ಆಟವಾಡಲು ಮನೆಯಿಂದ ಹೊರಟ ನಾಲ್ಕು ವರ್ಷದ ಬಾಲಕನೊಬ್ಬ ತೆರೆದಿದ್ದ ಮ್ಯಾನ್ಹೋಲ್ಗೆ ಬಿದ್ದ ಘಟನೆ ದೆಹಲಿಯ ನಂಗ್ಲಿ ವಿಹಾರ್ ಪ್ರದೇಶದಲ್ಲಿ ನಡೆದಿದೆ. ಮಗನಿಗಾಗಿ ಪೋಷಕರು ಆತಂಕದಿಂದ ಕಾಯುತ್ತಿದ್ದರೆ, ಆತನನ್ನು ಸುರಕ್ಷಿತವಾಗಿ ಹೊರತರಲು ಹಲವು ರಕ್ಷಣಾ ತಂಡಗಳು ಹಗಲಿರುಳು ಕಾರ್ಯಾಚರಣೆ ನಡೆಸುತ್ತಿವೆ.
ಇಮ್ರಾನ್ ಎಂಬ ನಾಲ್ಕು ವರ್ಷದ ಬಾಲಕ ತನ್ನ ತಾಯಿಯೊಂದಿಗೆ ಪಾರ್ಕ್ಗೆ ಆಟವಾಡಲು ತೆರಳಿದ್ದ. ಈ ವೇಳೆ ಶೌಚಕ್ಕೆ ಹೋಗಲು ಚರಂಡಿ ಸಮೀಪಕ್ಕೆ ತೆರಳಿದ್ದಾಗ ತೆರೆದಿದ್ದ ಮ್ಯಾನ್ಹೋಲ್ಗೆ ಆಕಸ್ಮಿಕವಾಗಿ ಬಿದ್ದಿದ್ದಾನೆ ಎನ್ನಲಾಗಿದೆ. ಘಟನೆ ತಿಳಿಯುತ್ತಿದ್ದಂತೆ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ದೆಹಲಿಯ ಹೊರವಲಯದಲ್ಲಿರುವ ದಾಸ್ ಗಾರ್ಡನ್ ಕಾಲೋನಿ ಸಮೀಪ ಈ ಘಟನೆ ನಡೆದಿದೆ. ಬಾಲಕನ ತಂದೆ ಖುರ್ಷಿದ್ ಆಲಂ ಅವರು ತಮ್ಮ ಮಗ ಇಮ್ರಾನ್ ಪಾರ್ಕ್ನಲ್ಲಿ ಆಟವಾಡಲು ಬಂದಿದ್ದ. ಬಳಿಕ ಶೌಚಕ್ಕೆ ತೆರಳಲು ಚರಂಡಿ ಬಳಿ ಹೋದಾಗ ತೆರೆದಿದ್ದ ಮ್ಯಾನ್ಹೋಲ್ಗೆ ಬಿದ್ದಿದ್ದಾನೆ ಎಂದು ತಿಳಿಸಿದ್ದಾರೆ.
‘ನನ್ನ ಮಗ ಆಟವಾಡಲು ಪಾರ್ಕ್ಗೆ ಬಂದಿದ್ದ. ಚರಂಡಿ ಬಳಿ ಹೋದಾಗ ಮ್ಯಾನ್ಹೋಲ್ ತೆರೆದಿತ್ತು. ಅದರೊಳಗೆ ಬಿದ್ದಿದ್ದಾನೆ. ಈಗ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ’ ಎಂದು ತಂದೆ ನೋವು ತೋಡಿಕೊಂಡಿದ್ದಾರೆ.
NDRF, BSF ಸೇರಿ ಹಲವು ತಂಡಗಳಿಂದ ಶೋಧ
ಬೆಳಗ್ಗೆ 9.45ರ ಸುಮಾರಿಗೆ ಘಟನೆ ಕುರಿತು ಅಗ್ನಿಶಾಮಕ ದಳಕ್ಕೆ ಮಾಹಿತಿ ಬಂದಿತ್ತು. ತಕ್ಷಣವೇ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ.
ಬಾಲಕನನ್ನು ಪತ್ತೆಹಚ್ಚಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF), ದೆಹಲಿ ಅಗ್ನಿಶಾಮಕ ದಳ, ದೆಹಲಿ ಪೊಲೀಸರು, ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ (DDMA) ಮತ್ತು ಗಡಿ ಭದ್ರತಾ ಪಡೆ (BSF) ತಂಡಗಳನ್ನು ನಿಯೋಜಿಸಲಾಗಿದೆ. ಚರಂಡಿಯೊಳಗೆ ಬಾಲಕನಿಗಾಗಿ ಹುಡುಕಾಟ ನಡೆಸಲಾಗುತ್ತಿದ್ದು, ವಿಶೇಷ ಸ್ಕ್ಯಾನಿಂಗ್ ಉಪಕರಣಗಳು ಮತ್ತು ನೀರು ಹೀರಿಕೊಳ್ಳುವ ಪಂಪ್ಗಳನ್ನು ಬಳಸಲಾಗುತ್ತಿದೆ.
ಮಗುವಿಗಾಗಿ ಪೋಷಕರ ಆತಂಕ
ಮಗುವಿನ ತಂದೆ-ತಾಯಿ ತಮ್ಮ ಕಂದಮ್ಮ ಸುರಕ್ಷಿತವಾಗಿ ಮರಳಿ ಬರಲಿ ಎಂದು ಕಾತರದಿಂದ ಕಾಯುತ್ತಿದ್ದಾರೆ. ಮತ್ತೊಂದೆಡೆ, ಮಗುವನ್ನು ಪತ್ತೆಹಚ್ಚಲು ರಕ್ಷಣಾ ಸಿಬ್ಬಂದಿ ನಿರಂತರ ಪ್ರಯತ್ನ ನಡೆಸುತ್ತಿದ್ದಾರೆ.
ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ರಜತ್ ಮಲ್ಹೋತ್ರಾ ಮಾತನಾಡಿ, ಮಾಹಿತಿ ಸಿಕ್ಕ ತಕ್ಷಣವೇ ಆಡಳಿತ ಮತ್ತು ರಕ್ಷಣಾ ತಂಡಗಳು ಕಾರ್ಯಾಚರಣೆ ಆರಂಭಿಸಿವೆ. NDRF ತಂಡವೂ ಸ್ಥಳದಲ್ಲಿದ್ದು, ಮಗುವನ್ನು ರಕ್ಷಿಸಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ವರದಿ ಸಿದ್ಧಪಡಿಸುವ ವೇಳೆಗೆ ಬಾಲಕ ಪತ್ತೆಯಾಗಿರಲಿಲ್ಲ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗುತ್ತಿದೆ.

