ಫೆಬ್ರವರಿ 7ರಂದು ಬಹು ನಿರೀಕ್ಷಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಆರಂಭವಾಗಿದ್ದು, ಮೊದಲ ದಿನವೇ ಭಾರತ ಹಾಗೂ ಪಾಕಿಸ್ತಾನ ತಂಡಗಳ ಪಂದ್ಯಗಳು ನಡೆದವು. ಶ್ರೀಲಂಕಾದ ಕೊಲಂಬೊದಲ್ಲಿ ನಡೆದ ಉದ್ಘಾಟನಾ ಪಂದ್ಯದಲ್ಲಿ ಪಾಕಿಸ್ತಾನ ನೆದರ್ಲೆಂಡ್ಸ್ ವಿರುದ್ಧ ಕಣಕ್ಕಿಳಿದರೆ, ಅದೇ ದಿನ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಟೂರ್ನಿಯ ಮೂರನೇ ಪಂದ್ಯದಲ್ಲಿ ಭಾರತ ಯುಎಸ್ಎ ವಿರುದ್ಧ ಕಣಕ್ಕಿಳಿದಿತ್ತು.
ಎರಡೂ ತಂಡಗಳು ತಮ್ಮ ಪಂದ್ಯಗಳಲ್ಲಿ ಗೆದ್ದು ಶುಭಾರಂಭ ಮಾಡಿದವು. ಇದಾದ ಬಳಿಕ ಪಾಕಿಸ್ತಾನ ಯುಎಸ್ಎ ವಿರುದ್ಧ ಪಂದ್ಯವನ್ನಾಡಲಿದ್ದು, ಭಾರತ ನಮೀಬಿಯ ವಿರುದ್ಧ ಕಣಕ್ಕಿಳಿಯಲಿದೆ. ಈ ಪಂದ್ಯಗಳ ಬಳಿಕ ಮುಂದಿನ ಭಾನುವಾರ, ಫೆಬ್ರವರಿ 15ರಂದು ಕೊಲಂಬೊದಲ್ಲಿ ನಡೆಯಿರುವ ಟೂರ್ನಿಯ 27ನೇ ಪಂದ್ಯದಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಬೇಕಿದೆ.
ಆದರೆ ಈ ಪಂದ್ಯ ನಡೆಯುವುದು ಇನ್ನೂ ಸಹ ಅನುಮಾನವಾಗಿಯೇ ಉಳಿದುಕೊಂಡಿದೆ. ಹೌದು, ಪಾಕಿಸ್ತಾನ ಭಾರತದ ವಿರುದ್ಧ ಕಣಕ್ಕಿಳಿಯುವುದಿಲ್ಲ ಎಂದು ಹೇಳಿಕೊಂಡಿದ್ದು, ಈ ಅನುಮಾನಕ್ಕೆ ಕಾರಣವಾಗಿದೆ.
ಹೀಗೆ ಪಂದ್ಯವನ್ನು ಆಡುವುದಿಲ್ಲ ಎನ್ನುತ್ತಿರುವ ಪಾಕಿಸ್ತಾನ ಇದೀಗ 3 ಷರತ್ತುಗಳನ್ನು ವಿಧಿಸಿದ್ದು, ಇವುಗಳನ್ನು ಈಡೇರಿಸಿದರೆ ಭಾರತದ ವಿರುದ್ಧ ಕಣಕ್ಕಿಳಿಯಲಿದ್ದೇವೆ ಎಂದಿದೆ. ಹಾಗಾದರೆ ಭಾರತದ ವಿರುದ್ಧ ಪಾಕ್ ಪಂದ್ಯವನ್ನಾಡಬೇಕಾದರೆ ನಿರೀಕ್ಷಿಸುತ್ತಿರುವ ಮೂರು ಕೆಲಸಗಳೇನು ಎಂಬ ಮಾಹಿತಿ ಮುಂದಿದೆ.
1. ಐಸಿಸಿ ವರಮಾನದಲ್ಲಿ ಹೆಚ್ಚುವರಿ ಪಾಲು
ಪಾಕಿಸ್ತಾನ ಐಸಿಸಿಗೆ ಹಾಕಿರುವ ಮೊದಲ ಷರತ್ತು ಏನೆಂದರೆ ಐಸಿಸಿಗೆ ಬರುವ ವರಮಾನದಲ್ಲಿನ ಹಂಚಿಕೆಯಾಗುವ ಪಾಲಿನಲ್ಲಿ ಹೆಚ್ಚುವರಿ ಪಾಲನ್ನು ಕೇಳಿದೆ.
2. ಭಾರತದ ವಿರುದ್ಧ ಸರಣಿ ಆಯೋಜನೆ
ಇನ್ನು ಎರಡನೇ ಷರತ್ತು ಏನೆಂದರೆ ಈ ಹಿಂದೆ ನಡೆಯುತ್ತಿದ್ದ ಹಾಗೆ ಭಾರತ ಹಾಗೂ ಪಾಕಿಸ್ತಾನ ನಡುವಿನ ಸರಣಿಗಳನ್ನು ನಡೆಸಬೇಕು ಎಂದು ಪಾಕಿಸ್ತಾನ ಕೇಳಿಕೊಂಡಿದೆ. ಭಾರತ ಹಾಗೂ ಪಾಕಿಸ್ತಾನ ಬಿಕ್ಕಟ್ಟಿನ ಕಾರಣ ಭಾರತ ಪಾಕ್ ವಿರುದ್ಧದ ಸರಣಿಗಳನ್ನು ನಿಲ್ಲಿಸಿದ್ದು, ಇದೀಗ ಪಾಕ್ ಆ ಸರಣಿಗಳನ್ನು ಆಯೋಜಿಸಲು ಬೇಡಿಕೆ ಇಟ್ಟಿದೆ.
3. ಭಾರತದ ಆಟಗಾರರು ಕೈ ಕುಲುಕಬೇಕು
ಇನ್ನು ಕಳೆದ ಏಷ್ಯಾಕಪ್ ಟೂರ್ನಿಯ ವೇಳೆ ಭಾರತದ ಆಟಗಾರರು ಪಾಕಿಸ್ತಾನದ ಆಟಗಾರರ ಕೈಕುಲುಕದೇ ತೆರಳಿದ್ದರು. ಇದು ಕ್ರೀಡಾಸ್ಪೂರ್ತಿಯ ಪ್ರಶ್ನೆಯನ್ನು ಹುಟ್ಟುಹಾಕಿದ್ದಲ್ಲದೇ ಪಾಕಿಸ್ತಾನದ
ಆಕ್ರೋಶಕ್ಕೆ ಕಾರಣವಾಗಿತ್ತು. ಹೀಗೆ ಭಾರೀ ಚರ್ಚೆಗೆ ಕಾರಣವಾಗಿದ್ದ ಹ್ಯಾಂಡ್ ಶೇಕ್ ವಿವಾದವನ್ನು ಉಲ್ಲೇಖಿಸಿರುವ ಪಾಕ್ ಭಾನುವಾರ ನಡೆಯಲಿರುವ ಪಂದ್ಯದಲ್ಲಿ ಭಾರತದ ಆಟಗಾರರು ಕಡ್ಡಯವಾಗಿ ತಮ್ಮ ಜತೆ ಕೈಕುಲುಕಬೇಕು ಎಂದು ಷರತ್ತು ಹಾಕಿದೆ.

