ಬೆಂಗಳೂರು: ಬೆಂಗಳೂರಿನ ಪುಲಿಕೇಶಿನಗರದಲ್ಲಿ ನಿರ್ಮಾಣ ಹಂತದ ಕಟ್ಟಡದಲ್ಲಿ 5ನೇ ಮಹಡಿಯಲ್ಲಿ ನಡೆದ ಅನುಮಾನಾಸ್ಪದ ಸ್ಫೋಟ ಪ್ರಕರಣದ ತನಿಖೆ ಚುರುಕುಗೊಂಡಿದೆ. ಪ್ರಕರಣದ ಕುರಿತು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಮಾಹಿತಿ ಪಡೆದುಕೊಂಡಿದ್ದು, ತನಿಖಾ ವರದಿಗಳನ್ನು ಕೇಳಿದೆ.
ಪ್ರಾಥಮಿಕ ತನಿಖೆಯಲ್ಲಿ, ಸ್ಫೋಟಕ್ಕೆ ಸುಧಾರಿತ ಸ್ಫೋಟಕ ಸಾಧನ ಐಇಡಿ ಬಳಸಲಾಗಿದೆಯೇ ಎಂಬ ಅನುಮಾನ ವ್ಯಕ್ತವಾಗಿದೆ. ಸ್ಥಳ ಪರಿಶೀಲನೆ ಹಾಗೂ ವಿಧಿವಿಜ್ಞಾನ ಪ್ರಯೋಗಾಲಯದ ವರದಿಯನ್ನು ಪರಿಶೀಲಿಸಿದ ಬಳಿಕ ಪ್ರಕರಣದ ತನಿಖೆಯಲ್ಲಿ ಎನ್ಐಎ ಮುಂದಿನ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ.
ಈಗಾಗಲೇ ಎನ್ ಐಎ ಅಧಿಕಾರಿಗಳು ಸ್ಫೋಟದ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ವಿಧಿವಿಜ್ಞಾನ ಪ್ರಯೋಗಾಲಯದ ವರದಿಯನ್ನು ಕೂಡ ಪರಿಶೀಲಿಸಲಿದ್ದಾರೆ. ಎಂದು ತಿಳಿದುಬಂದಿದೆ.
ಮೂರು ಬ್ಯಾಟರಿಗಳನ್ನು ಬಳಸಿ ಸ್ಫೋಟಕ ಸಾಧನವನ್ನು ಸ್ಫೋಟಿಸಲಾಗಿದೆಯೇ ಎಂಬ ಅನುಮಾನ ಪ್ರಾಥಮಿಕ ತನಿಖೆಯ ವೇಳೆ ವ್ಯಕ್ತವಾಗಿದೆ. ಸ್ಫೋಟದ ನಿಖರ ಸ್ವರೂಪ ಮತ್ತು ಬಳಸಲಾಗಿರುವ ವಸ್ತುಗಳ ಬಗ್ಗೆ ವಿಧಿವಿಜ್ಞಾನ ವರದಿಯಿಂದ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ. ಈ ಪ್ರಕರಣದ ತನಿಖೆಯನ್ನು ಎಟಿಸಿ ಹಾಗೂ ಸ್ಥಳೀಯ ಪೊಲೀಸರು ಮುಂದುವರಿಸಿದ್ದಾರೆ.
ಪೊಲೀಸರು ಈಗಾಗಲೇ ಎನ್ಐಎಗೆ ಅನಾಮಧೇಯ ಕರೆ ಬಂದಿದ್ದ ವಿಚಾರವನ್ನೂ ತಿಳಿಸಿದ್ದಾರೆ. ಸ್ಫೋಟ ಸಂಭವಿಸಿದ ಸ್ಥಳದಲ್ಲಿ ಸೋಕೋ ತಂಡ ಹಾಗೂ ಎಫ್ಎಸ್ಎಲ್ ನಡೆಸಿದ ಪರಿಶೀಲನೆಗೆ ಸಂಬಂಧಿಸಿದ ವರದಿಗಳನ್ನು ಎನ್ಐಎಗೆ ನೀಡಲಾಗಿದೆ ಎಂದು ತಿಳಿದುಬಂದಿದೆ.
