ಉತ್ತರ ಪ್ರದೇಶ: ಮಕ್ಕಳಿಲ್ಲದ ದಂಪತಿಗಳಿಗೆ ಮಗು ಕೊಡಿಸುವ ಹೆಸರಿನಲ್ಲಿ ನೇಪಾಳದ ಯುವತಿಯರನ್ನು ಹಣದ ಆಮಿಷವೊಡ್ಡಿ ಭಾರತಕ್ಕೆ ಕರೆತಂದು ಗರ್ಭಿಣಿಯರನ್ನಾಗಿ ಮಾಡಿ, ಹೆರಿಗೆ ಬಳಿಕ ವಾಪಸ್ ಕಳುಹಿಸುವ ಜಾಲವೊಂದು ಕಾರ್ಯನಿರ್ವಹಿಸುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ತನಿಖೆಯಲ್ಲಿ, ಇಂತಹ ಒಂದು ‘ಡೀಲ್’ಗೆ ₹1 ಕೋಟಿವರೆಗೆ ಹಣ ಪಡೆಯಲಾಗುತ್ತದೆ ಎಂದು ಮಧ್ಯವರ್ತಿಗಳು ಹೇಳಿರುವುದಾಗಿ ವರದಿಯಾಗಿದೆ. ಈ ಮೊತ್ತದಲ್ಲಿ ಯುವತಿಯರಿಗೆ ₹20–25 ಲಕ್ಷ ನೀಡಲಾಗುತ್ತಿದ್ದು, ಉಳಿದ ಹಣವನ್ನು ಮಧ್ಯವರ್ತಿಗಳು ಹಂಚಿಕೊಳ್ಳುತ್ತಾರೆ ಎನ್ನಲಾಗಿದೆ.
ನೇಪಾಳದ ಯುವತಿಯರನ್ನು ಹಣದ ಆಸೆ ತೋರಿಸಿ ಭಾರತಕ್ಕೆ ಕರೆತಂದು, ಮಕ್ಕಳಿಲ್ಲದ ದಂಪತಿಗಳಿಗೆ ಗರ್ಭಧಾರಣೆ ಮಾಡಿಸಿ ಮಗುವನ್ನು ಹೆರಿಸುವ ದಂಧೆಯೊಂದು ನಡೆಯುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಉತ್ತರ ಪ್ರದೇಶಕ್ಕೆ ಹೊಂದಿಕೊಂಡಿರುವ ಭಾರತ–ನೇಪಾಳ ಗಡಿಭಾಗದಲ್ಲಿ ಈ ಜಾಲ ಕಾರ್ಯನಿರ್ವಹಿಸುತ್ತಿದೆ ಎಂದು ತನಿಖೆ ವರದಿ ಮಾಡಿದೆ.
ವರದಿ ಪ್ರಕಾರ, ಮದುವೆಯಾಗದೇ ಮಹಿಳೆಯೊಬ್ಬರನ್ನು ಗರ್ಭಿಣಿಯಾಗಿಸಿ ಮಗುವನ್ನು ಪಡೆಯಲು ಮಧ್ಯವರ್ತಿಗಳು ₹1 ಕೋಟಿವರೆಗೆ ಹಣ ಪಡೆಯುತ್ತಾರೆ. ಈ ಮೊತ್ತದಲ್ಲಿ ಸಂಬಂಧಿಸಿದ ಯುವತಿಗೆ ಸುಮಾರು ₹20–25 ಲಕ್ಷ ನೀಡಲಾಗುತ್ತದೆ ಎಂದು ಆರೋಪಿಸಲಾಗಿದೆ.
ಮಕ್ಕಳಾಗದ ಕೆಲವು ದಂಪತಿಗಳು IVF ಬದಲು ಇಂತಹ ವ್ಯವಸ್ಥೆಯ ಮೂಲಕ ಮಗುವನ್ನು ಪಡೆಯಲು ಮುಂದಾಗುತ್ತಿದ್ದಾರೆ ಎನ್ನಲಾಗಿದೆ. ವಿಶೇಷವಾಗಿ ಮಹಿಳೆಗೆ ಗರ್ಭಧಾರಣೆ ಸಾಧ್ಯವಾಗದ ಸಂದರ್ಭಗಳಲ್ಲಿ ಈ ರೀತಿಯ ‘ವ್ಯವಸ್ಥೆ’ ಮಾಡಲಾಗುತ್ತಿದೆ ಎಂದು ವರದಿ ಹೇಳಿದೆ.
