ಹಲ್ಲು ನೋವು ಬಂತೆಂದರೆ ಅದು ಪ್ರಾಣ ಸಂಕಟಕ್ಕೆ ಸಮಾನ ಊಟ ಮಾಡಲು ಬಿಡಲ್ಲ, ನಿದ್ದೆ ಮಾಡಲೂ ಬಿಡಲ್ಲ. ಸಾಮಾನ್ಯವಾಗಿ ಸಿಹಿ ಪದಾರ್ಥಗಳ ಅತಿಯಾದ ಸೇವನೆ ಮತ್ತು ಹಲ್ಲುಗಳ ಸರಿಯಾದ ಸ್ವಚ್ಛತೆ ಇಲ್ಲದಿದ್ದರೆ ಬ್ಯಾಕ್ಟೀರಿಯಾಗಳು ಹಲ್ಲಿನಲ್ಲಿ ಕುಳಿ (Cavity) ಸೃಷ್ಟಿಸುತ್ತವೆ. ಈ ನೋವು ತೀವ್ರವಾದಾಗ ದಂತವೈದ್ಯರ ಬಳಿ ಹೋಗುವುದು ಅನಿವಾರ್ಯ. ಆದರೆ ಮಧ್ಯರಾತ್ರಿಯಲ್ಲೋ ಅಥವಾ ಆಸ್ಪತ್ರೆಗೆ ಹೋಗಲು ಸಾಧ್ಯವಾಗದ ತುರ್ತು ಸಂದರ್ಭದಲ್ಲೋ ನೋವು ಕಾಣಿಸಿಕೊಂಡರೆ ಏನು ಮಾಡುವುದು?
ಚಿಂತೆ ಬೇಡ ನಿಮ್ಮ ಕಿಚನ್ನಲ್ಲಿರುವ ಈ ಸರಳ ವಸ್ತುಗಳೇ ಈಗ ನಿಮ್ಮ ಫಸ್ಟ್ ಏಡ್ ಕಿಟ್. ನೋವು ಕಡಿಮೆ ಮಾಡಲು ಇಲ್ಲಿವೆ 7 ಅದ್ಭುತ ಮನೆಮದ್ದುಗಳು:
ಉಪ್ಪು ನೀರಿನ ಮ್ಯಾಜಿಕ್
ಇದು ಅತಿ ಸರಳ ಮತ್ತು ಪರಿಣಾಮಕಾರಿ ವಿಧಾನ. ಒಂದು ಲೋಟ ಉಗುರುಬೆಚ್ಚಗಿನ ನೀರಿಗೆ ಸ್ವಲ್ಪ ಉಪ್ಪು ಸೇರಿಸಿ 30 ಸೆಕೆಂಡ್ ಮುಕ್ಕಳಿಸಿ. ಉಪ್ಪು ನೈಸರ್ಗಿಕ ಬ್ಯಾಕ್ಟೀರಿಯಾ ನಿವಾರಕವಾಗಿ ಕೆಲಸ ಮಾಡಿ, ವಸಡು ನೋವನ್ನು ತಕ್ಷಣವೇ ತಗ್ಗಿಸುತ್ತದೆ.
ಲವಂಗದ ಎಣ್ಣೆ: ನೈಸರ್ಗಿಕ ಪೇನ್ ಕಿಲ್ಲರ್
ನಮ್ಮ ಅಜ್ಜಿ ಕಾಲದ ಈ ಮದ್ದು ಇಂದಿಗೂ ಬೆಸ್ಟ್ ಒಂದು ಹತ್ತಿ ಉಂಡೆಗೆ ಸ್ವಲ್ಪ ಲವಂಗದ ಎಣ್ಣೆಯನ್ನು ಹಚ್ಚಿ, ನೋವಿರುವ ಹಲ್ಲಿನ ಮೇಲಿಡಿ. ಇದರಲ್ಲಿರುವ ಅಂಶಗಳು ನೋವನ್ನು ಬೇಗನೇ ಶಮನಗೊಳಿಸುತ್ತವೆ.
