HomeUncategorizedಅದ್ಭುತ ಶತಕ ಸಿಡಿಸಿದ ಹಮ್ಜಾ ಜಹೂರ್: ಅಂಡರ್-19 ಏಷ್ಯಾಕಪ್ ನಲ್ಲಿ ಭಾರತಕ್ಕೆ ಆಘಾತ: ಪಾಕಿಸ್ತಾನ ವಿರುದ್ಧ...

ಅದ್ಭುತ ಶತಕ ಸಿಡಿಸಿದ ಹಮ್ಜಾ ಜಹೂರ್: ಅಂಡರ್-19 ಏಷ್ಯಾಕಪ್ ನಲ್ಲಿ ಭಾರತಕ್ಕೆ ಆಘಾತ: ಪಾಕಿಸ್ತಾನ ವಿರುದ್ಧ 3 ವಿಕೆಟ್ ಗಳ ಸೋಲು

ಅಲ್ ಅಮೆರತ್ (ಒಮಾನ್): ಅಂಡರ್-19 ಏಷ್ಯಾಕಪ್ ಕ್ರಿಕೆಟ್ ಟೂರ್ನಿಯಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವಿನ ರೋಚಕ ಪಂದ್ಯದಲ್ಲಿ ಪಾಕಿಸ್ತಾನ ತಂಡ 3 ವಿಕೆಟ್‌ಗಳ ಗೆಲುವು ಸಾಧಿಸಿದೆ. ಭಾರತದ ಯುವ ಆಟಗಾರರು ನೀಡಿದ ಹೋರಾಟದ ನಡುವೆಯೂ ಪಾಕಿಸ್ತಾನದ ವಿಕೆಟ್ ಕೀಪರ್ ಬ್ಯಾಟರ್ ಹಮ್ಜಾ ಜಹೂರ್ ಅವರ ಅಮೋಘ ಶತಕದ ನೆರವಿನಿಂದ ಪಾಕಿಸ್ತಾನ ಗೆಲುವಿನ ನಗೆ ಬೀರಿದೆ.

ನವೆಂಬರ್ 8ರಂದು ಅಲ್ ಅಮೆರತ್ ಕ್ರಿಕೆಟ್ ಮೈದಾನದಲ್ಲಿ ನಡೆದ ಗುಂಪು ಹಂತದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆದರೆ ಆರಂಭದಲ್ಲೇ ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

ಅರ್ಜುನ್ ರಜಪೂತ್ ಏಕಾಂಗಿ ಹೋರಾಟ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಭಾರತದ ಆರಂಭಿಕ ಆಟಗಾರರು ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲರಾದರು. ಆರಂಭಿಕ ಆಟಗಾರ ಲಕ್ಷ್ಯ ರಾಯಚಂದಾನಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರೆ, ಆರ್ಯವೀರ್ ಸೆಹ್ವಾಗ್ 22 ರನ್ ಗಳಿಸಿದರು. ವಿಕೆ ವಿನೀತ್ 8 ರನ್ ಹಾಗೂ ಯಶವರ್ಧನ್ ಚೌಹಾಣ್ ಕೇವಲ ಒಂದು ರನ್ ಗಳಿಸಿ ನಿರ್ಗಮಿಸಿದರು.

ಈ ಹಂತದಲ್ಲಿ ಕ್ರೀಸ್‌ಗೆ ಬಂದ ಅರ್ಜುನ್ ರಜಪೂತ್ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದರು. ಪಾಕಿಸ್ತಾನದ ಬೌಲರ್‌ ಗಳನ್ನು ಸಮರ್ಥವಾಗಿ ಎದುರಿಸಿದ ಅವರು ಆಕರ್ಷಕ ಶತಕ ದಾಖಲಿಸಿದರು.

ಅರ್ಜುನ್ ಕೇವಲ 85 ಎಸೆತಗಳಲ್ಲಿ 107 ರನ್ ಗಳಿಸಿದರು. ಅವರ ಇನ್ನಿಂಗ್ಸ್‌ನಲ್ಲಿ 11 ಬೌಂಡರಿ ಹಾಗೂ ಐದು ಸಿಕ್ಸರ್‌ಗಳು ಸೇರಿದ್ದವು. ಅವರಿಗೆ ಕಾವ್ಯ ಪರೇಶ್ ಪಟೇಲ್ 23 ರನ್ ಗಳಿಸಿ ಸಾಥ್ ನೀಡಿದರು.

ಆದರೆ ಉಳಿದ ಬ್ಯಾಟರ್‌ ಗಳಿಂದ ಉತ್ತಮ ಬೆಂಬಲ ಸಿಗದ ಕಾರಣ ಭಾರತ 46.3 ಓವರ್‌ಗಳಲ್ಲಿ 208 ರನ್‌ಗಳಿಗೆ ಆಲೌಟ್ ಆಯಿತು.

ಪಾಕಿಸ್ತಾನದ ಪರ ರಿಜ್ವಾನುಲ್ಲಾ, ಅಲಿ ರಾಜಾ ಮತ್ತು ನಿಕಾಬ್ ಶಫೀಕ್ ತಲಾ ಮೂರು ವಿಕೆಟ್ ಪಡೆದು ಭಾರತದ ಬ್ಯಾಟಿಂಗ್ ಬೆನ್ನೆಲುಬು ಮುರಿದರು.

ಆರಂಭದಲ್ಲೇ ಕುಸಿದ ಪಾಕಿಸ್ತಾನ

209 ರನ್‌ಗಳ ಗುರಿ ಬೆನ್ನಟ್ಟಿದ ಪಾಕಿಸ್ತಾನ ತಂಡಕ್ಕೆ ಭಾರತದ ಬೌಲರ್‌ ಗಳು ಆರಂಭದಲ್ಲೇ ಆಘಾತ ನೀಡಿದರು. ಕೇವಲ 61 ರನ್‌ ಗಳಿಗೆ ಐದು ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡು ಸೋಲಿನ ಭೀತಿಗೆ ಸಿಲುಕಿತ್ತು.

ಈ ಸಂದರ್ಭದಲ್ಲಿ ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ ಗೆ ಬಂದ ಹಮ್ಜಾ ಜಹೂರ್ ತಂಡದ ಜವಾಬ್ದಾರಿ ಹೊತ್ತುಕೊಂಡರು. ಅವರಿಗೆ ಹಸ್ನೈನ್ ಅಬ್ಬಾಸ್ ದಾರ್ ಉತ್ತಮ ಸಾಥ್ ನೀಡಿದರು.

ಇಬ್ಬರೂ ಆರನೇ ವಿಕೆಟ್‌ಗೆ 107 ರನ್‌ಗಳ ಮಹತ್ವದ ಜೊತೆಯಾಟವಾಡಿ ತಂಡವನ್ನು ಸೋಲಿನ ಸುಳಿಯಿಂದ ಹೊರತಂದರು. ಹಸ್ನೈನ್ 67 ಎಸೆತಗಳಲ್ಲಿ 38 ರನ್ ಗಳಿಸಿ ನಿರ್ಗಮಿಸಿದರು.

ಆದರೆ ಮತ್ತೊಂದೆಡೆ ಹಮ್ಜಾ ಮಾತ್ರ ಕ್ರೀಸ್‌ನಲ್ಲಿ ಗಟ್ಟಿಯಾಗಿ ನಿಂತು ಭಾರತದ ಬೌಲರ್‌ ಗಳನ್ನು ಸಮರ್ಥವಾಗಿ ಎದುರಿಸಿದರು. ಕೊನೆಯವರೆಗೂ ಅಜೇಯರಾಗಿ ಉಳಿದ ಅವರು 108 ಎಸೆತಗಳಲ್ಲಿ 100 ರನ್ ಗಳಿಸಿದರು. ಅವರ ಇನ್ನಿಂಗ್ಸ್‌ ನಲ್ಲಿ 10 ಬೌಂಡರಿ ಹಾಗೂ ಮೂರು ಸಿಕ್ಸರ್‌ಗಳು ಸೇರಿದ್ದವು.

