ಚಿಂತಿಸುವುದು ಮನುಷ್ಯನ ಸಹಜ ಗುಣವಾದರೂ, ಅದು ಮಿತಿ ಮೀರಿ ‘ಅತಿಯಾದ ಯೋಚನೆ’ಯಾಗಿ ಬದಲಾದಾಗ ನಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಅನಗತ್ಯ ಅಥವಾ ಅಗತ್ಯವಿಲ್ಲದ ವಿಷಯಗಳ ಬಗ್ಗೆ ಪದೇ ಪದೇ ನಿರಂತರವಾಗಿ ಆಲೋಚಿಸುವುದು ನಮ್ಮನ್ನು ಮಾನಸಿಕವಾಗಿ ಬಳಲಿಸುತ್ತದೆ. ಹಿಂದೆ ನಡೆದ ಕಹಿ ಘಟನೆಗಳು, ಭವಿಷ್ಯದ ಬಗ್ಗೆ ಇರುವ ಅಸ್ಪಷ್ಟ ಆತಂಕ, ಕೆಲಸದ ಒತ್ತಡ ಮತ್ತು ಒಂಟಿತನ ಅತಿಯಾದ ಚಿಂತೆಗೆ ಪ್ರಮುಖ ಕಾರಣಗಳಾಗಿವೆ.
ಇಂತಹ ನಕಾರಾತ್ಮಕ ಯೋಚನೆಗಳು ನಮ್ಮನ್ನು ದಾರಿ ತಪ್ಪಿಸುವುದಲ್ಲದೆ, ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯವನ್ನು ಕುಂಠಿತಗೊಳಿಸುತ್ತವೆ. ಅತಿಯಾದ ಚಿಂತೆಯು ಕೇವಲ ಗೊಂದಲಕ್ಕೆ ಸೀಮಿತವಾಗದೆ, ಕಾಲಾನಂತರದಲ್ಲಿ ಫೋಬಿಯಾ (ಅತಿಯಾದ ಭಯ) ದಂತಹ ಗಂಭೀರ ಮಾನಸಿಕ ಸಮಸ್ಯೆಗಳಿಗೆ ದಾರಿಯಾಗಬಹುದು. ಈ ಸಮಸ್ಯೆಯನ್ನು ಯಶಸ್ವಿಯಾಗಿ ನಿಭಾಯಿಸಲು ಮನಶ್ಶಾಸ್ತ್ರಜ್ಞರು ಕೆಲವು ಪರಿಣಾಮಕಾರಿ ಮತ್ತು ವೈಜ್ಞಾನಿಕ ಮಾರ್ಗಗಳನ್ನು ಸೂಚಿಸಿದ್ದಾರೆ, ಇವುಗಳನ್ನು ಅನುಸರಿಸುವ ಮೂಲಕ ನಾವು ಮಾನಸಿಕ ಶಾಂತಿಯನ್ನು ಮರಳಿ ಪಡೆಯಬಹುದು.
ಆಂತರಿಕ ಸಂಭಾಷಣೆಯನ್ನು ಬದಲಾಯಿಸಿ
ನಿಮ್ಮ ಆಂತರಿಕ ಸಂಭಾಷಣೆಯನ್ನು ಬದಲಾಯಿಸುವುದು, ಅತಿಯಾದ ಯೋಚನೆಯನ್ನು ನಿಲ್ಲಿಸಲು ಮೊದಲ ಮತ್ತು ಪ್ರಮುಖ ಹೆಜ್ಜೆಯಾಗಿದೆ. ಅತಿಯಾಗಿ ಯೋಚಿಸುವವರು ಸಾಮಾನ್ಯವಾಗಿ ತಮ್ಮೊಂದಿಗೆ ನಕಾರಾತ್ಮಕವಾಗಿ ಮಾತನಾಡಿಕೊಳ್ಳುತ್ತಾರೆ. ಈ ನಕಾರಾತ್ಮಕ ಆಲೋಚನೆಗಳು ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯವನ್ನು ಕುಗ್ಗಿಸಿ, ನಮ್ಮ ಬೆಳವಣಿಗೆಗೆ ಅಡ್ಡಿಯಾಗುತ್ತವೆ.
ಆದ್ದರಿಂದ, ನಿಮ್ಮೊಂದಿಗೆ ಮಾತನಾಡುವ ವಿಧಾನವನ್ನು ಸಕಾರಾತ್ಮಕ ಮತ್ತು ರಚನಾತ್ಮಕವಾಗಿ ಬದಲಾಯಿಸಿಕೊಳ್ಳಿ. ಪ್ರಜ್ಞಾಪೂರ್ವಕವಾಗಿ ಯೋಚನೆಗಳ ಮಾದರಿಯನ್ನು ಬದಲಾಯಿಸುವುದರಿಂದ ನಿಮ್ಮ ಮನಸ್ಥಿತಿ ಉತ್ತಮಗೊಳ್ಳುತ್ತದೆ ಮತ್ತು ಆರೋಗ್ಯಕರ ಚಿಂತನೆಗೆ ದಾರಿ ಮಾಡಿಕೊಡುತ್ತದೆ. ಇದು ಅತಿಯಾದ ಚಿಂತೆಯಿಂದ ಹೊರಬರಲು ಅತ್ಯಂತ ಪರಿಣಾಮಕಾರಿ ಮಾರ್ಗವಾಗಿದೆ.
