ವಿಜಯಪುರ : ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ವಿಕೆಟ್‌ಗಳು ಪತನಗೊಳ್ಳುತ್ತಿವೆ, ಇದು ಮುಂಬರುವ ಉಪಚುನಾವಣೆಯಲ್ಲಿ ಬಿಜೆಪಿಯ ಗೆಲುವಿಗೆ ದಾರಿಯಾಗಲಿದೆ” ಎಂದು ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಭವಿಷ್ಯ ನುಡಿದಿದ್ದಾರೆ.
ಇದೇ ವೇಳೆ ಸ್ವಪಕ್ಷದ ನಾಯಕತ್ವದ ವಿರುದ್ಧವೂ ಅಸಮಾಧಾನ ಹೊರಹಾಕಿದ ಅವರು, “ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ ಅದು ಹಿಂದುತ್ವಕ್ಕೆ ಸಿಕ್ಕ ಜಯವೇ ಹೊರತು, ರಾಜ್ಯ ಘಟಕದ ಅಧ್ಯಕ್ಷ ವಿಜಯೇಂದ್ರ ಅವರ ಪವಾಡವಲ್ಲ” ಎಂದು ಹೇಳುವ ಮೂಲಕ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದ್ದಾರೆ.
ಮುಂಬರುವ ಉಪಚುನಾವಣೆಯ ಫಲಿತಾಂಶಕ್ಕೂ ಮುನ್ನವೇ ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ಕಲಹ ಸ್ಫೋಟಗೊಂಡಿದ್ದು, ಇದು ಬಿಜೆಪಿ ಪಾಲಿಗೆ ಶುಭ ಸೂಚನೆಯಾಗಿದೆ ಎಂದು ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಭವಿಷ್ಯ ನುಡಿದಿದ್ದಾರೆ.ಉಪಚುನಾವಣೆಯ ಫಲಿತಾಂಶ ಬರುವ ಮೊದಲೇ ಕಾಂಗ್ರೆಸ್‌ನಲ್ಲಿ ನಾಯಕರ ನಡುವಿನ ಜಗಳದಿಂದ ‘ವಿಕೆಟ್’ಗಳು ಬೀಳುತ್ತಿವೆ. ಇದು ಕಾಂಗ್ರೆಸ್ ಎರಡು ಕ್ಷೇತ್ರಗಳಲ್ಲೂ ಸೋಲುತ್ತದೆ ಎನ್ನುವುದಕ್ಕೆ ಸ್ಪಷ್ಟ ಮುನ್ಸೂಚನೆ ಎಂದು ಯತ್ನಾಳ್ ಲೇವಡಿ ಮಾಡಿದ್ದಾರೆ
ಇದು ವಿಜಯೇಂದ್ರ ಪವಾಡವಲ್ಲ: ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ ಅದು ಬಿ.ವೈ. ವಿಜಯೇಂದ್ರ ಅವರ ಪವಾಡವಲ್ಲ. ಮಾಧ್ಯಮಗಳು ಈ ಗೆಲುವಿನ ಕ್ರೆಡಿಟ್ ಅನ್ನು ವಿಜಯೇಂದ್ರ ಅವರಿಗೆ ನೀಡಬಾರದು ಎಂದು ಅವರು ಕಿಡಿಕಾರಿದ್ದಾರೆ . ಕರ್ನಾಟಕದಲ್ಲಿ ಬಿಜೆಪಿ ನಾಯಕತ್ವ ಸಂಪೂರ್ಣವಾಗಿ ವಿಫಲವಾಗಿದೆ. ಒಂದು ವೇಳೆ ಪಕ್ಷಕ್ಕೆ ಗೆಲುವು ಲಭಿಸಿದರೆ ಅದು ‘ಹಿಂದುತ್ವ’ದ ಆಧಾರದ ಮೇಲೆ ಬರುತ್ತದೆಯೇ ಹೊರತು ರಾಜ್ಯ ನಾಯಕರ ಕಾರ್ಯವೈಖರಿಯಿಂದಲ್ಲ ಎಂದು ಅವರು ನೇರವಾಗಿಯೇ ಸ್ವಪಕ್ಷದ ನಾಯಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ
ಕಾಂಗ್ರೆಸ್ ಜಗಳ ಬಿಜೆಪಿಗೆ ಲಾಭ : ಕಾಂಗ್ರೆಸ್ ನಾಯಕರ ನಡುವಿನ ಶೀತಲ ಸಮರ ಮತ್ತು ಬಾಗಲಕೋಟೆ ಭಾಗದ ರಾಜಕೀಯ ಬೆಳವಣಿಗೆಗಳು ಬಿಜೆಪಿಗೆ ವರದಾನವಾಗಲಿವೆ. ಮುಸ್ಲಿಂ ನಾಯಕರು ಕಾಂಗ್ರೆಸ್‌ಗೆ ಬುದ್ಧಿ ಕಲಿಸಲು ಮುಂದಾಗಿರುವುದು ಬಿಜೆಪಿಗೆ ಲಾಭ ತಂದುಕೊಡಲಿದೆ ಎಂದು ಅವರು ವಿಶ್ಲೇಷಿಸಿದ್ದಾರೆ . ಒಟ್ಟಾರೆಯಾಗಿ, ಕಾಂಗ್ರೆಸ್‌ನ ಆಂತರಿಕ ಬಿಕ್ಕಟ್ಟು ಬಿಜೆಪಿಗೆ ದಾರಿಯಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸುತ್ತಲೇ, ಪಕ್ಷದ ಗೆಲುವಿನ ಶ್ರೇಯಸ್ಸು ಬಿ.ವೈ. ವಿಜಯೇಂದ್ರ ಅವರಿಗೆ ಸಲ್ಲಬಾರದು ಎಂಬ ನಿಲುವನ್ನು ಯತ್ನಾಳ್ ಪುನರುಚ್ಚರಿಸಿದ್ದಾರೆ.