ಏನಿದು ಡೀಲ್
ಮಧ್ಯವರ್ತಿಗಳು ನೇಪಾಳದ ವಿವಿಧ ಪ್ರದೇಶಗಳಿಂದ ಯುವತಿಯರನ್ನು ಆಯ್ಕೆ ಮಾಡಿ ಭಾರತಕ್ಕೆ ಕರೆತರುತ್ತಾರೆ. ಅವರನ್ನು ಸುಮಾರು ಒಂದೂವರೆ ವರ್ಷ ಕಾಲ ಇರಿಸಿ, ಗರ್ಭಧಾರಣೆ ಮಾಡಿಸಿ, ಮಗು ಜನಿಸಿದ ಬಳಿಕ ಮತ್ತೆ ನೇಪಾಳಕ್ಕೆ ಕಳುಹಿಸಲಾಗುತ್ತದೆ ಎಂದು ತನಿಖೆಯಲ್ಲಿ ಆರೋಪಿಸಲಾಗಿದೆ.
ಬಯಲಾಗಿದ್ದು ಹೇಗೆ..?
ಭಾರತ–ನೇಪಾಳ ಗಡಿಯ ಸಮೀಪದ ಮೂಲವೊಂದರಿಂದ ನೇಪಾಳದ ಭುಟ್ವಾಲ್ನಲ್ಲಿದ್ದ ಸುಷ್ಮಾ ಥಾಪಾ ಎಂಬ ಮಹಿಳಾ ಮಧ್ಯವರ್ತಿಯ ಬಗ್ಗೆ ತನಿಖಾ ತಂಡಕ್ಕೆ ಮಾಹಿತಿ ಸಿಕ್ಕಿತು.ವರದಿಗಾರರು ಮಕ್ಕಳಿಲ್ಲದ ದಂಪತಿಯ ಸಂಬಂಧಿಕರಂತೆ ಯುವತಿಯೊಬ್ಬರನ್ನು ಸಂಪರ್ಕಿಸಿ, ಪತ್ನಿಗೆ ಗರ್ಭಧಾರಣೆ ಸಾಧ್ಯವಾಗುತ್ತಿಲ್ಲ. ಪತಿಗೆ ಲೈಂಗಿಕ ಸಂಬಂಧದ ಮೂಲಕ ಯುವತಿಯೊಬ್ಬಳು ಗರ್ಭಿಣಿಯಾಗಿ ಮಗುವಿಗೆ ಜನ್ಮ ನೀಡಬೇಕು ಎಂದು ತಿಳಿಸಿದರು.
ಯುವತಿ ಈ ಪ್ರಸ್ತಾಪಕ್ಕೆ ಒಪ್ಪಿಕೊಂಡ ಬಳಿಕ ಹಲವು ಬಾರಿ ಮಾತುಕತೆ ನಡೆಸಲಾಯಿತು. ಒಂದು ಸಂದರ್ಭದಲ್ಲಿ ಇಂತಹ ಪ್ರಕರಣವೊಂದಕ್ಕೆ ₹1 ಕೋಟಿ ಪಡೆದಿದ್ದಾಗಿ ಆಕೆ ಹೇಳಿರುವುದನ್ನು ವರದಿ ದಾಖಲಿಸಿದೆ.
ಯುವತಿಯರು ಹಣದ ಪ್ರತಿಫಲಕ್ಕಾಗಿ ಇಂತಹ ಸಂಬಂಧಕ್ಕೆ ಒಪ್ಪಿಕೊಳ್ಳುತ್ತಾರೆ ಎಂದು ಯುವತಿ ಹೇಳಿದ್ದಾಳೆ. ಗರ್ಭಧಾರಣೆ ಮತ್ತು ಹೆರಿಗೆ ಸಂದರ್ಭದಲ್ಲಿ ಯುವತಿಯನ್ನು ಹೆಚ್ಚಿನ ಕಾಳಜಿಯಿಂದ ನೋಡಿಕೊಳ್ಳಬೇಕು ಎಂದೂ ಆಕೆ ತಿಳಿಸಿದ್ದಾಳೆ.
ಒಪ್ಪಂದ ಪತ್ರ ವ್ಯವಸ್ಥೆ
ಯುವತಿಯರನ್ನು ನೇಪಾಳದ ಪರ್ವತ ಪ್ರದೇಶಗಳು, ಪಾಲ್ಪಾ, ಪೊಖರಾ ಸೇರಿದಂತೆ ವಿವಿಧ ಭಾಗಗಳಿಂದ ಕರೆತರಬಹುದು ಎಂದು ಯುವತಿ ಹೇಳಿದ್ದಾಳೆ.
