alex Certify ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್. ಧೋನಿಗೆ 15 ಕೋಟಿ ರೂ. ವಂಚನೆ: ಮಾಜಿ ಪಾಲುದಾರರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್. ಧೋನಿಗೆ 15 ಕೋಟಿ ರೂ. ವಂಚನೆ: ಮಾಜಿ ಪಾಲುದಾರರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು

ರಾಂಚಿ: 15 ಕೋಟಿ ರೂಪಾಯಿ ವಂಚಿಸಿದ ಆರೋಪದ ಮೇಲೆ ಮಾಜಿ ಉದ್ಯಮ ಪಾಲುದಾರರಾದ ಮಿಹಿರ್ ದಿವಾಕರ್ ಮತ್ತು ಅರ್ಕಾ ಸ್ಪೋರ್ಟ್ಸ್ ಅಂಡ್ ಮ್ಯಾನೇಜ್‌ಮೆಂಟ್ ಲಿಮಿಟೆಡ್‌ನ ಸೋಮ ದಾಸ್ ವಿರುದ್ಧ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ರಾಂಚಿ ಸಿವಿಲ್ ಕೋರ್ಟ್‌ನಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದಾರೆ.

ಕಂಪನಿಯು 2017 ರಲ್ಲಿ ಸಹಿ ಮಾಡಿದ ಒಪ್ಪಂದದ ಷರತ್ತುಗಳನ್ನು ಅನುಸರಿಸದ ಕಾರಣ 15 ಕೋಟಿ ರೂಪಾಯಿ ನಷ್ಟ ಅನುಭವಿಸಿದೆ ಎಂದು ಧೋನಿ ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ.

ಅರ್ಕಾ ಸ್ಪೋರ್ಟ್ಸ್ ಅಂಡ್ ಮ್ಯಾನೇಜ್‌ಮೆಂಟ್ ಪ್ರೈವೇಟ್ ಲಿಮಿಟೆಡ್‌ನ ಮಿಹಿರ್ ದಿವಾಕರ್ ಮತ್ತು ಸೋಮ ದಾಸ್ ನಡುವೆ ಒಪ್ಪಂದಕ್ಕೆ ಸಹಿ ಹಾಕಿ ಧೋನಿ ಅವರ ಹೆಸರಿನಲ್ಲಿ ಕಂಪನಿಯು ಕ್ರಿಕೆಟ್ ಅಕಾಡೆಮಿಗಳನ್ನು ತೆರೆಯಲಾಗಿದೆ. ಇದಕ್ಕಾಗಿ ಫ್ರಾಂಚೈಸಿ ಶುಲ್ಕ ಪಾವತಿಸಬೇಕಿದ್ದು, ಧೋನಿ ಕಂಪನಿಗೆ ಅಧಿಕಾರ ಪತ್ರ ನೀಡಿದ್ದರು. ಆರಂಭದಲ್ಲಿ ಅವರು ಸ್ವಲ್ಪ ಸಮಯದವರೆಗೆ ಫ್ರಾಂಚೈಸಿ ಶುಲ್ಕ ಪಾವತಿಸಿದರು. ಆದರೆ, ನಂತರ ಅವರು ಯಾವುದೇ ಶುಲ್ಕ ನೀಡದೇ ಹೊಸ ಕ್ರಿಕೆಟ್ ಅಕಾಡೆಮಿಗಳನ್ನು ತೆರೆದಿದ್ದಾರೆ. ಈ ಬಗ್ಗೆ ಯಾವುದೇ ಮಾಹಿತಿ ಕೂಡ ನೀಡಿಲ್ಲ. ಇದೆಲ್ಲಾ ಕಾರಣಗಳಿಂದ 2021 ರ ಆಗಸ್ಟ್ 15 ರಂದು ಅವರಿಗೆ ನೀಡಲಾದ ಅಧಿಕಾರವನ್ನು ಧೋನಿ ಹಿಂತೆಗೆದುಕೊಂಡರು ಎಂದು ಧೋನಿ ಪರ ವಕೀಲ ದಯಾನಂದ್ ಸಿಂಗ್ ಹೇಳಿದ್ದಾರೆ.

ಕಂಪನಿಯು ಪ್ರಪಂಚದಾದ್ಯಂತ ವಿವಿಧ ಸ್ಥಳಗಳಲ್ಲಿ ಕ್ರಿಕೆಟ್ ಅಕಾಡೆಮಿಗಳನ್ನು ತೆರೆದಿದೆ. ಧೋನಿ ಹೆಸರನ್ನು ದುರುಪಯೋಗಪಡಿಸಿಕೊಂಡು ಜನರಿಂದ ಹಣ ಸಂಗ್ರಹಿಸುವುದನ್ನು ಮುಂದುವರಿಸಿದೆ. 2022 ರಲ್ಲಿ ಕಂಪನಿಗೆ ಲೀಗಲ್ ನೋಟಿಸ್ ಕಳುಹಿಸಲಾಗಿದ್ದರೂ ಅವರು ನಿಲ್ಲಿಸಲಿಲ್ಲ. ಇದರಿಂದ ಧೋನಿ 15 ಕೋಟಿ ರೂಪಾಯಿಗಳಿಗಿಂತ ಹೆಚ್ಚು ಆರ್ಥಿಕ ನಷ್ಟ ಅನುಭವಿಸಿದರು. ಅಂತಿಮವಾಗಿ ರಾಂಚಿಯ ಸಿವಿಲ್ ನ್ಯಾಯಾಲಯದಲ್ಲಿ ವಕೀಲ ಸಿಮಂತ್ ಲೋಹಾನಿ ಅವರು ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದಾರೆ.

ಶುಕ್ರವಾರ ಮೊದಲ ಬಾರಿಗೆ ಪ್ರಕರಣದ ವಿಚಾರಣೆ ನಡೆದಿದ್ದು, ಮುಂದಿನ ವಿಚಾರಣೆ ಜನವರಿ 20 ರಂದು ನಡೆಯಲಿದೆ. ಕಂಪನಿಯ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 406, 420, 468, 471 ಮತ್ತು 120 ಬಿ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ವಕೀಲರು ಮಾಹಿತಿ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...