ಬೆಂಗಳೂರು: ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳು ಅಟ್ಟಹಾಸ ಮೆರೆದಿದ್ದು, ಜೈಲಿನ ವಾರ್ಡರ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿರುವ ಘಟನೆ ನಡೆದಿದೆ.
ಪರಪ್ಪನ ಅಗ್ರಹಾರ ಮಧ್ಯವರ್ತಿ ಕಾರಾಗೃಹದಲ್ಲಿ ಈ ಘಟನೆ ನಡೆದಿದೆ. ಇದರಿಂದಾಗಿ ಜೈಲಿನ ಸಿಬ್ಬಂದಿಗಳೇ ಜೀವ ಭಯದಲ್ಲಿ ಇರಬೇಕಾದ ಸ್ಥಿತಿ ಎದುರಾಗಿದೆ. ಜೈಲು ವಾರ್ಡರ್ ಮಂಜುನಾಥ್ ಹವೇಲಿ ಎಂಬುವವರ ಅವರ ಮೇಲೆ ಕೈದಿಗಳು ಮಾರಣಾಂತಿಅಕವಾಗಿ ಹಲ್ಲೆ ನಡೆಸಿದ್ದು, ಬಟ್ಟೆ ಹರಿದು ಮುಖ, ಮೂಗಿಗೆ ಪಂಚ್ ಕೊಟ್ಟಿದ್ದಾರೆ. ಅಷ್ಟೇ ಅಲ್ಲ, ಮಂಜುನಾಥ್ ಅವರ ಕತ್ತು ಹಿಸುಕಿ ಕೊಲೆ ಯತ್ನ ನಡೆಸಿದ್ದಾರೆ. ಘಟನೆಯ ಬಳಿಕ ಇತರ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ವಾರ್ಡರ್ ಅವರನ್ನು ರಕ್ಷಿಸಿದ್ದಾರೆ.
ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ಕೈದಿಗಳಿಂದ ಈ ಕೃತ್ಯ ನಡೆದಿದ್ದು, ಪ್ರಕರಣದ ಬೆನ್ನಲ್ಲೇ ಐವರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳನ್ನು ಆಗಸ್ಟ್ 22 ರಂದು ಪರಪ್ಪನ ಅಗ್ರಹಾರದ ಅನೆಕ್ಸ್-1 ಕಟ್ಟಡಕ್ಕೆ ವರ್ಗಾಯಿಸಲಾಗಿತ್ತು. ಆ ವೇಳೆ ಆರೋಪಿಗಳು ತಮ್ಮೊಂದಿಗೆ ನಿಯಮಬಾಹಿರವಾಗಿ ಹೆಚ್ಚುವರಿ ವಸ್ತುಗಳನ್ನು ಜೈಲಿನೊಳಗೆ ತೆಗೆದುಕೊಂಡು ಹೋಗಲು ಯತ್ನಿಸಿದ್ದರು. ಆದರೆ ಜೈಲು ವಾರ್ಡರ್ ಮಂಜುನಾಥ್ ಅವರು ಕಾನೂನಿನಂತೆ ಆ ಹೆಚ್ಚುವರಿ ವಸ್ತುಗಳನ್ನು ಒಳಗೆ ಬಿಡದೆ ತಡೆದಿದ್ದರು. ಇದೇ ವಿಷಯವನ್ನು ಮನಸ್ಸಿನಲ್ಲಿಟ್ಟುಕೊಂಡಿದ್ದ ಆರೋಪಿಗಳು ಮಂಜುನಾಥ್ ವಿರುದ್ಧ ವೈಷಮ್ಯ ಬೆಳೆಸಿಕೊಂಡಿದ್ದರು.
ಸೆಪ್ಟೆಂಬರ್ 2 ರಂದು ಆರೋಪಿಗಳ ವಿಡಿಯೋ ಕಾನ್ಫರೆನ್ಸ್ (VC) ಹಾಜರಿಗೆ ಸಂಬಂಧಿಸಿದ ಮಾಹಿತಿ ಸಂಗ್ರಹಿಸಲು ವಾರ್ಡರ್ ಮಂಜುನಾಥ್ ಅವರು ಅನೆಕ್ಸ್-1 ಕಟ್ಟಡಕ್ಕೆ ತೆರಳಿದ್ದರು. ಈ ವೇಳೆ ಸಿಕ್ಕ ಅವಕಾಶವನ್ನು ಬಳಸಿಕೊಂಡ ಆರೋಪಿ ಮೊಹಮ್ಮದ್ ಮುಜಾಮಿಲ್ ಹಳೆಯ ದ್ವೇಷವನ್ನು ಮುಂದಿಟ್ಟುಕೊಂಡು ವಾರ್ಡರ್ ಜೊತೆ ವಾಗ್ವಾದ ನಡೆಸಿದ್ದಾನೆ. ಹಠಾತ್ತನೆ ಮಂಜುನಾಥ್ ಅವರ ಮುಖ ಹಾಗೂ ಮೂಗಿಗೆ ಮುಷ್ಠಿಯಿಂದ ಬಲವಾಗಿ ಗುದ್ದಿ ರಕ್ತ ಬರುವಂತೆ ಗಾಯಗೊಳಿಸಿದ್ದಾನೆ. ತಕ್ಷಣವೇ ಆತನ ಸಹಚರರು ಕೈಜೋಡಿಸಿ, ಮಂಜುನಾಥ್ ಅವರನ್ನು ಕೊಠಡಿ ಸಂಖ್ಯೆ 4 ಕ್ಕೆ ಎಳೆದುಕೊಂಡು ಹೋಗಿ ಮನಸೋಇಚ್ಛೆ ಥಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಐವರು ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಾಗಿದೆ. ಮೊಹಮ್ಮದ್ ಮುಜಾಮಿಲ್, ಅಬ್ದುಲ್ ಶಫ್ಗನ್ (ಶಫ್ವಾನ್), ಮೊಹಮ್ಮದ್ ರಿಜ್ವಾನ್, ನಿಯಾಜ್ (ನಯಾಜ್), ಕಲಂದರ್ ಶಫಿ ವಿರುದ್ಧ ಕೊಲೆ ಯತ್ನ ಸೇರಿದಂತೆ ವಿವಿಧ ಗಂಭೀರ ಪ್ರಕರಣಗಳ ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ.

