ಹಿಮಾಲಯದ ತಪ್ಪಲಿನ ಹುಲ್ಲುಗಾವಲಿನಲ್ಲಿ ಕಂಡುಬರುವ ಪಿಗ್ಮಿ ಹಾಗ್ ಹೆಸರಿನ ಹಂದಿಗಳು ಜಗತ್ತಿನಲ್ಲೇ ಅತ್ಯಂತ ಚಿಕ್ಕ ಗಾತ್ರದ ಹಂದಿಗಳಾಗಿವೆ.
1857ರಲ್ಲಿ ಮೊದಲ ಬಾರಿಗೆ ಈ ಜೀವಿಗಳನ್ನು ಪತ್ತೆ ಮಾಡಲಾಯಿತು. ನಂತರದ ದಿನಗಳಲ್ಲಿ ಈ ಹಂದಿಗಳ ಸಂಖ್ಯೆ ಕ್ಷೀಣಿಸುತ್ತಾ ಸಾಗಿ ಅಳಿದೇ ಹೋಗಿವೆಯೇನೋ ಎಂದೇ ಭಾವಿಸಲಾಗಿತ್ತು. ಆದರೆ 1970ರಲ್ಲಿ ಈ ಜೀವಿಗಳು ಇನ್ನೂ ಇವೆ ಎಂದು ಪತ್ತೆ ಮಾಡಲಾದ ಬಳಿಕ 1990ರ ದಶಕದಿಂದ ಇವುಗಳ ಉಳಿವಿಗೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.
ಕಂದು ಹಾಗೂ ಕಪ್ಪು ಬಣ್ಣವಿರುವ ಪಿಗ್ಮಿಗಳು ಕೇವಲ 8-10 ಇಂಚು ಉದ್ದವಿರುವ ಈ ಹಂದಿಗಳು 22 ಪೌಂಡ್ಗಿಂತ ಹೆಚ್ಚು ತೂಕ ಇರುವುದಿಲ್ಲ.
ಅಸ್ಸಾಂನಲ್ಲಿ ಈ ಹಂದಿಗಳನ್ನು ಸಂರಕ್ಷಿಸಲೆಂದು ತಾಣವೊಂದನ್ನು ಮಾಡಿಕೊಂಡು, ಅವುಗಳಿಗೆ ಆರೈಕೆ ಮಾಡಿ ಸ್ವಾಭಾವಿಕ ಜಗತ್ತಿಗೆ ಬಿಡಲಾಗಿತ್ತು. ಇದಾದ ಬಳಿಕ ಮಾಡಲಾದ ಸಂರಕ್ಷಣಾ ಕಾರ್ಯದ ನೆರವಿನಿಂದ ಇವುಗಳ ಸಂಖ್ಯೆ 300-400ರಷ್ಟಾಗಿದೆ. ಅಸ್ಸಾಂನ ಮನಸ್ ಹಾಗೂ ಒರಾಂಗ್ ರಾಷ್ಟ್ರೀಯ ಉದ್ಯಾನದಲ್ಲಿ ಈ ಹಂದಿಗಳು ಹೆಚ್ಚಾಗಿ ಕಂಡುಬರುತ್ತವೆ.