HomeLatest Newsಖಾವಾಜಾ ಹೇಳಿಕೆ ಶೇಕಡಾ ನೂರರಷ್ಟು ಸತ್ಯ: ತನಿಖೆಯ ಪಾರದರ್ಶಕತೆ ಮತ್ತು ಹೊಣೆಗಾರಿಕೆಯ ಬಗ್ಗೆ ಪ್ರಶ್ನೆ ಎತ್ತಿದ...

ಖಾವಾಜಾ ಹೇಳಿಕೆ ಶೇಕಡಾ ನೂರರಷ್ಟು ಸತ್ಯ: ತನಿಖೆಯ ಪಾರದರ್ಶಕತೆ ಮತ್ತು ಹೊಣೆಗಾರಿಕೆಯ ಬಗ್ಗೆ ಪ್ರಶ್ನೆ ಎತ್ತಿದ ಡೇವಿಡ್ ವಾರ್ನರ್

ಆಸ್ಟ್ರೇಲಿಯಾ ಕ್ರಿಕೆಟ್ ಇತಿಹಾಸದಲ್ಲಿ ಕಪ್ಪುಚುಕ್ಕೆಯಾಗಿ ಉಳಿದಿರುವ 2018ರ ಸ್ಯಾಂಡ್‌ಪೇಪರ್ ಗೇಟ್ ವಿವಾದದ ಕುರಿತು ಮತ್ತೊಮ್ಮೆ ಚರ್ಚೆ ಮುನ್ನೆಲೆಗೆ ಬಂದಿದೆ. ಆಸ್ಟ್ರೇಲಿಯಾದ ಮಾಜಿ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಅವರು ಸಹ ಆಟಗಾರ ಉಸ್ಮಾನ್ ಖಾವಾಜಾ ಅವರ ಹೇಳಿಕೆಯನ್ನು ಬಹಿರಂಗವಾಗಿ ಬೆಂಬಲಿಸಿದ್ದು, ಅಂದು ನಡೆದ ತನಿಖೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದ್ದಾರೆ. ಎಂಟು ವರ್ಷಗಳ ಬಳಿಕ ಈ ಸತ್ಯ ಹೊರಬಂದಿರುವುದು ಸರಿಯಾದ ಬೆಳವಣಿಗೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಮಾತನಾಡಿದ ಡೇವಿಡ್ ವಾರ್ನರ್, ಉಸ್ಮಾನ್ ಖಾವಾಜಾ ನೀಡಿರುವ ಹೇಳಿಕೆಗಳು ಶೇಕಡಾ ನೂರರಷ್ಟು ಸತ್ಯ ಎಂದು ತಿಳಿಸಿದ್ದಾರೆ. ಎಂಟು ವರ್ಷಗಳ ಬಳಿಕ ಈ ವಿಷಯವನ್ನು ಈಗೇಕೆ ಪ್ರಸ್ತಾಪಿಸುತ್ತಿದ್ದೀರಿ ಮತ್ತು ಪುಸ್ತಕ ಮಾರಾಟ ಮಾಡಲು ಹೀಗೆ ಮಾಡುತ್ತಿದ್ದೀರಿ ಎಂದು ಕೆಲವರು ಪ್ರಶ್ನಿಸುತ್ತಿದ್ದಾರೆ. ಆದರೆ ಇದು ಉಸ್ಮಾನ್ ಅವರ ಸ್ವಂತ ಕಥೆ ಮತ್ತು ಅವರ ನಂಬಿಕೆಯಾಗಿದೆ ಎಂದು ವಾರ್ನರ್ ಸ್ಪಷ್ಟಪಡಿಸಿದ್ದಾರೆ. ಅಂದು ನಡೆದ ಚೆಂಡು ವಿರೂಪಗೊಳಿಸುವ ವಿವಾದದ ತನಿಖಾ ಪ್ರಕ್ರಿಯೆಯು ಅತ್ಯಂತ ಆತುರದಿಂದ ಹಾಗೂ ಸರಿಯಾಗಿ ನಡೆಸದೆ ದೋಷಪೂರಿತವಾಗಿತ್ತು ಎಂದು ಅವರು ಆರೋಪಿಸಿದ್ದಾರೆ.