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಕಟ್ಟಡದೊಳಗೆ ಪಾರ್ಸೆಲ್ ಇಡಲು ಸೆಕ್ಯುರಿಟಿ ಗಾರ್ಡ್ ಮುಂದಾಗಿದ್ದ. ತನಗೆ ಅನಾಮಧೇಯ ಕರೆ ಬಂದಿದ್ದು, ಪಾರ್ಸೆಲ್ ಅನ್ನು ಕಟ್ಟಡದ ಒಳಗೆ ಇಡುವಂತೆ ಸೂಚಿಸಲಾಗಿತ್ತು ಎಂದು ಸೆಕ್ಯುರಿಟಿ ಗಾರ್ಡ್ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.
ಬಳಿಕ ಸೆಕ್ಯುರಿಟಿ ಗಾರ್ಡ್ ಮತ್ತು ಪೇಂಟರ್ ಇಬ್ಬರೂ ಸೇರಿ ಪಾರ್ಸೆಲ್ ತೆರೆಯಲು ಮುಂದಾದಾಗ ಸ್ಫೋಟ ಸಂಭವಿಸಿದೆ ಎಂದು ಇಬ್ಬರೂ ತಿಳಿಸಿದ್ದಾರೆ. ಅನಾಮಧೇಯ ಕರೆ, ಪಾರ್ಸೆಲ್ನ ಮೂಲ ಹಾಗೂ ಸ್ಫೋಟಕ್ಕೆ ಕಾರಣವಾದ ಅಂಶಗಳ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪ್ರಕರಣದ ಸೂಕ್ಷ್ಮತೆ ಹಿನ್ನೆಲೆಯಲ್ಲಿ ಎಟಿಸಿ ಹಾಗೂ ಸ್ಥಳೀಯ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.
ನಂದಿಧ್ವಜ ಪೂಜೆ ವೇಳೆ ಮಂತ್ರಿಗಳಿಗೆ ಅವಕಾಶ ನಿರಾಕರಣೆ ಪ್ರಕರಣ: ವಿಚಾರಣೆಗೆ ಸಿಎಂ ಆದೇಶ: ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ
ಮೈಸೂರು ಅರಮನೆ ಆವರಣದಲ್ಲಿ ನಿನ್ನೆ ನಡೆದ ನಂದಿಧ್ವಜ ಪೂಜೆ ಸಂದರ್ಭದಲ್ಲಿ ಸಚಿವರಾದ ಬಾಲಕೃಷ್ಣ, ನರೇಂದ್ರ ಸ್ವಾಮಿ, ಬಸವಂತಪ್ಪ ಅವರನ್ನು ಪೂಜೆ ಆವರಣ ಪ್ರವೇಶಿಸಲು ಪೊಲೀಸ್ ಅಧಿಕಾರಿಗಳು ನಿರ್ಬಂಧಿಸಿದ ಪ್ರಕರಣದ ಬಗ್ಗೆ ವಿಚಾರಣೆ ನಡೆಸಿ ವರದಿ ನೀಡುವಂತೆ ಸಿಎಂ ಡಿ ಕೆ ಶಿವಕುಮಾರ್ ಅವರು ಸರಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಸೂಚನೆ ನೀಡಿದ್ದಾರೆ.
ಮಂತ್ರಿಗಳನ್ನೇ ನಿರ್ಬಂಧಿಸುವ ಮೂಲಕ ಅಧಿಕಾರಿಗಳು ಉದ್ಧಟತನದಿಂದ ವರ್ತಿಸಿರುವುದು ಕಂಡು ಬಂದಿದೆ. ತಕ್ಷಣ ಖುದ್ದು ನಾನೇ ಮಧ್ಯಪ್ರವೇಶಿಸಿ ಮಂತ್ರಿಗಳ ಪ್ರವೇಶಕ್ಕೆ ಅನುವು ಮಾಡಿಕೊಟ್ಟಿದ್ದೇನೆ. ಆದರೂ ಅಧಿಕಾರಿಗಳ ಉಡಾಫೆ ಸಹಿಸಲು ಆಗುವುದಿಲ್ಲ. ಹೀಗಾಗಿ ಇದಕ್ಕೆ ಹೊಣೆಗಾರರು ಯಾರು ಎಂಬ ಬಗ್ಗೆ ವಿಚಾರಣೆ ನಡೆಸಿ ವರದಿ ನೀಡುವಂತೆ ಮುಖ್ಯ ಕಾರ್ಯದರ್ಶಿ ಅವರಿಗೆ ಅದೇಶಿಸಿದ್ದೇನೆ ಎಂದು ಸಿಎಂ ಅವರು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ ಬಂದ ನಂತರ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಅವರು ಹೇಳಿದ್ದಾರೆ.

