ಪುಣೆ: ಇತ್ತೀಚಿನ ದಿನಗಳಲ್ಲಿ ಮಕ್ಕಳನ್ನು ಪುಸಲಾಯಿಸಿ ಲೈಂಗಿಕ ದೌರ್ಜನ್ಯವೆಸಗುತ್ತಿರುವ ಆತಂಕಕಾರಿ ಘಟನೆಗಳು ಹೆಚ್ಚುತ್ತಿವೆ. ನಾಲ್ಕು ವರ್ಷದ ಮಗುವಿಗೆ ತಿಂಡಿ ಕೊಡಿಸುವುದಾಗಿ ನಂಬಿಸಿ ಕರೆದೊಯ್ಡ 65 ವರ್ಷದ ವೃದ್ಧ ಆಕೆಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿರುವ ಪೈಶಾಚಿಕ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ.
ಅಜ್ಜಿಯ ಮನೆಗೆ ಬಂದಿದ್ದ ನಾಲ್ಕು ವರ್ಷದ ಬಾಲಕಿ ಮೇಲೆ ದುರುಳ ಈ ಕೃತ್ಯವೆಸಗಿದ್ದಾನೆ. ಭೀಮರಾವ್ ಕಾಂಬಳೆ(65) ಬಾಲಕಿ ಮೇಲೆ ಅತ್ಯಾಚಾರವೆಸಗಿ, ಕೊಲೆ ಮಾಡಿರುವ ಆರೋಪಿ. ಘಟನೆ ಬೆಳಕಿಗೆ ಬರುತ್ತಿದ್ದಂತೆ ಕುಟುಂಬದವರು ಹಾಗೂ ಗ್ರಾಮಸ್ತರು ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದರಿಯನ್ನು ತಡೆದು ಪ್ರತಿಭಟನೆ ನಡೆಸಿದ್ದು, ಆರೋಪಿಯನ್ನು ಬಂಧಿಸಿ ಗಲ್ಲು ಶಿಕ್ಷೆ ವಿಧಿಸುವಂತೆ ಒತ್ತಾಯಿಸಿದ್ದಾರೆ.
ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ಆರೋಪಿ ವೃದ್ಧನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯು ಬಾಲಕಿಯನ್ನು ಪುಸಲಾಯಿಸಿ ಕರೆದುಕೊಂಡು ಹೋಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕೊಲೆ ಬಳಿಕ ಬಾಲಕಿಯ ಶವವನ್ನು ಅಡಗಿಸಿಡುವ ದೃಶ್ಯ ಕೂಡ ಸೆರೆಯಾಗಿದೆ. ಇದನ್ನು ಆಧರಿಸಿ ಆರೋಪಿಯನ್ನು ಬಂಧಿಸಲಾಗಿದೆ.
ಮಗುವಿಗೆ ತಿಂಡಿ ಕೊಡಿಸುವ ಆಮಿಷ ಒಡ್ಡಿ, ದನಗಳ ಕೊಟ್ಟಿಗೆಗೆ ಕರೆದೊಯ್ದು, ಅಲ್ಲಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಬಳಿಕ ಕೊಲೆ ಮಾಡಿದ್ದಾನೆ ಎಂದು ಪುಣೆ ಪೊಲೀಸ್ ವರಿಷ್ಠಾಧಿಕಾರಿ ಸಂದೀಪ್ ಸಿಂಗ್ ಗಿಲ್ ತಿಳಿಸಿದ್ದಾರೆ.
ಅಜ್ಜಿಯನ್ನು ಭೇಟಿಯಾಗಲು ಅಜ್ಜಿ ಮನೆಗೆ ಬಾಲಕಿ ಬಂದಿದ್ದಳು. ಈ ವೇಳೆ ಮಧ್ಯಾಹ್ನ ಬಾಲಕಿ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಳು. ಕುಟುಂಬದವರು ತೀವ್ರ ಹುಡುಕಾಟ ನಡೆಸಿದ್ದರು. ಶೋಧದ ಸಮಯದಲ್ಲಿ, ಹತ್ತಿರದ ನಿವಾಸದ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಆರೋಪಿಯು ಮಗುವನ್ನು ಶೆಡ್ ಕಡೆಗೆ ಕರೆದೊಯ್ಯುತ್ತಿರುವುದು ಕಂಡುಬಂದಿದೆ. ಇದನ್ನು ಆಧರಿಸಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಪುಣೆ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ಪೋಕ್ಸೊ ಕೇಸ್ ಹಾಗೂ ಕೊಲೆ ಕೇಸ್ ದಾಖಲಾಗಿದೆ.

