ಬೆಂಗಳೂರು: ಹಿರಿಯ ಲೇಖಕಿ, ಖ್ಯಾತ ಅನುವಾದಕಿ, ಕವಯತ್ರಿ ಸರಿತಾ ಜ್ಞಾನಾನಂದ ಅನಾರೋಗ್ಯದಿಂದ ವಿಧಿವಶರಾಗಿದ್ದಾರೆ.
ಬೆಂಗಳೂರಿನ ಆರ್.ಆರ್.ನಗರದಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. ಅವರಿಗೆ 82 ವರ್ಷ ವಯಸ್ಸಾಗಿತ್ತು. ಸರಿತಾ ಜ್ಞಾಜಾನಂದ ವಿವಿಧ ಭಾಷೆಗಳ ಕಥೆ, ಕಾದಂಬರಿಗಳನ್ನು ಕನ್ನಡಕ್ಕೆ ಅನುವಾದ ಮಾಡುತ್ತಿದ್ದರು.
ಬೆಂಗಳೂರು ಮೂಲದವರಾಗಿದ್ದ ಸರಿತಾ, ಮೈಸೂರು ವಿಶ್ವವಿದ್ಯಾಲಯದಿಂದ ಬಿಎ, ಬಿಎಡ್ ಪದವಿ ಪಡೆದಿದ್ದರು. ಬಳಿಕ ಅಣ್ಣಾಮಲೈ ವಿಶ್ವವಿದ್ಯಾಲಯದಿಂದ ಎಂ.ಎಡ್ ಪದವಿ ಪಡೆದಿದ್ದರು. ಕನ್ನಡ, ಹಿಂದಿ, ಇಂಗ್ಲೀಷ್, ಸಂಸಕೃತ, ಮಲಯಾಳಂ, ಮರಾಠಿ ಭಾಷೆಗಳಲ್ಲಿ ಪ್ರಾವಿಣ್ಯತೆ ಪಡೆದುಕೊಂಡಿದ್ದರು. ಬೆಂಗಳೂರು ಹಾಗೂ ಕೆಜಿಎಫ್ ನಲ್ಲಿ ಶಾಲಾ ಶಿಕ್ಷಕಿಯಾಗಿಯೂ ಸೇವೆ ಸಲ್ಲಿಸಿದ್ದರು.
ಮುನ್ನೂರಕ್ಕೂ ಹೆಚ್ಚು ಕಥೆಗಳನ್ನು ಸರಿತಾ ರಚಿಸಿದ್ದರು. ಬೃಂಧಾವನ ಹಾಗೂ ತುಳಸಿ ಕಟ್ಟೆ ಎಂಬ ಎರಡು ಕಥಾಸಂಕಲನಗಳು ಜನಪ್ರಿಯಗೊಂಡಿವೆ. ಅವರ ಹಲವು ಕಥೆಗಳು ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದವು.

