ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಹೊಸನಗರ ತಾಲೂಕಿನ ರಿಪ್ಪನ್ ಪೇಟೆ ಸಮೀಪದ ಗವಟೂರು ಗ್ರಾಮದ ಪ್ರಯಾಣಿಕರ ತಂಗುದಾಣದಲ್ಲಿ ಭಾನುವಾರ 15 ದಿನದ ನವಜಾತ ಹೆಣ್ಣು ಶಿಶು ಪತ್ತೆಯಾಗಿದೆ.
ನಿರ್ಜನ ಪ್ರದೇಶದಲ್ಲಿರುವ ಬಸ್ ನಿಲ್ದಾಣದಿಂದ ರಾತ್ರಿ 9ರ ಸಮಯದಲ್ಲಿ ಮಗು ಅಳುವ ಶಬ್ದ ಕೇಳಿಸಿಕೊಂಡ ಗ್ರಾಮಸ್ಥರೊಬ್ಬರು ಸಮೀಪ ಹೋಗಿ ನೋಡಿದ್ದಾರೆ. ಈ ವೇಳೆ ಮಗು ಅಳುತ್ತಿರುವುದು ಖಚಿತವಾಗಿದ್ದು, ಮತ್ತಷ್ಟು ಗಮನಿಸಿದಾಗ ಕೈಚೀಲವೊಂದರಲ್ಲಿ ಬಟ್ಟೆ ಸುತ್ತಿದ್ದ ಮಗುವಿನೊಂದಿಗೆ ಹಾಲು ತುಂಬಿಟ್ಟಿದ್ದ ಬಾಟಲ್ ಕೂಡ ಇಟ್ಟಿರುವುದು ಕಂಡುಬಂದಿದೆ.
ಇದನ್ನು ಕಂಡ ಗ್ರಾಮಸ್ಥ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ತೆರಳಿದ ಪಿಎಸ್ಐ ರಾಜು ರೆಡ್ಡಿ ಮತ್ತು ಸಿಬ್ಬಂದಿ ಪರಿಶೀಲನೆ ನಡೆಸಿ ನವಜಾತ ಶಿಶುವನ್ನು ರಕ್ಷಣೆ ಮಾಡಿದ್ದಾರೆ. ಅನಾಥವಾಗಿ ಕಂಡುಬಂದ ಮಗುವಿನ ಆರೈಕೆ ಮತ್ತು ಚಿಕಿತ್ಸೆಗಾಗಿ ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಗುವಿನ ಪೋಷಕರ ಪತ್ತೆಗೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