ಘಟನೆ ನಡೆದ ಸಂದರ್ಭದಲ್ಲಿ ಕ್ಯಾಮೆರಾನ್ ಬಾಂಫ್ಟ್ ಪಕ್ಕದಲ್ಲೇ ಕುಳಿತಿದ್ದ ಉಸ್ಮಾನ್ ಖಾವಾಜಾ ಅವರನ್ನು ವಿಚಾರಣೆಗೆ ಒಳಪಡಿಸದೆ ಇರುವುದು ಹೇಗೆ ಸಮರ್ಥನೀಯ ಎಂದು ವಾರ್ನರ್ ಪ್ರಶ್ನಿಸಿದ್ದಾರೆ. ಇದು ಬೆರಳು ತೋರುವ ವಿಚಾರವಲ್ಲ, ಬದಲಿಗೆ ಹೊಣೆಗಾರಿಕೆ, ಪಾರದರ್ಶಕತೆ ಮತ್ತು ಸತ್ಯವನ್ನು ಬಯಲಿಗೆಳೆಯುವ ವಿಚಾರವಾಗಿದೆ ಎಂದು ಅವರು ತಿಳಿಸಿದ್ದಾರೆ. ಈ ಹಗರಣದಿಂದ ತಮ್ಮ ಕುಟುಂಬ ಹಾಗೂ ಸ್ಟೀವ್ ಸ್ಮಿತ್ ಮತ್ತು ಕ್ಯಾಮೆರಾನ್ ಬಾಂಫ್ಟ್ ಕುಟುಂಬಗಳು ಅನುಭವಿಸಿದ ಯಾತನೆಯನ್ನು ಸ್ಮರಿಸಿರುವ ವಾರ್ನರ್, ಇತ್ತೀಚೆಗೆ ತಮ್ಮ ಹನ್ನೆರಡು ವರ್ಷದ ಮಗಳು ಐವಿ ಸೇರಿದಂತೆ ಮಕ್ಕಳಿಗೆ ಅಂದು ನಡೆದ ಘಟನೆಯ ಸಂಪೂರ್ಣ ವಿವರವನ್ನು ತಿಳಿಸಬೇಕಾಯಿತು ಎಂದು ಭಾವುಕರಾಗಿದ್ದಾರೆ. ಸತ್ಯ ಏನೆಂಬುದನ್ನು ಮಕ್ಕಳಿಗೆ ವಿವರಿಸುವುದು ಬಹಳ ಕಷ್ಟಕರವಾಗಿತ್ತು ಎಂದು ಅವರು ಹೇಳಿದ್ದಾರೆ. 2018ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯದ ಸಂದರ್ಭದಲ್ಲಿ ನಡೆದ ಈ ಸ್ಯಾಂಡ್‌ಪೇಪರ್ ಗೇಟ್ ವಿವಾದದ ಕಾರಣದಿಂದ ಸ್ಟೀವ್ ಸ್ಮಿತ್ ಮತ್ತು ಡೇವಿಡ್ ವಾರ್ನರ್ ತಲಾ ಒಂದು ವರ್ಷದ ನಿಷೇಧವನ್ನು ಎದುರಿಸಬೇಕIಗಿತ್ತು ಹಾಗೂ ಕ್ಯಾಮೆರಾನ್ ಬಾಂಫ್ಟ್ ಒಂಬತ್ತು ತಿಂಗಳ ನಿಷೇಧಕ್ಕೆ ಒಳಗಾಗಿದ್ದರು ಎಂಬುದು ಇಲ್ಲಿ ಗಮನಾರ್ಹ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular