ಕೊರೊನಾ ಪ್ರಕರಣ ಸಂಖ್ಯೆ ಹೆಚ್ಚಾದ ಬಳಿಕ ಮೇ 4ರಂದು ಮುಂದೂಡಲ್ಪಟ್ಟಿದ್ದ 2021ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಯುಎಇನಲ್ಲಿನಡೆಯಲಿದೆ ಎಂದು ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಅಧಿಕೃತ ಹೇಳಿಕೆ ನೀಡಿದ್ದಾರೆ.
ಬಯೋಬಬಲ್ ನಿಯಮ ಉಲ್ಲಂಘನೆಯಾದ ಕಾರಣ ಆಟಗಾರರ ಸುರಕ್ಷತೆಯನ್ನ ಗಮನದಲ್ಲಿರಿಸಿ ಬಿಸಿಸಿಐ ಹಾಗೂ ಐಪಿಎಲ್ ಆಡಳಿತ ಮಂಡಳಿ ಸರ್ವಾನುಮತದಿಂದ ಐಪಿಎಲ್ ಸೀಸನ್ನ್ನು ಅನಿರ್ದಿಷ್ಟಾವಧಿಗೆ ಮುಂದೂಡುವ ನಿರ್ಧಾರಕ್ಕೆ ಬಂದಿತ್ತು.
ಮೇ 4ರಂದು ಐಪಿಎಲ್ ಮುಂದೂಡಿಕೆ ಎಂಬ ಘೋಷಣೆ ಹೊರಡುತ್ತಿದ್ದಂತೆಯೇ 2021ನೇ ಸಾಲಿನ ಉಳಿದ ಐಪಿಎಲ್ ಪಂದ್ಯಾವಳಿ ಎಲ್ಲಿ ನಡೆಯುತ್ತೆ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿತ್ತು.
ಈ ಸಂಬಂಧ ವಿಶೇಷ ಸಭೆ ನಡೆಸಿದ ಬಿಸಿಸಿಐ ಇದೀಗ ಐಪಿಎಲ್ 2021ನೇ ಆವೃತ್ತಿಯ ದ್ವಿತೀಯಾರ್ಧವನ್ನ ಯುಎಇನಲ್ಲಿ ನಡೆಸಲು ತೀರ್ಮಾನಿಸಿದೆ. 2020ನೇ ಸಾಲಿನ ಐಪಿಎಲ್ ಪಂದ್ಯಾವಳಿ ಸಹ ಯುಎಇನಲ್ಲೇ ನಡೆದಿತ್ತು.
ಸೆಪ್ಟೆಂಬರ್ 19 ರಿಂದ ಅಕ್ಟೋಬರ್ 10ರವರೆಗೆ ಐಪಿಎಲ್ ಪಂದ್ಯಾವಳಿಗಳು ನಡೆಯಲಿವೆ. ದ್ವಿತೀಯಾರ್ಧದಲ್ಲಿ 31 ಐಪಿಎಲ್ ಪಂದ್ಯಗಳು ನಡೆಯಬೇಕಿದ್ದು ಇವುಗಳನ್ನ 10 ಡಬಲ್ ಹೆಡ್ಡರ್ಸ್, 7 ಸಿಂಗಲ್ ಹೆಡ್ಡರ್ಸ್, 4 ಪ್ಲೇಆಫ್ಸ್ಗಳಾಗಿ ವಿಂಗಡಿಸಲಾಗಿದೆ.