ಬೆಂಗಳೂರು, : ಮಧ್ಯಪ್ರಾಚ್ಯದಲ್ಲಿ ಉಲ್ಬಣಗೊಂಡಿರುವ ಭದ್ರತಾ ಪರಿಸ್ಥಿತಿಯ ಹಿನ್ನೆಲೆಯಲ್ಲಿ ವಿಮಾನಯಾನ ಸೇವೆಗಳಲ್ಲಿ ವ್ಯತ್ಯಯ ಉಂಟಾಗಿದ್ದು, ಸೌದಿ ಅರೇಬಿಯಾದ ಪವಿತ್ರ ನಗರಗಳಾದ ಮಕ್ಕಾ ಮತ್ತು ಮದೀನಾದಲ್ಲಿ ಕರ್ನಾಟಕದ 600ಕ್ಕೂ ಹೆಚ್ಚು ಉಮ್ರಾ ಯಾತ್ರಾರ್ಥಿಗಳು ಸಿಲುಕಿಕೊಂಡಿದ್ದಾರೆ. ಯಾತ್ರಾರ್ಥಿಗಳನ್ನು ಸುರಕ್ಷಿತವಾಗಿ ಮತ್ತು ಶೀಘ್ರವಾಗಿ ತಾಯ್ನಾಡಿಗೆ ಕರೆತರಲು ತುರ್ತು ಕ್ರಮ ಕೈಗೊಳ್ಳುವಂತೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್. ಜೈಶಂಕರ್ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಮಧ್ಯಪ್ರಾಚ್ಯದ ಭದ್ರತಾ ಪರಿಸ್ಥಿತಿಯ ಪರಿಣಾಮವಾಗಿ ಬೆಂಗಳೂರು ಸೇರಿದಂತೆ ಭಾರತದ ವಿವಿಧ ಭಾಗಗಳಿಗೆ ಮರಳಬೇಕಿದ್ದ ಯಾತ್ರಾರ್ಥಿಗಳ ಪ್ರಯಾಣಕ್ಕೆ ಅಡಚಣೆ ಉಂಟಾಗಿದೆ. ಇದರಿಂದಾಗಿ ಅನೇಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಅವರಲ್ಲಿ ಹಲವರ ಆರ್ಥಿಕ ಸಂಪನ್ಮೂಲಗಳು ಖಾಲಿಯಾಗಿವೆ. ಊಟ ಮತ್ತು ವಸತಿಯಂತಹ ಮೂಲಭೂತ ಅಗತ್ಯಗಳನ್ನು ಪೂರೈಸಿಕೊಳ್ಳಲೂ ಅವರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಪತ್ರದಲ್ಲಿ ವಿವರಿಸಲಾಗಿದೆ.
ವೃದ್ಧರು, ಮಹಿಳೆಯರು ಮತ್ತು ಮಕ್ಕಳಿಗೆ ಸಂಕಷ್ಟ
ವೃದ್ಧರು, ಮಹಿಳೆಯರು ಮತ್ತು ಮಕ್ಕಳಿಗೆ ಸಂಕಷ್ಟ
ಇತ್ತೀಚೆಗೆ ಮಕ್ಕಾ ಮತ್ತು ಮದೀನಾಕ್ಕೆ ಭೇಟಿ ನೀಡಿದ್ದ ಕರ್ನಾಟಕ ರಾಜ್ಯ ಹಜ್ ಸಮಿತಿಯ ಅಧ್ಯಕ್ಷರು ಹಾಗೂ ಅವರ ತಂಡವು ಯಾತ್ರಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ವರದಿ ನೀಡಿದೆ. ಹೋಟೆಲ್ಗಳಿಂದ ಕೊಠಡಿಗಳನ್ನು ಖಾಲಿ ಮಾಡುವಂತೆ ಸೂಚನೆ ನೀಡಲಾಗಿರುವುದರಿಂದ ವೃದ್ಧರು, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಅನೇಕ ಯಾತ್ರಾರ್ಥಿಗಳು ಅಸಹಾಯಕ ಸ್ಥಿತಿಯಲ್ಲಿದ್ದಾರೆ ಎಂದು ಡಿ.ಕೆ. ಶಿವಕುಮಾರ್ ಆತಂಕ ವ್ಯಕ್ತಪಡಿಸಿದ್ದಾರೆ.
