ಟಿ20 ವಿಶ್ವಕಪ್ 2026ರ ತನ್ನ ಎರಡನೇ ಗುಂಪು ಹಂತದ ಪಂದ್ಯಕ್ಕಾಗಿ ದೆಹಲಿಗೆ ಆಗಮಿಸಿರುವ ಭಾರತ ತಂಡಕ್ಕೆ ಮುಖ್ಯ ಕೋಚ್ ಗೌತಮ್ ಗಂಭೀರ್ ಆತಿಥ್ಯ ನೀಡಿದ್ದಾರೆ. ಫೆಬ್ರವರಿ 12 ರಂದು ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಮೀಬಿಯಾ ವಿರುದ್ಧ ಪಂದ್ಯ ನಡೆಯಲಿದ್ದು, ಇದಕ್ಕೂ ಮುನ್ನ ತಂಡದ ಆಟಗಾರರಲ್ಲಿ ಆತ್ಮವಿಶ್ವಾಸ ಮತ್ತು ಒಗ್ಗಟ್ಟು ಹೆಚ್ಚಿಸಲು ಗಂಭೀರ್ ಈ ಔತಣಕೂಟ ಏರ್ಪಡಿಸಿದ್ದರು.
ಗೌತಮ್ ಗಂಭೀರ್ ಅವರ ದೆಹಲಿಯ ಖಾಸಗಿ ನಿವಾಸದಲ್ಲಿ.ನಾಯಕ ಸೂರ್ಯಕುಮಾರ್ ಯಾದವ್ ಸೇರಿದಂತೆ ಇಡೀ ಭಾರತೀಯ ತಂಡ ಮತ್ತು ಪೋಷಕ ಸಿಬ್ಬಂದಿ. ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಕೂಡ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.ಇದು ಗಂಭೀರ್ ಕೋಚ್ ಆದ ಮೇಲೆ ತಂಡಕ್ಕೆ ನೀಡುತ್ತಿರುವ ಎರಡನೇ ಔತಣಕೂಟವಾಗಿದೆ. ಈ ಹಿಂದೆ ಕಳೆದ ಅಕ್ಟೋಬರ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯ ವೇಳೆ ಅವರು ತಂಡವನ್ನು ಆಹ್ವಾನಿಸಿದ್ದರು.
ವಿಶ್ವಕಪ್ ಅಭಿಯಾನದ ಹಾದಿ:
ಭಾರತ ತಂಡವು ಶನಿವಾರ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಅಮೆರಿಕ (USA) ವಿರುದ್ಧ 29 ರನ್‌ಗಳ ಜಯ ದಾಖಲಿಸುವ ಮೂಲಕ ವಿಶ್ವಕಪ್ ಅಭಿಯಾನವನ್ನು ಶುಭಾರಂಭಗೊಳಿಸಿದೆ. ಈ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಸಿಡಿಸಿದ ಅಜೇಯ 84 ರನ್‌ಗಳ ಸಾಹಸದಿಂದ ಭಾರತ ಸುಸ್ಥಿತಿಗೆ ತಲುಪಿತ್ತು. ಬೌಲಿಂಗ್‌ನಲ್ಲಿ ಮೊಹಮ್ಮದ್ ಸಿರಾಜ್ 3 ವಿಕೆಟ್ ಪಡೆದು ಮಿಂಚಿದ್ದರು.
ಭಾರತ-ಪಾಕಿಸ್ತಾನ ಪಂದ್ಯದ ಅನಿಶ್ಚಿತತೆ:
ಫೆಬ್ರವರಿ 15 ರಂದು ಕೊಲಂಬೊದಲ್ಲಿ ನಡೆಯಬೇಕಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯದ ಮೇಲೆ ಇನ್ನೂ ಅನಿಶ್ಚಿತತೆಯ ಕಾರ್ಮೋಡ ಕವಿದಿದೆ. ಪಾಕಿಸ್ತಾನ ಸರ್ಕಾರವು ಭಾರತದ ವಿರುದ್ಧ ಆಡಬಾರದು ಎಂದು ಸೂಚಿಸಿರುವ ಹಿನ್ನೆಲೆಯಲ್ಲಿ ಬಾಯ್ಕಾಟ್ (Boycott) ಭೀತಿ ಎದುರಾಗಿದೆ. ಆದರೆ, ಭಾರತ ತಂಡವು ವೇಳಾಪಟ್ಟಿಯಂತೆ ಕೊಲಂಬೊಗೆ ಪ್ರಯಾಣಿಸಲು ಸಿದ್ಧವಾಗಿದೆ ಎಂದು ಸೂರ್ಯಕುಮಾರ್ ಯಾದವ್ ಖಚಿತಪಡಿಸಿದ್ದಾರೆ.

