ಛತ್ತೀಸ್ಘಡದ ಅನಾಥಾಶ್ರಮವೊಂದರ ಸಿಬ್ಬಂದಿ, ಮಕ್ಕಳನ್ನು ಅಮಾನುಷವಾಗಿ ನಡೆಸಿಕೊಳ್ಳುತ್ತಿರುವ ರೀತಿ ತೋರುವ ವಿಡಿಯೋವೊಂದು ವೈರಲ್ ಆಗಿದೆ.
ಅನಾಥಾಶ್ರಮದ ಮಹಿಳಾ ಸಿಬ್ಬಂದಿ (ಮ್ಯಾನೇಜರ್, ಇಬ್ಬರು ಮಕ್ಕಳಿಗೆ ಬರ್ಬರವಾಗಿ ಎತ್ತಿ ನೆಲಕ್ಕೆ ಬಿಸಾಡುತ್ತಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದಾಗಿದೆ.
ಹೀಗೆ ಹಲ್ಲೆ ಮಾಡುತ್ತಿರುವ ಮಹಿಳೆಯನ್ನು ರಾಜ್ಯದ ಕಾಂಕೆರ್ ಪ್ರದೇಶದ ಪ್ರತಿಗ್ಯಾ ವಿಕಾಸ ಸಂಸ್ಥಾನ ಎನ್ಜಿಓದ ನಿರ್ವಾಹಕಿ ಸೀಮಾ ದ್ವಿವೇದಿ ಎಂದು ಗುರುತಿಸಲಾಗಿದೆ.
ಈ ವಿಡಿಯೋ ವೈರಲ್ ಆಗುತ್ತಲೇ ಎನ್ಜಿಓ ವಿರುದ್ಧ ಕ್ರಮಕ್ಕೆ ಮುಂದಾದ ಜಿಲ್ಲಾಡಳಿತ, ಈ ಅನಾಥಾಶ್ರಮದ ನಿರ್ವಹಣೆ ಮಾಡುವುದರಿಂದ ಎನ್ಜಿಒವನ್ನು ವಜಾಗೊಳಿಸಿದೆ. ಮಕ್ಕಳ ರಕ್ಷಣಾ ಕಾಯಿದೆ, 2015ರ ಅಡಿ ದ್ವಿವೇದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ತನ್ನ ನಡೆಯನ್ನು ಸಮರ್ಥನೆ ಮಾಡಿಕೊಂಡಿರುವ ದ್ವಿವೇದಿ, “ಪದೇ ಪದೇ ಹೇಳಿದರೂ ಸಹ ಅಪರಿಚಿತರಿಂದ ಚಾಕ್ಲೆಟ್ ಪಡೆದುಕೊಂಡಿದ್ದಾರೆ,” ಎಂದು ಮಕ್ಕಳ ಮೇಲೆ ದೂರು ಹೇಳಿದ್ದು, ಬಳಿಕ ತಮ್ಮ ವರ್ತನೆಗೆ ಕ್ಷಮೆಯಾಚಿಸಿದ್ದಾರೆ.