ಸೌದಿ ಅರೇಬಿಯಾದಲ್ಲಿರುವ ಭಾರತೀಯ ಹಾಗೂ ಕರ್ನಾಟಕದ ಸ್ವಯಂಸೇವಾ ಸಂಸ್ಥೆಗಳು ತಾತ್ಕಾಲಿಕ ನೆರವು ನೀಡುತ್ತಿದ್ದರೂ, ಸಂಕಷ್ಟದಲ್ಲಿರುವ ಎಲ್ಲರ ಅಗತ್ಯಗಳನ್ನು ಪೂರೈಸಲು ಅದು ಸಾಕಾಗುತ್ತಿಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ವಿಶೇಷ ವಿಮಾನಗಳ ವ್ಯವಸ್ಥೆಗೆ ಮನವಿ
ವಿಶೇಷ ವಿಮಾನಗಳ ವ್ಯವಸ್ಥೆಗೆ ಮನವಿ
ಯಾತ್ರಾರ್ಥಿಗಳ ಸುರಕ್ಷಿತ ವಾಪಸಾತಿಗಾಗಿ ರಿಯಾದ್ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಮತ್ತು ಜೆಡ್ಡಾದಲ್ಲಿರುವ ಭಾರತದ ಕಾನ್ಸುಲೇಟ್ ಜನರಲ್ ಕಚೇರಿಗಳು ಸೌದಿ ಅರೇಬಿಯಾದ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ವಿಮಾನಯಾನ ಸಂಸ್ಥೆಗಳೊಂದಿಗೆ ತಕ್ಷಣ ಸಮನ್ವಯ ಸಾಧಿಸಬೇಕು ಎಂದು ಡಿಕೆಶಿ ಮನವಿ ಮಾಡಿದ್ದಾರೆ.
ಅಗತ್ಯವಿರುವ ಕಡೆಗಳಲ್ಲಿ ವಿಶೇಷ ವಿಮಾನಗಳ ವ್ಯವಸ್ಥೆ ಕಲ್ಪಿಸಿ, ಯಾತ್ರಾರ್ಥಿಗಳನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು. ಅವರು ತಾಯ್ನಾಡಿಗೆ ಮರಳುವವರೆಗೂ ಆಹಾರ, ವಸತಿ ಸೇರಿದಂತೆ ಅಗತ್ಯವಾದ ತಾತ್ಕಾಲಿಕ ನೆರವು ದೊರೆಯುವಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ತುರ್ತು ಮಧ್ಯಸ್ಥಿಕೆಗೆ ಆಗ್ರಹ
ತುರ್ತು ಮಧ್ಯಸ್ಥಿಕೆಗೆ ಆಗ್ರಹ
ಯಾತ್ರಾರ್ಥಿಗಳು ಎದುರಿಸುತ್ತಿರುವ ಮಾನವೀಯ ಸಂಕಷ್ಟವನ್ನು ಗಮನದಲ್ಲಿಟ್ಟುಕೊಂಡು ಈ ವಿಷಯಕ್ಕೆ ಅತ್ಯುನ್ನತ ಆದ್ಯತೆ ನೀಡಬೇಕು. ಯಾವುದೇ ವಿಳಂಬವಿಲ್ಲದೆ ಅಗತ್ಯ ಕ್ರಮಗಳನ್ನು ಕೈಗೊಂಡು, ಸಂಕಷ್ಟದಲ್ಲಿರುವವರನ್ನು ಸುರಕ್ಷಿತವಾಗಿ ಸ್ವದೇಶಕ್ಕೆ ಕರೆತರಲು ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಬೇಕು ಎಂದು ಡಿ.ಕೆ. ಶಿವಕುಮಾರ್ ಕೋರಿದ್ದಾರೆ.
ಯಾತ್ರಾರ್ಥಿಗಳ ಸುರಕ್ಷಿತ ವಾಪಸಾತಿಗೆ ಕರ್ನಾಟಕ ಸರ್ಕಾರವು ಅಗತ್ಯವಿರುವ ಎಲ್ಲ ಸಹಕಾರ ನೀಡಲು ಸಿದ್ಧವಿದೆ ಎಂದು ತಿಳಿಸಿರುವ ಅವರು, ಈ ವಿಚಾರದಲ್ಲಿ ಕೇಂದ್ರ ವಿದೇಶಾಂಗ ಸಚಿವರ ತುರ್ತು ವೈಯಕ್ತಿಕ ಮಧ್ಯಸ್ಥಿಕೆಯನ್ನು ನಿರೀಕ್ಷಿಸುವುದಾಗಿ ಪತ್ರದಲ್ಲಿ ಹೇಳಿದ್ದಾರೆ.

