ಸಿಡ್ನಿ: ಆಸ್ಟ್ರೇಲಿಯಾದ ಮಾಜಿ ಆರಂಭಿಕ ಆಟಗಾರ ಉಸ್ಮಾನ್ ಖವಾಜಾ 2023ರ ಪ್ರತಿಷ್ಠಿತ ಆಶಸ್ ಸರಣಿಯ ಲಾರ್ಡ್ಸ್ ಟೆಸ್ಟ್ ಪಂದ್ಯದ ವೇಳೆ ತಮಗೆ ಅನುಭವವಾದ ಕಹಿ ಘಟನೆಯೊಂದನ್ನು ಬಹಿರಂಗಪಡಿಸಿದ್ದಾರೆ. ಲಂಡನ್ನ ಲಾರ್ಡ್ಸ್ ಮೈದಾನದ ಐತಿಹಾಸಿಕ ‘ಲಾಂಗ್ ರೂಮ್’ನಲ್ಲಿ ಮೇರಿಲಿಬೋನ್ ಕ್ರಿಕೆಟ್ ಕ್ಲಬ್ (ಎಮ್ಸಿಸಿ) ಸದಸ್ಯರೊಬ್ಬರು ತಮಗೆ ಜನಾಂಗೀಯ ನಿಂದನೆ ಮಾಡಿದ್ದರು ಎಂದು ತಮ್ಮ ನೂತನ ಆತ್ಮಚರಿತ್ರೆ ‘ಸಬ್ರ್’ (Sabr) ನಲ್ಲಿ ಅವರು ಗಂಭೀರ ಆರೋಪ ಮಾಡಿದ್ದಾರೆ.
2023ರ ಆಶಸ್ ಸರಣಿಯ ಎರಡನೇ ಟೆಸ್ಟ್ ಪಂದ್ಯದ ಐದನೇ ದಿನದಂದು ಇಂಗ್ಲೆಂಡ್ ಬ್ಯಾಟರ್ ಜಾನಿ ಬೈರ್ಸ್ಟೋ ಅವರ ವಿವಾದಾತ್ಮಕ ರನ್ ಔಟ್ ನಿರ್ಗಮನದ ಬಳಿಕ ಲಂಚ್ ವಿರಾಮಕ್ಕೆ ಆಸೀಸ್ ಆಟಗಾರರು ಪೆವಿಲಿಯನ್ಗೆ ಮರಳುತ್ತಿದ್ದರು. ಈ ವೇಳೆ ಕ್ರೀಡಾಂಗಣದಲ್ಲಿದ್ದ ಎಮ್ಸಿಸಿ ಸದಸ್ಯರು ಆಸ್ಟ್ರೇಲಿಯಾ ಆಟಗಾರರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಾ ಕೆಟ್ಟ ಪದಗಳಿಂದ ನಿಂದಿಸಿದ್ದರು.
ಈ ಕಹಿ ಘಟನೆಯನ್ನು ನೆನಪಿಸಿಕೊಂಡಿರುವ ಖವಾಜಾ, ಕ್ರಿಕೆಟ್ ಜಗತ್ತಿನ ಅತ್ಯಂತ ಪ್ರತಿಷ್ಠಿತ ಕ್ಲಬ್ ಎಂದು ಪರಿಗಣಿಸಲ್ಪಟ್ಟ ಎಮ್ಸಿಸಿ ಸದಸ್ಯರು ನಾಯಿಗಳ ಹಿಂಡಿನಂತೆ ಆಟಗಾರರ ಮೇಲೆ ಎರಗಿ ಬಿದ್ದು ಅಸಭ್ಯವಾಗಿ ವರ್ತಿಸಿದ್ದರು ಎಂದು ಬರೆದುಕೊಂಡಿದ್ದಾರೆ. ಈ ವೇಳೆ ಒಬ್ಬ ಸದಸ್ಯ ತಮ್ಮ ತೀರಾ ಸಮೀಪಕ್ಕೆ ಬಂದು ಕಿವಿಯ ಬಳಿ ಕಿರುಚಾಡಿದಾಗ ತಾವು ಆತನಿಗೆ ಎಚ್ಚರಿಕೆ ನೀಡಿದ್ದಾಗಿ ಹಾಗೂ ಮತ್ತೊಬ್ಬ ವ್ಯಕ್ತಿ ತಮಗೆ ಜನಾಂಗೀಯ ನಿಂದನೆ ಪದ ಬಳಸಿ ನಿಂದಿಸಿದಾಗ ತಮಗೆ ಕೋಪ ನಿಯಂತ್ರಿಸಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ.
ಜನಾಂಗೀಯ ನಿಂದನೆ ಮಾಡಿದ ನಿರ್ದಿಷ್ಟ ವ್ಯಕ್ತಿಯನ್ನು ತಕ್ಷಣ ಗುರುತಿಸಲು ಸಾಧ್ಯವಾಗದಿದ್ದರೂ, ತಮ್ಮ ಮುಖದ ಮೇಲೆ ಉಗುಳುತ್ತಾ ಕಿರುಚಾಡುತ್ತಿದ್ದ ವ್ಯಕ್ತಿಯನ್ನು ಸೆಕ್ಯೂರಿಟಿ ಸಿಬ್ಬಂದಿಗೆ ತೋರಿಸಿ ಹೊರದಬ್ಬುವಂತೆ ಮನವಿ ಮಾಡಿದ್ದಾಗಿ ಖವಾಜಾ ಸ್ಪಷ್ಟಪಡಿಸಿದ್ದಾರೆ.
ಈ ಘಟನೆಯ ನಂತರ ಆಂತರಿಕ ತನಿಖೆ ನಡೆಸಿದ್ದ ಎಮ್ಸಿಸಿ ಮಂಡಳಿಯು, ಅಸಭ್ಯವಾಗಿ ವರ್ತಿಸಿದ್ದ ಮೂವರು ಸದಸ್ಯರನ್ನು ತಕ್ಷಣಕ್ಕೆ ಅಮಾನತುಗೊಳಿಸಿತ್ತು. ಬಳಿಕ ತನಿಖೆಯಲ್ಲಿ ತಪ್ಪಿತಸ್ಥರೆಂದು ಕಂಡುಬಂದ ಹಿನ್ನೆಲೆಯಲ್ಲಿ ಒಬ್ಬ ಸದಸ್ಯನನ್ನು ಕ್ಲಬ್ನಿಂದ ಕಾಯಂ ಆಗಿ ಉಚ್ಛಾಟಿಸಲಾಗಿದ್ದರೆ, ಉಳಿದ ಇಬ್ಬರಿಗೆ ಅನುಕ್ರಮವಾಗಿ ನಾಲ್ಕುವರೆ ಹಾಗೂ ಎರಡೂವರೆ ವರ್ಷಗಳ ನಿಷೇಧ ಹೇರಲಾಗಿತ್ತು.
ಈ ಸವಾಲಿನ ವಾತಾವರಣದ ನಡುವೆಯೂ ಆಸ್ಟ್ರೇಲಿಯಾ ತಂಡವು ಲಾರ್ಡ್ಸ್ ಟೆಸ್ಟ್ ಪಂದ್ಯವನ್ನು 43 ರನ್ಗಳ ರೋಚಕ ಅಂತರದಿಂದ ಗೆದ್ದುಕೊಂಡಿತ್ತು ಎಂಬುದು ಉಲ್ಲೇಖನೀಯ.