ಮಧ್ಯವರ್ತಿಯ ಪ್ರಕಾರ, ಎರಡು ರೀತಿಯಲ್ಲಿ ಒಪ್ಪಂದ ಮಾಡಿಕೊಳ್ಳಬಹುದು. ಒಂದು ರೀತಿಯಲ್ಲಿ ಯಾವುದೇ ಅಧಿಕೃತ ದಾಖಲೆಗಳಿಲ್ಲದೆ ಪರಸ್ಪರ ಒಪ್ಪಿಗೆಯ ಆಧಾರದ ಮೇಲೆ ಯುವತಿಯನ್ನು ಕರೆದುಕೊಂಡು ಹೋಗಬಹುದು. ಮತ್ತೊಂದು ರೀತಿಯಲ್ಲಿ ಎರಡೂ ಕುಟುಂಬಗಳ ನಡುವೆ ಒಪ್ಪಂದ ಪತ್ರ ಮಾಡಿಕೊಳ್ಳಬಹುದು ಎಂದು ಆಕೆ ಹೇಳಿದ್ದಾಳೆ. ಹಿಂದೆ ಇದೇ ರೀತಿಯ ಪ್ರಕರಣದಲ್ಲಿ ಯುವತಿಯೊಬ್ಬಳನ್ನು ಅಮೆರಿಕಕ್ಕೆ ಕಳುಹಿಸಿದ್ದಾಗಿ ಕೂಡ ಯುವತಿ ಹೇಳಿದ್ದಾಳೆ ಎಂದು ತನಿಖಾ ವರದಿ ತಿಳಿಸಿದೆ.
ದೊಡ್ಡ ಜಾಲದ ಸುಳಿವು
ಸುಮಾರು ಒಂದು ತಿಂಗಳ ಕಾಲ ನಡೆದ ಮಾತುಕತೆಯ ಬಳಿಕ ಯುವತಿ ತನ್ನೊಂದಿಗೆ ಇನ್ನಷ್ಟು ಮಂದಿ ಏಜೆಂಟ್ಗಳು ಕೆಲಸ ಮಾಡುತ್ತಿದ್ದಾರೆ ಎಂದು ಒಪ್ಪಿಕೊಂಡಿದ್ದಾಳೆ ಎಂದು ವರದಿ ಹೇಳಿದೆ.
ಯುವತಿ ಗಡಿ ದಾಟಿ ಭಾರತಕ್ಕೆ ಹೇಗೆ ಬರುತ್ತಾಳೆ ಎಂದು ಕೇಳಿದಾಗ, ಮಹಿಳಾ ಏಜೆಂಟ್ಗಳ ಸಹಾಯದಿಂದ ಆಕೆಯನ್ನು ಗಡಿ ದಾಟಿಸಲಾಗುತ್ತದೆ. ಬಳಿಕ ಕಾರಿನಲ್ಲಿ ಆಕೆಯನ್ನು ಕರೆದುಕೊಂಡು ಹೋಗಲಾಗುತ್ತದೆ ಎಂದು ವರದಿ ತಿಳಿಸಿದೆ. ಯುವತಿಯನ್ನು ಕರೆದುಕೊಂಡು ಹೋದ ಬಳಿಕ ಆಕೆಯನ್ನು ಮಾರಾಟ ಮಾಡಬಾರದು, ವೇಶ್ಯಾವಾಟಿಕೆಗೆ ತಳ್ಳಬಾರದು ಅಥವಾ ಹಿಂಸಿಸಬಾರದು ಎಂದೂ ಕೂಡ ಎಚ್ಚರಿಸಿದ್ದಾರೆಎನ್ನಲಾಗಿದೆ.ಯುವತಿಗೆ ವೈದ್ಯಕೀಯ ಪರೀಕ್ಷೆ ಮಾಡಿಸಲಾಗುವುದು ಎಂದೂ ಏಜೆಂಟ್ಗಳು ತಿಳಿಸಿದ್ದಾರೆ.
