ಮದ್ಯಪಾನವಿಲ್ಲ, ಆದ್ರೂ ಲಿವರ್ ಡ್ಯಾಮೇಜ್? ಭಾರತೀಯರಲ್ಲಿ ಹೊಸ ರೋಗದ ಆತಂಕ

ಭಾರತದಲ್ಲಿ ಈಗ ಮದ್ಯಪಾನಕ್ಕಿಂತಲೂ ಅಪಾಯಕಾರಿ ರೀತಿಯಲ್ಲಿ ಲಿವರ್ (ಯಕೃತ್ತು) ಸಂಬಂಧಿತ ಕಾಯಿಲೆಗಳು ಹರಡುತ್ತಿವೆ. ಇತ್ತೀಚಿನ ‘ಲ್ಯಾನ್ಸೆಟ್’ ಅಧ್ಯಯನದ ಪ್ರಕಾರ, ಭಾರತದ ಸುಮಾರು ಶೇ. 38.9 ರಷ್ಟು ವಯಸ್ಕರು ‘ಫ್ಯಾಟಿ ಲಿವರ್’ ಸಮಸ್ಯೆಯಿಂದ ಬಳಲುತ್ತಿದ್ದಾರೆ. ವಿಶೇಷವೆಂದರೆ, ಈ ಕಾಯಿಲೆಗೆ ಮದ್ಯಪಾನ ಕಾರಣವಲ್ಲ, ಬದಲಾಗಿ ಬದಲಾದ ಜೀವನಶೈಲಿ, ಬೊಜ್ಜು ಮತ್ತು ಮಧುಮೇಹವೇ ಮುಖ್ಯ ಕಾರಣ ಎಂದು ಸಂಶೋಧನೆ ತಿಳಿಸಿದೆ.

ಈ ಸ್ಥಿತಿಯನ್ನು ವೈದ್ಯಕೀಯ ಭಾಷೆಯಲ್ಲಿ ‘ಮೆಟಬಾಲಿಕ್ ಡಿಸ್ಫಂಕ್ಷನ್ ಅಸೋಸಿಯೇಟೆಡ್ ಸ್ಟೀಟೋಟಿಕ್ ಲಿವರ್ ಡಿಸೀಸ್’ (MASLD) ಎಂದು ಕರೆಯಲಾಗುತ್ತದೆ. ಭಾರತದ 27 ನಗರಗಳ ಸುಮಾರು 7,700 ವಯಸ್ಕರನ್ನು ಪರೀಕ್ಷೆಗೆ ಒಳಪಡಿಸಿದಾಗ ಈ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಈ ಪೈಕಿ ಅನೇಕರಲ್ಲಿ ಲಿವರ್ ಗಟ್ಟಿಯಾಗುವ ‘ಫೈಬ್ರೋಸಿಸ್’ ಲಕ್ಷಣಗಳು ಕಂಡುಬಂದಿದ್ದು, ಇದು ಮುಂದೆ ಲಿವರ್ ಕ್ಯಾನ್ಸರ್ ಅಥವಾ ಲಿವರ್ ಫೈಲ್ಯೂರ್‌ಗೆ ದಾರಿ ಮಾಡಿಕೊಡಬಹುದು.

ಏಕೀ ಆತಂಕ? ಫ್ಯಾಟಿ ಲಿವರ್ ಸಮಸ್ಯೆಯ ಆರಂಭಿಕ ಹಂತದಲ್ಲಿ ಯಾವುದೇ ಸ್ಪಷ್ಟ ಲಕ್ಷಣಗಳು ಕಾಣಿಸಿಕೊಳ್ಳುವುದಿಲ್ಲ. ಸಾಮಾನ್ಯ ರಕ್ತದ ಪರೀಕ್ಷೆಯಲ್ಲೂ ಇದು ಪತ್ತೆಯಾಗುವುದು ಕಷ್ಟ. ಬೊಜ್ಜು ಮತ್ತು ರಕ್ತದಲ್ಲಿನ ಸಕ್ಕರೆ ಅಂಶ ಹೆಚ್ಚಾದಂತೆ ಯಕೃತ್ತಿನಲ್ಲಿ ಕೊಬ್ಬು ಶೇಖರಣೆಯಾಗಿ ಅದು ಉರಿಯೂತಕ್ಕೆ ಕಾರಣವಾಗುತ್ತದೆ. ಭಾರತೀಯರಲ್ಲಿ ಅನುವಂಶಿಕವಾಗಿ ಇನ್ಸುಲಿನ್ ಪ್ರತಿರೋಧದ ಸಾಮರ್ಥ್ಯ ಕಡಿಮೆ ಇರುವುದರಿಂದ ಈ ಅಪಾಯ ಮತ್ತಷ್ಟು ಹೆಚ್ಚಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ತಡೆಗಟ್ಟುವುದು ಹೇಗೆ? ಲಿವರ್ ಕಾಯಿಲೆ ತೀವ್ರ ಸ್ವರೂಪ ಪಡೆಯುವ ಮೊದಲು ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳುವುದು ಅತಿ ಅಗತ್ಯ. ತೂಕ ಇಳಿಕೆ, ಸಂಸ್ಕರಿಸಿದ ಸಕ್ಕರೆಯಿಂದ ದೂರವಿರುವುದು, ಪ್ರತಿದಿನ ವ್ಯಾಯಾಮ ಮತ್ತು ಹಣ್ಣು-ತರಕಾರಿಗಳನ್ನು ಒಳಗೊಂಡ ಸಮತೋಲಿತ ಆಹಾರ ಸೇವನೆಯಿಂದ ಈ ಸಮಸ್ಯೆಯನ್ನು ಮೊದಲ ಹಂತದಲ್ಲೇ ಗುಣಪಡಿಸಬಹುದು. ಬೊಜ್ಜು ಅಥವಾ ಮಧುಮೇಹ ಇರುವವರು ನಿಯಮಿತವಾಗಿ ‘ಫೈಬ್ರೋ ಸ್ಕ್ಯಾನ್’ ಅಥವಾ ಅಲ್ಟ್ರಾಸೌಂಡ್ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ.

ದೇಶದಲ್ಲಿ ಸದ್ದಿಲ್ಲದೆ ಹರಡುತ್ತಿರುವ ಈ ‘ಲಿವರ್ ಎಪಿಡೆಮಿಕ್’ ತಡೆಯಲು ಮುನ್ನೆಚ್ಚರಿಕೆ ಮತ್ತು ಜಾಗೃತಿ ಮಾತ್ರ ಏಕೈಕ ದಾರಿ ಎಂದು ಲ್ಯಾನ್ಸೆಟ್ ವರದಿ ಒತ್ತಿ ಹೇಳಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read