ಪುದೀನಾ ಮತ್ತು ತೆಂಗಿನೆಣ್ಣೆ ಮಿಕ್ಸ್
ಪುದೀನಾದಲ್ಲಿರುವ ಮೆಂಥಾಲ್ ನೋವು ನಿವಾರಕವಾಗಿ ಕೆಲಸ ಮಾಡುತ್ತದೆ. ಐದಾರು ಹನಿ ಪುದೀನಾ ಎಣ್ಣೆಯನ್ನು ಅಷ್ಟೇ ಪ್ರಮಾಣದ ತೆಂಗಿನ ಎಣ್ಣೆಯೊಂದಿಗೆ ಬೆರೆಸಿ ಹತ್ತಿಯ ಸಹಾಯದಿಂದ ನೋವಿರುವ ಜಾಗಕ್ಕೆ ಹಚ್ಚಿ.
ತುಳಸಿ ಎಲೆಗಳ ಪವರ್
ತುಳಸಿಯಲ್ಲಿ ಸೋಂಕು ನಿವಾರಕ ಗುಣಗಳಿವೆ. ತುಳಸಿ ಎಲೆಗಳ ರಸವನ್ನು ತೆಗೆದು ನೋವಿರುವ ಹಲ್ಲಿಗೆ ಹಚ್ಚುವುದರಿಂದ ಸೋಂಕು ಕಡಿಮೆಯಾಗಿ ನೋವಿನಿಂದ ಮುಕ್ತಿ ಸಿಗುತ್ತದೆ.
ಐಸ್ ಪ್ಯಾಕ್ ಚಿಕಿತ್ಸೆ
ಹಲ್ಲು ನೋವಿನಿಂದ ಕೆನ್ನೆ ಊದಿಕೊಂಡಿದ್ದರೆ ಐಸ್ ಪ್ಯಾಕ್ ಅನ್ನು ಕೆನ್ನೆಯ ಹೊರಭಾಗದಲ್ಲಿ ಹಿಡಿಯಿರಿ. ಇದು ಆ ಜಾಗವನ್ನು ಮರಗಟ್ಟಿಸಿ ನೋವು ಮತ್ತು ಊತ ಎರಡನ್ನೂ ಕಡಿಮೆ ಮಾಡುತ್ತದೆ.
ಜೇಷ್ಠ ಮಧುವಿನ (Liquorice) ಬಳಕೆ
ವಸಡಿನ ಸಮಸ್ಯೆಗೆ ಇದು ರಾಮಬಾಣ. ರಾತ್ರಿ ಒಂದು ಲೋಟ ನೀರಿನಲ್ಲಿ ಜೇಷ್ಠ ಮಧುವನ್ನು ನೆನೆಸಿಡಿ. ಬೆಳಿಗ್ಗೆ ಎದ್ದ ತಕ್ಷಣ ಆ ನೀರಿನಿಂದ ಬಾಯಿ ಮುಕ್ಕಳಿಸಿದರೆ ಹಲ್ಲಿನ ಆರೋಗ್ಯ ಸುಧಾರಿಸುತ್ತದೆ.
ತುರ್ತು ಮಾತ್ರೆಗಳು
ನೋವು ತಡೆಯಲು ಅಸಾಧ್ಯವಾದರೆ ಐಬುಪ್ರೋಫಿನ್ ಅಥವಾ ಪ್ಯಾರಸಿಟಮಾಲ್ ಮಾತ್ರೆಗಳನ್ನು ತೆಗೆದುಕೊಳ್ಳಬಹುದು. ಆದರೆ ನೆನಪಿಡಿ, ಇದು ವೈದ್ಯರ ಸಲಹೆ ಮೇರೆಗೆ ಇರುವುದು ಉತ್ತಮ.