‘ಈ ಹಿಂದೆ ಐದು ಬಾರಿ ಯುವತಿಯರನ್ನು ಕಳುಹಿಸಿದ್ದೇವೆ’
ಈ ರೀತಿಯ ಕೆಲಸವನ್ನು ಗಡಿಯುದ್ದಕ್ಕೂ ನಡೆಸಲಾಗುತ್ತಿದೆಯೇ ಎಂದು ಕೇಳಿದಾಗ, ಯುವತಿ ಈ ಹಿಂದೆ ಐದು ಬಾರಿ ಯುವತಿಯರನ್ನು ಕಳುಹಿಸಿದ್ದೇವೆ ಎಂದು ಹೇಳಿದ್ದಾಳೆ ಎಂದು ತನಿಖಾ ವರದಿ ತಿಳಿಸಿದೆ.ಈ ಜಾಲದಲ್ಲಿ ಇತರರೂ ಭಾಗಿಯಾಗಿದ್ದಾರೆ ಎಂದು ಆಕೆ ಹೇಳಿದ್ದಾಳೆ. ಆದರೆ IVF ಕೇಂದ್ರಗಳೊಂದಿಗೆ ತಾವು ನೇರವಾಗಿ ಕೆಲಸ ಮಾಡುವುದಿಲ್ಲ ಎಂದು ತಿಳಿಸಿದ್ದಾಳೆ.
ಯುವತಿಯರಿಗೆ ಸಿಗುವುದು ₹20–25 ಲಕ್ಷ?
ವರದಿ ಪ್ರಕಾರ, ಆರ್ಥಿಕವಾಗಿ ಸಂಕಷ್ಟದಲ್ಲಿರುವ ನೇಪಾಳಿ ಮಹಿಳೆಯರನ್ನು ಹಣದ ಆಮಿಷವೊಡ್ಡಿ ಈ ಜಾಲಕ್ಕೆ ಸೆಳೆಯಲಾಗುತ್ತದೆ. ಮಧ್ಯವರ್ತಿಗಳು ಪಡೆಯುವ ಒಟ್ಟು ಹಣದಲ್ಲಿ ಯುವತಿಯರಿಗೆ ಸುಮಾರು ₹20–25 ಲಕ್ಷ ನೀಡಲಾಗುತ್ತದೆ. ಉಳಿದ ₹75–80 ಲಕ್ಷ ಮೊತ್ತವನ್ನು ಜಾಲದಲ್ಲಿರುವ ವಿವಿಧ ವ್ಯಕ್ತಿಗಳು ಹಂಚಿಕೊಳ್ಳುತ್ತಾರೆ ಎಂದು ಆರೋಪಿಸಲಾಗಿದೆ.
ಒಂದು ವರ್ಷದಿಂದ ಒಂದೂವರೆ ವರ್ಷಗಳ ಕಾಲ ಮತ್ತೊಂದು ಕುಟುಂಬದ ಮನೆಯಲ್ಲಿ ವಾಸಿಸಬೇಕಾಗಿರುವುದರಿಂದ, ಮಧ್ಯವರ್ತಿಗಳು ಯುವತಿಯರಿಗೆ ವಿಶ್ವಾಸ ಮೂಡಿಸುವ ಪ್ರಯತ್ನ ಮಾಡುತ್ತಾರೆ ಎಂದು ವರದಿ ಹೇಳಿದೆ.
ನೇಪಾಳಿ ಮಹಿಳೆಯರನ್ನೇ ಏಕೆ ಆಯ್ಕೆ ಮಾಡಲಾಗುತ್ತಿದೆ?
ಮಹಿಳೆ ಮತ್ತೊಂದು ದೇಶದವರಾಗಿರುವುದರಿಂದ, ಮಗು ಬೆಳೆದ ಬಳಿಕ ಜೈವಿಕ ತಾಯಿ ಹಕ್ಕು ಅಥವಾ ಸಂಬಂಧದ ಬಗ್ಗೆ ಮುಂದೆ ಬಂದು ಕಾನೂನುಬದ್ಧವಾಗಿ ಪ್ರಶ್ನಿಸುವ ಸಾಧ್ಯತೆ ಕಡಿಮೆ ಎಂಬ ಕೆಲವರಲ್ಲಿರುವ ನಂಬಿಕೆ ಇದಕ್ಕೆ ಒಂದು ಕಾರಣ ಎಂದು ವರದಿ ವಿವರಿಸಿದೆ.
ಆದರೆ ಇಂತಹ ವ್ಯವಸ್ಥೆಯಲ್ಲಿ ಮಹಿಳೆಯೊಬ್ಬರು ದೌರ್ಜನ್ಯ ಅಥವಾ ಲೈಂಗಿಕ ಹಲ್ಲೆಯ ಬಗ್ಗೆ ದೂರು ನೀಡಿದರೆ, ಮಾನವ ಕಳ್ಳಸಾಗಣೆ ಸೇರಿದಂತೆ ಗಂಭೀರ ಕಾನೂನು ಪ್ರಕರಣಗಳು ದಾಖಲಾಗುವ ಸಾಧ್ಯತೆ ಇದೆ ಎಂದು ವರದಿ ಎಚ್ಚರಿಸಿದೆ.

