ಹೈಕೋರ್ಟ್ ಆದೇಶವನ್ನ ಪಾಲಿಸುವ ಸಲುವಾಗಿ ತಡರಾತ್ರಿ ತನ್ನ ನಿರ್ಧಾರವನ್ನ ಹಿಂಪಡೆದ ಉತ್ತರಾಖಂಡ್ ಸರ್ಕಾರ ಮುಂದಿನ ಆದೇಶದವರೆಗೂ ಚಾರ್ ಧಾಮ್ ಯಾತ್ರೆ ಮುಂದೂಡಿಕೆಯಾಗಲಿದೆ ಎಂದು ಹೇಳಿದೆ. ಈ ಮೂಲಕ ಜುಲೈ 1 ರಂದು ನಿಗದಿಯಾಗಿದ್ದ ಈ ಯಾತ್ರೆ ಅನಿಶ್ಚಿತ ಕಾಲದವರೆಗೆ ಮುಂದೂಡಲ್ಪಟ್ಟಿದೆ.
ಚಾರ್ ಧಾಮ್ ಯಾತ್ರೆಯನ್ನ ನಡೆಸಬಾರದು ಎಂಬ ಕೋರ್ಟ್ ಆದೇಶಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದ ಉತ್ತರಾಖಂಡ್ ಸರ್ಕಾರ ಮೊದಲ ಯಾತ್ರೆಯನ್ನ ಜುಲೈ 1ರಂದು ಹಾಗೂ ಎರಡನೆ ಯಾತ್ರೆಯನ್ನ ಜುಲೈ 11ಕ್ಕೆ ನಿಗದಿ ಮಾಡಿತ್ತು. ಮಾತ್ರವಲ್ಲದೇ ಯಾತ್ರೆಗೆ ಆಗಮಿಸುವ ಭಕ್ತರಿಗೆಂದೇ ಕೊರೊನಾ ಮಾರ್ಗಸೂಚಿಗಳನ್ನ ತಯಾರು ಮಾಡಲಾಗಿತ್ತು.
ಸೀಮಿತ ಸಂಖ್ಯೆಯ ಭಕ್ತರೊಂದಿಗೆ ಚಾರ್ಧಾಮ್ ಯಾತ್ರೆ ನಡೆಸುವ ಕ್ಯಾಬಿನೆಟ್ ನಿರ್ಧಾರಕ್ಕೆ ಉತ್ತರಾಖಂಡ್ ಹೈಕೋರ್ಟ್ ತಡೆಯೊಡ್ಡಿದೆ. ಅಲ್ಲದೇ ಚಾರ್ ಧಾಮ್ ಯಾತ್ರೆಯ ವೈಭವವನ್ನ ನೇರ ಪ್ರಸಾರ ಮಾಡುವಂತೆ ಹೇಳಿದೆ.
ಜೂನ್ 25ರಂದು ಸೀಮಿತ ಸಂಖ್ಯೆಯ ಸ್ಥಳೀಯರಿಗೆ ಜುಲೈ 1ರಿಂದ ಚಾರ್ ಧಾಮ್ ಯಾತ್ರೆಯನ್ನ ನಡೆಸಲು ಸರ್ಕಾರ ನಿರ್ಧಾರ ಕೈಗೊಂಡಿತ್ತು. ಚಮೋಲಿ, ಉತ್ತರಕಾಶಿ, ಮತ್ತು ರುದ್ರಪ್ರಯಾಗ್ನಲ್ಲಿ ಯಾತ್ರೆಗೆ ಭಕ್ತಾದಿಗಳಿಗೆ ಅವಕಾಶ ನೀಡಲಾಗಿತ್ತು.