ಹೈದರಾಬಾದ್‌ನಲ್ಲಿ ಬುಧವಾರ ರಾತ್ರಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನವೊಂದಕ್ಕೆ ಬೆಂಕಿ ಹೊತ್ತಿಕೊಂಡಿದ್ದು, ಅದರ ಬ್ಯಾಟರಿಯಿಂದ ಹೊಗೆ ಮತ್ತು ಬೆಂಕಿ ಕಾಣಿಸಿಕೊಂಡಿದೆ. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಎಲೆಕ್ಟ್ರಿಕ್ ಸ್ಕೂಟರ್ ಮಾಲೀಕ ಸ್ನೇಹಿತನೊಂದಿಗೆ ಹೋಗುತ್ತಿದ್ದ ವೇಳೆ ವಾಹನ ಇದ್ದಕ್ಕಿದ್ದಂತೆ ನಿಂತಿದೆ. ಬ್ಯಾಟರಿಯಿಂದ ಹೊಗೆ ಬರಲಾರಂಭಿಸಿದ್ದು, ಅವರು ಅದನ್ನು ನಿಲ್ಲಿಸಿ ನಂತರ ದೂರ ಹೋಗುತ್ತಿದ್ದಂತೆ, ಬ್ಯಾಟರಿಯಿಂದ ಬೆಂಕಿ ಕಾಣಿಸಿಕೊಂಡಿದ್ದು, ವಾಹನಕ್ಕೆ ಆವರಿಸಿದೆ ಎಂದು ಎಲ್.ಬಿ. ನಗರ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಯೊಬ್ಬರು ಮಾಲೀಕರಿಂದ ಸ್ವೀಕರಿಸಿದ ಮನವಿಯ ಆಧಾರದ ಮೇಲೆ ತಿಳಿಸಿದ್ದಾರೆ.
ಕಳೆದ ತಿಂಗಳು, ನಿಜಾಮಾಬಾದ್ ಜಿಲ್ಲೆಯಲ್ಲಿ ಚಾರ್ಜಿಂಗ್ ಗಾಗಿ ಪ್ಲಗ್ ಇನ್ ಮಾಡಿದ ಎಲೆಕ್ಟ್ರಿಕ್ ಸ್ಕೂಟರ್ ಬ್ಯಾಟರಿ ಸ್ಫೋಟಗೊಂಡಾಗ 80 ವರ್ಷದ ವ್ಯಕ್ತಿಯೊಬ್ಬರು ಸಾವನ್ನಪ್ಪಿ ಕುಟುಂಬದ ಮೂವರು ಸದಸ್ಯರಿಗೆ ಸುಟ್ಟ ಗಾಯಗಳಾಗಿದ್ದವು.