ಮಾವಿನ ಹಣ್ಣನ್ನು ಹಣ್ಣುಗಳ ರಾಜ ಎಂದು ಕರೆಯಲಾಗುತ್ತದೆ. ಇದರಲ್ಲಿ ಹೇರಳವಾದ ಆ್ಯಂಟಿ ಆಕ್ಸಿಡೆಂಟ್, ಫೈಬರ್ ಮತ್ತು ವಿಟಮಿನ್ ಗಳಿರುತ್ತವೆ. ಆದರೆ ಮಾವಿನ ಹಣ್ಣನ್ನು ಸೇವಿಸುವಾಗ ಕೆಲವು ಮುನ್ನೆಚ್ಚರಿಕೆಗಳನ್ನು ವಹಿಸುವುದು ಅತ್ಯಗತ್ಯ. ಕೆಲವೊಂದು ಆಹಾರ ಪದಾರ್ಥಗಳನ್ನು ಮಾವಿನ ಹಣ್ಣಿನ ಜೊತೆ ಸೇರಿಸುವುದು ಅಥವಾ ತಿಂದ ತಕ್ಷಣ ಸೇವಿಸುವುದರಿಂದ ಜೀರ್ಣಕ್ರಿಯೆಗೆ ತೊಂದರೆಯಾಗಬಹುದು.
ನೀರಿನ ಸೇವನೆ ಸಲ್ಲದು ಮಾವಿನ ಹಣ್ಣನ್ನು ತಿಂದ ತಕ್ಷಣ ನೀರು ಕುಡಿಯುವುದನ್ನು ತಪ್ಪಿಸಬೇಕು. ಹೀಗೆ ಮಾಡುವುದರಿಂದ ಹೊಟ್ಟೆ ನೋವು, ಅಜೀರ್ಣ, ಉಬ್ಬರ ಮತ್ತು ಅಸಿಡಿಟಿ ಉಂಟಾಗಬಹುದು. ಮಾವಿನ ಹಣ್ಣು ತಿಂದ ಕನಿಷ್ಠ ಅರ್ಧ ಗಂಟೆಯ ನಂತರ ನೀರು ಕುಡಿಯುವುದು ಉತ್ತಮ ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ.
ಮೊಸರು ಮತ್ತು ಮಾವು ಮಾವಿನ ಹಣ್ಣಿನ ಜೊತೆ ಅಥವಾ ತಿಂದ ತಕ್ಷಣ ಮೊಸರನ್ನು ಸೇವಿಸುವುದು ಹೊಟ್ಟೆ ಮತ್ತು ಚರ್ಮಕ್ಕೆ ಹಾನಿಕಾರಕ. ಮಾವಿನ ಹಣ್ಣು ದೇಹದಲ್ಲಿ ಉಷ್ಣತೆಯನ್ನು ಹೆಚ್ಚಿಸಿದರೆ, ಮೊಸರು ತಂಪು ನೀಡುತ್ತದೆ. ಈ ಎರಡು ವಿರುದ್ಧ ಗುಣಲಕ್ಷಣದ ಪದಾರ್ಥಗಳು ಸೇರಿದಾಗ ಚರ್ಮದ ಕಿರಿಕಿರಿ ಅಥವಾ ಹೊಟ್ಟೆಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.
ಹಾಗಲಕಾಯಿ ಮತ್ತು ಮಸಾಲೆ ಪದಾರ್ಥಗಳು ಮಾವಿನ ಹಣ್ಣಿನ ನಂತರ ಹಾಗಲಕಾಯಿಯನ್ನು ಸೇವಿಸುವುದು ಬಹಳ ಅಪಾಯಕಾರಿ. ಇದು ಹೊಟ್ಟೆಯಲ್ಲಿ ಆಮ್ಲೀಯತೆಯನ್ನು ಹೆಚ್ಚಿಸಿ ವಾಂತಿ, ವಾಕರಿಕೆ ಮತ್ತು ಉಸಿರಾಟದ ತೊಂದರೆಗೆ ಕಾರಣವಾಗಬಹುದು. ಅದೇ ರೀತಿ, ಮಾವಿನ ಹಣ್ಣಿನ ನಂತರ ಅತಿಯಾದ ಮಸಾಲೆ ಪದಾರ್ಥಗಳನ್ನು ಸೇವಿಸಿದರೆ ಹೊಟ್ಟೆಯಲ್ಲಿ ಶಾಖ ಹೆಚ್ಚಾಗಿ ಮುಖದ ಮೇಲೆ ಮೊಡವೆಗಳು ಮೂಡುವ ಸಾಧ್ಯತೆ ಇರುತ್ತದೆ.
ತಂಪು ಪಾನೀಯಗಳು ಮತ್ತು ಸಕ್ಕರೆ ಅಂಶ ಮಾವಿನ ಹಣ್ಣಿನಲ್ಲಿ ಈಗಾಗಲೇ ನೈಸರ್ಗಿಕವಾಗಿ ಹೆಚ್ಚಿನ ಸಕ್ಕರೆ ಅಂಶವಿರುತ್ತದೆ. ಇದರ ಜೊತೆಗೆ ತಂಪು ಪಾನೀಯ ಅಥವಾ ಮದ್ಯವನ್ನು ಸೇವಿಸಿದರೆ ದೇಹದಲ್ಲಿ ಸಕ್ಕರೆಯ ಮಟ್ಟ ದಿಢೀರ್ ಏರಿಕೆಯಾಗಬಹುದು. ಇದು ವಿಶೇಷವಾಗಿ ಮಧುಮೇಹಿಗಳಿಗೆ ಅತ್ಯಂತ ಅಪಾಯಕಾರಿಯಾಗಿದೆ. ಆದ್ದರಿಂದ ಮಾವಿನ ಹಣ್ಣಿನ ಸವಿ ಸವಿಯುವಾಗ ಈ ಸಂಗತಿಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದು ಒಳಿತು.