ಆಲೋಚನೆಗಳನ್ನು ಬದಲಾಯಿಸಿ
ನಕಾರಾತ್ಮಕ ಆಲೋಚನೆಗಳನ್ನು ನಿಯಂತ್ರಿಸುವುದು ಅತಿಯಾದ ಚಿಂತನೆಯನ್ನು ನಿಲ್ಲಿಸಲು ಒಂದು ಪರಿಣಾಮಕಾರಿ ಮಾರ್ಗ. ಸಾಮಾನ್ಯವಾಗಿ, ನಾವು ಯಾವ ವಿಷಯಗಳ ಬಗ್ಗೆ ಯೋಚಿಸಬಾರದು ಎಂದು ನಿರ್ಧರಿಸುತ್ತೇವೆಯೋ, ಅದೇ ಆಲೋಚನೆಗಳು ನಮ್ಮ ಮನಸ್ಸನ್ನು ಆವರಿಸುತ್ತವೆ.ಇದಕ್ಕೆ ಪರಿಹಾರವೆಂದರೆ, ಆ ನಕಾರಾತ್ಮಕ ಆಲೋಚನೆಗಳ ಜಾಗದಲ್ಲಿ ಸಕಾರಾತ್ಮಕ ಮತ್ತು ರಚನಾತ್ಮಕ ಆಲೋಚನೆಗಳನ್ನು ತುಂಬುವುದು. ಉದಾಹರಣೆಗೆ, ಸೋಲಿನ ಭಯ ಕಾಡಿದಾಗ, ಅದರ ಬದಲು ಗೆಲುವಿನ ಕುರಿತು ಅಥವಾ ನಿಮ್ಮ ಸಾಮರ್ಥ್ಯದ ಕುರಿತು ಯೋಚಿಸಿ. ಉಸಿರಾಟದ ಮೇಲೆ ಗಮನ ಹರಿಸುವುದು ಕೂಡ ಮನಸ್ಸನ್ನು ನಿಯಂತ್ರಿಸಲು ಮತ್ತು ಆಲೋಚನೆಗಳನ್ನು ಬದಲಾಯಿಸಲು ಸಹಾಯ ಮಾಡುತ್ತದೆ.
ಹಿಂದಿನದನ್ನು ಬಿಟ್ಟು ಬಿಡುವುದು
ಅತಿಯಾದ ಚಿಂತನೆಯನ್ನು ನಿಲ್ಲಿಸಲು ಇರುವ ಅತ್ಯಂತ ಮುಖ್ಯ ವಿಧಾನವೆಂದರೆ, ಹಿಂದಿನದನ್ನು ಒಪ್ಪಿಕೊಂಡು ಬಿಡುವುದು. ಭೂತಕಾಲದಲ್ಲಿ ಏನೇ ನಡೆದಿದ್ದರೂ ಅದನ್ನು ಬದಲಾಯಿಸಲು ಸಾಧ್ಯವಿಲ್ಲ ಎಂಬುದನ್ನು ನೀವು ಒಪ್ಪಿಕೊಳ್ಳಬೇಕು. ಹಿಂದಿನ ಕಹಿ ಘಟನೆಗಳ ಬಗ್ಗೆ ಯೋಚಿಸುವ ಬದಲು, ಅದರಿಂದ ನೀವು ಕಲಿತ ಪಾಠಗಳ ಕಡೆಗೆ ಗಮನ ಹರಿಸಿ.ಹಿಂದೆ ಮಾಡಿದ ತಪ್ಪುಗಳಿಂದ ಪಾಠ ಕಲಿತು, ಅದನ್ನು ಭವಿಷ್ಯದಲ್ಲಿ ಉತ್ತಮ ಅವಕಾಶವಾಗಿ ಪರಿವರ್ತಿಸಿಕೊಳ್ಳಿ. ಈ ಹಿಂದೆ ನಡೆದ ಕೆಟ್ಟ ಘಟನೆಗಳು ಮತ್ತೆ ಮರುಕಳಿಸದಂತೆ ಎಚ್ಚರಿಕೆ ವಹಿಸುವುದೇ ನಿಮ್ಮ ಮುಂದಿನ ಗುರಿಯಾಗಿರಬೇಕು. ಈ ರೀತಿ ವರ್ತಮಾನದಲ್ಲಿ ಬದುಕುವುದರಿಂದ ಮತ್ತು ಹಿಂದಿನದನ್ನು ಬಿಟ್ಟುಬಿಡುವುದರಿಂದ ಮನಸ್ಸಿಗೆ ಶಾಂತಿ ಸಿಗುತ್ತದೆ.
