸಬೇಡಿ. ಚಟ್ನಿ ತಣ್ಣಗಾದ ಮೇಲೆ ಮತ್ತಷ್ಟು ಗಟ್ಟಿಯಾಗುವುದರಿಂದ ಸ್ವಲ್ಪ ದ್ರವ ರೂಪದಲ್ಲಿರುವಾಗಲೇ ಗ್ಯಾಸ್ ಆಫ್ ಮಾಡಿ.
ಈ ರೀತಿ ತಯಾರಿಸಿದ ಮಾವಿನಕಾಯಿ ಚಟ್ನಿಯನ್ನು ಗಾಳಿಯಾಡದ ಡಬ್ಬದಲ್ಲಿಟ್ಟು ಫ್ರಿಡ್ಜ್‌ನಲ್ಲಿಟ್ಟರೆ 10 ರಿಂದ 12 ದಿನಗಳ ಕಾಲ ಬಳಸಬಹುದು. ಈ ಬೇಸಿಗೆಯಲ್ಲಿ ನೀವು ಕೂಡ ಈ ಟಿಪ್ಸ್ ಬಳಸಿ ರುಚಿಯಾದ ಚಟ್ನಿ ಸವಿಯಿರಿ.