ಅಂತಿಮವಾಗಿ ಪಾಕಿಸ್ತಾನ 48.1 ಓವರ್‌ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 209 ರನ್ ಗಳಿಸಿ ಮೂರು ವಿಕೆಟ್‌ಗಳ ಗೆಲುವು ದಾಖಲಿಸಿತು.

ಭಾರತದ ಪರ ಮನಾಲ್ ಚೌಹಾಣ್ 32 ರನ್ ನೀಡಿ ಮೂರು ವಿಕೆಟ್ ಪಡೆದರೆ, ಮೋಹಿತ್ ಉಲ್ವಾ ಎರಡು ವಿಕೆಟ್ ಪಡೆದರು.

ಹಮ್ಜಾ ಜಹೂರ್‌ಗೆ ಪಂದ್ಯಶ್ರೇಷ್ಠ ಗೌರವ

ಪಾಕಿಸ್ತಾನದ ಪರ ಒತ್ತಡದ ಸಂದರ್ಭದಲ್ಲಿ ಅಜೇಯ ಶತಕ ಸಿಡಿಸಿ ತಂಡಕ್ಕೆ ಗೆಲುವು ತಂದುಕೊಟ್ಟ ಹಮ್ಜಾ ಜಹೂರ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಈ ಗೆಲುವಿನೊಂದಿಗೆ ಪಾಕಿಸ್ತಾನ ತಂಡ ಟೂರ್ನಿಯಲ್ಲಿ ಸತತ ಎರಡನೇ ಗೆಲುವು ದಾಖಲಿಸಿದೆ. ಭಾರತ ವಿರುದ್ಧದ ಈ ಪಂದ್ಯದಲ್ಲಿ ಅರ್ಜುನ್ ರಜಪೂತ್ ಅವರ ಶತಕದ ಹೋರಾಟ ಹಾಗೂ ಮನಾಲ್ ಚೌಹಾಣ್ ಅವರ ಬೌಲಿಂಗ್ ಪ್ರದರ್ಶನ ಗಮನ ಸೆಳೆದರೂ, ಹಮ್ಜಾ ಜಹೂರ್ ಅವರ ಅಮೋಘ ಬ್ಯಾಟಿಂಗ್ ಪಾಕಿಸ್ತಾನದ ಗೆಲುವಿಗೆ ಪ್ರಮುಖ ಕಾರಣವಾಯಿತು.

ಪಂದ್ಯದ ಸಂಕ್ಷಿಪ್ತ ಸ್ಕೋರ್

ಭಾರತ ಅಂಡರ್-19 – 208 (46.3 ಓವರ್)

ಪಾಕಿಸ್ತಾನ ಅಂಡರ್-19 – 209/7 (48.1 ಓವರ್)

ಭಾರತದ ಪರ: ಅರ್ಜುನ್ ರಾಜ್‌ಪೂತ್ – 107 ರನ್.

ಪಾಕಿಸ್ತಾನದ ಪರ: ಹಮ್ಜಾ ಜಹೂರ್ – ಅಜೇಯ 100 ರನ್.

ಭಾರತದ ಪರ ಬೌಲಿಂಗ್: ಮನಾಲ್ ಚೌಹಾಣ್ – 3 ವಿಕೆಟ್.

ಪಂದ್ಯಶ್ರೇಷ್ಠ: ಹಮ್ಜಾ ಜಹೂರ್.

ಫಲಿತಾಂಶ: ಪಾಕಿಸ್ತಾನಕ್ಕೆ 3 ವಿಕೆಟ್‌ ಗಳ ಜಯ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular