ಬಾಗಲಕೋಟೆ: ಬರ ಪರಿಸ್ಥಿತಿಯ ಅವಲೋಕಿಸಲು ಶುಕ್ರವಾರ ಬಾಗಲಕೋಟೆ ನಗರಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಜಿಲ್ಲಾ ಪಂಚಾಯತಿ ಸಭಾಭವನದಲ್ಲಿ ಅಧಿಕಾರಿಗಳ ಸಭೆ ನಡೆಸಿದ್ದಾರೆ.
ಈ ವೇಳೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಬಿಜೆಪಿ ರಾಜ್ಯಸಭೆ ಸದಸ್ಯ ನಾರಾಯಣಸಾ ಬಾಂಢಗೆ ಅವರು ಆರ್.ಎಸ್.ಎಸ್. ರಾಖಿ ಕಟ್ಟುವ ಮೂಲಕ ಕುತೂಹಲ ಮೂಡಿಸಿದ್ದಾರೆ. ಸಿಎಂ ಡಿ.ಕೆ. ಶಿವಕುಮಾರ್ ಸಭೆ ಮುಗಿದ ಮುಗಿಸಿದ ನಂತರ ಅವರ ಬಳಿಗೆ ಧಾವಿಸಿದ ನಾರಾಯಣಸಾ ಬಾಂಢಗೆ ಆರ್.ಎಸ್.ಎಸ್. ನ ರಾಖಿ ಕಟ್ಟುತ್ತೇನೆ ಎಂದು ಹೇಳಿದ್ದಾರೆ. ಆಗ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಗುತ್ತಲೇ ಕೈಮುಂದೆ ಮಾಡಿದ್ದಾರೆ. ಕೇಸರಿ ಬಣ್ಣದ ರಾಖಿ ಕಟ್ಟಿ ನಾರಾಯಣಸಾ ಬಾಂಢಗೆ ಮುಖ್ಯಮಂತ್ರಿಗಳ ಕೈ ಕುಲುಕಿ ಅಭಿನಂದಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಮುಖ್ಯಮಂತ್ರಿಗಳು ಖುಷಿಯಿಂದ ಕೇಸರಿ ರಾಖಿ ಕಟ್ಟಿಸಿಕೊಂಡರು. ನೀವು ರಾಜ್ಯ ರಕ್ಷಣೆ ಮಾಡಿ, ನಾವು ರಾಷ್ಟ್ರ ರಕ್ಷಣೆ ಮಾಡುತ್ತೇವೆ ಎಂದು ಸಿಎಂ ಅವರಿಗೆ ಹೇಳಿದ್ದೇನೆ ಎಂದು ತಿಳಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ನಾರಾಯಣಸಾ ಬಾಂಢಗೆ ಪೋಸ್ಟ್ ಮಾಡಿದ್ದು, ಧರ್ಮದ ರಕ್ಷಣೆ ನಾಡಿನ ರಕ್ಷಣೆ ನಮ್ಮ ಸಂಕಲ್ಪ, ಇದು ಸಂಘ ರಕ್ಷೆಯ ಸಂದೇಶ ಎಂದು ತಿಳಿಸಿದ್ದಾರೆ.
ಡಿ.ಕೆ. ಶಿವಕುಮಾರ್ ಉಪಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಸದನದಲ್ಲಿ ಆರ್.ಎಸ್.ಎಸ್. ಗೀತೆ ಹಾಡಿದ್ದರು. ಈಗ ಅವರು ಆರ್.ಎಸ್.ಎಸ್. ರಾಖಿ ಕಟ್ಟಿಸಿಕೊಂಡಿದ್ದು ಚರ್ಚೆಗೆ ಕಾರಣವಾಗಿದೆ.
ಬರ ಪರಿಶೀಲನಾ ಸಭೆ
ಯಾವುದೇ ಫಲಾನುಭವಿಗೆ ಬರ ಪರಿಹಾರ ನೀಡುವಾಗ ಪಾರದರ್ಶಕತೆ ಇರಬೇಕು. ಯಾವುದೇ ಅಕ್ರಮ ನಡೆದರೂ ಅದಕ್ಕೆ ಅಧಿಕಾರಿಗಳೇ ಹೊಣೆಗಾರರಾಗುತ್ತಾರೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ.
ಬಾಗಲಕೋಟೆ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ನಡೆದ ಬರ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ರೈತರ ನೋವನ್ನು ದೂರ ಮಾಡೋಣ; ಬರ ಪರೀಕ್ಷೆಯನ್ನು ಎದುರಿಸೋಣ. ರೈತರ ನೋವನ್ನು ಸರ್ಕಾರ ಹಾಗೂ ಅಧಿಕಾರಿಗಳು ಸೇರಿ ದೂರ ಮಾಡಬೇಕು. ಬರ ಪರಿಸ್ಥಿತಿ ಬಾಗಲಕೋಟೆ ಜಿಲ್ಲೆಯ ಸಾಕಷ್ಟು ಕಡೆ ಆವರಿಸಿದೆ. ಗದಗ ಜಿಲ್ಲೆಯ 1 ತಾಲೂಕನ್ನು ಮಾತ್ರ ಬರಪೀಡಿತ ಎಂದು ಘೋಷಿಸಲಾಗಿದೆ. ಗದಗ ಜಿಲ್ಲೆಯ 6 ತಾಲೂಕುಗಳ ಪರಿಸ್ಥಿತಿ ಬಾಗಲಕೋಟೆಗಿಂತ ಭೀಕರವಾಗಿದೆ. ಇಲ್ಲಿ ಅರ್ಧ ಭಾಗ ಹಸಿರಾಗಿದ್ದರೆ, ಇನ್ನರ್ಧ ಭಾಗದಲ್ಲಿ ಹಸಿರಿಲ್ಲ. ರೈತರ ನೋವು ನಿವಾರಣೆಗೆ ಸರ್ಕಾರ ಮತ್ತು ಅಧಿಕಾರಿಗಳು ಒಗ್ಗಟ್ಟಾಗಿ ಕೆಲಸ ಮಾಡಬೇಕು. ಬರದ ನೈಜ ಪರಿಸ್ಥಿತಿಯನ್ನು ಕೇಂದ್ರ ಅಧ್ಯಯನ ತಂಡಕ್ಕೆ ಮನವರಿಕೆ ಮಾಡಿಕೊಡಲು ಕ್ರಮ ಕೈಗೊಳ್ಳಲಾಗುವುದು ಎಂದರು.
ರೈತರಿಗೆ ಪರಿಹಾರವನ್ನು ಹೇಗೆ ನೀಡಬೇಕೆಂದು ಎಲ್ಲರೂ ಸೇರಿ ಸಮಾಲೋಚಿಸಬೇಕು. ಬಾಗಲಕೋಟೆ ಜಿಲ್ಲೆಯಲ್ಲಿ 40% ಮಳೆ ಕೊರತೆಯಾಗಿದೆ. ದೇಶದಲ್ಲಿ 50 ವರ್ಷಗಳಲ್ಲೇ ಭೀಕರ ಬರ ಪರಿಸ್ಥಿತಿ ಎದುರಾಗಿದೆ. ಜೊತೆಗೆ, ಬರದ ಮುನ್ಸೂಚನೆ ಕುರಿತು ಪ್ರಧಾನಮಂತ್ರಿಗಳೂ ಸಹ ಗಮನ ಸೆಳೆದಿದ್ದರು. ಅಧಿಕಾರಿಗಳು ಕುಡಿಯುವ ನೀರಿಗೆ ಆದ್ಯತೆ ನೀಡಬೇಕು. ಕುಡಿಯುವ ನೀರಿಗಾಗಿ ಪ್ರತಿ ಕ್ಷೇತ್ರಕ್ಕೆ 1 ಕೋಟಿ ರೂ. ನೀಡಲಾಗಿದೆ. ಜಿಲ್ಲಾಧಿಕಾರಿಗಳು ಪಿಡಿ ಖಾತೆಯಲ್ಲಿರುವ ಹಣವನ್ನು ಸರಿಯಾಗಿ ಬಳಸಿಕೊಳ್ಳಬೇಕು. ಜಿಲ್ಲಾಧಿಕಾರಿಗಳು, ಸಿಇಒ ಹಾಗೂ ಅಧಿಕಾರಿಗಳು ಕ್ಷೇತ್ರ ವೀಕ್ಷಣೆ ಮಾಡಬೇಕು ಎಂದು ಸೂಚಿಸಿದ್ದಾರೆ.