.
ಅತಿಯಾದ ಯೋಚನೆ ಮತ್ತು ನಿದ್ರೆ
ಅತಿಯಾದ ಯೋಚನೆಯು ನಿಮ್ಮ ನಿದ್ರೆಗೆ ಭಂಗ ತರುವ ಒಂದು ಪ್ರಮುಖ ಕಾರಣ. ಆಗಾಗ್ಗೆ ರಾತ್ರಿಯಿಡೀ ನಿದ್ದೆ ಬಾರದೆ, ಆಲೋಚನೆಗಳ ಸುಳಿಯಲ್ಲಿ ಸಿಲುಕಿಕೊಂಡಿರುವುದು ಇದೇ ಕಾರಣಕ್ಕೆ. ಆತಂಕ ಮತ್ತು ಖಿನ್ನತೆಯಂತಹ ಮಾನಸಿಕ ಸಮಸ್ಯೆಗಳು ಕೂಡ ನಿದ್ರೆಯ ಗುಣಮಟ್ಟವನ್ನು ಹಾಳುಮಾಡುತ್ತವೆ. ನಿದ್ರಾಹೀನತೆಯು ಕೇವಲ ದೈಹಿಕ ಆರೋಗ್ಯವನ್ನಷ್ಟೇ ಅಲ್ಲ, ನಿಮ್ಮ ಮಾನಸಿಕ ಆರೋಗ್ಯವನ್ನೂ ಹದಗೆಡಿಸುತ್ತದೆ.ಒಂದು ವೇಳೆ ನೀವು ಅತಿಯಾಗಿ ಯೋಚಿಸುವ ಸಮಸ್ಯೆಯಿಂದ ಬಳಲುತ್ತಿದ್ದರೆ, ಅದರ ಹಿಂದಿನ ಕಾರಣಗಳನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ.ಮಲಗುವ ಮುನ್ನ ನಿಮ್ಮ ಮನಸ್ಸಿನಲ್ಲಿರುವ ಆಲೋಚನೆಗಳು ಮತ್ತು ಚಿಂತೆಗಳನ್ನು ಒಂದು ಡೈರಿಯಲ್ಲಿ ಬರೆಯಿರಿ. ಇದು ನಿಮ್ಮ ಮನಸ್ಸನ್ನು ಹಗುರಗೊಳಿಸಲು ಸಹಾಯ ಮಾಡುತ್ತದೆ.
ವಿಶ್ರಾಂತಿ ಮಾಡುವುದು
ಅತಿಯಾದ ಯೋಚನೆ ಮತ್ತು ಆತಂಕ ಪರಸ್ಪರ ಸಂಬಂಧ ಹೊಂದಿವೆ. ಅತಿಯಾಗಿ ಯೋಚಿಸುವುದು ಆತಂಕವನ್ನು ಹೆಚ್ಚಿಸುತ್ತದೆ, ಮತ್ತು ಆ ಆತಂಕದ ಭಾವನೆಯು ಮತ್ತೆ ಅತಿಯಾದ ಯೋಚನೆಗೆ ದಾರಿ ಮಾಡಿಕೊಡುತ್ತದೆ. ಈ ಚಕ್ರವನ್ನು ಮುರಿಯಲು ವಿಶ್ರಾಂತಿ ತಂತ್ರಗಳು ಪರಿಣಾಮಕಾರಿ.ಸಂಗೀತ ಕೇಳುವುದು, ಪುಸ್ತಕ ಓದುವುದು ಅಥವಾ ನಿಮಗೆ ಸಂತೋಷ ನೀಡುವ ಯಾವುದೇ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದು ಯೋಚನೆಗಳನ್ನು ದೂರವಿಡಲು ಸಹಾಯ ಮಾಡುತ್ತದೆ. ಆಳವಾಗಿ ಉಸಿರು ತೆಗೆದುಕೊಂಡು ನಿಧಾನವಾಗಿ ಬಿಡುವುದರಿಂದ ಮನಸ್ಸು ಶಾಂತವಾಗುತ್ತದೆ.
ಅತಿಯಾದ ಯೋಚನೆಯಿಂದ ಉಂಟಾಗುವ ಪ್ರಮುಖ ಆರೋಗ್ಯ ಸಮಸ್ಯೆಗಳು ಇಲ್ಲಿವೆ:
ಸ್ನಾಯು ನೋವು,ಸ್ನಾಯುವಿನ ಒತ್ತಡ,ತ್ವರಿತ ಉಸಿರಾಟ ,ಬೆವರುವುದು,ನಡುಕ ಮತ್ತು ಸೆಳೆತ,ಸಿಡುಕುತನ,ಆಯಾಸ,ತಲೆನೋವು,ವೇಗದ ಹೃದಯ ಬಡಿತ,ಅಕಾಲಿಕ ಪರಿಧಮನಿಯ ಕಾಯಿಲೆ,ಹೃದಯಾಘಾತ,ಆತ್ಮಹತ್ಯೆ

