alex Certify ಚುನಾವಣೆಗೂ ಮುನ್ನ ಭೀಕರ ಕೃತ್ಯ: ಗುಂಡಿಕ್ಕಿ ಯುಪಿ ಸಚಿವರ ಆಪ್ತನ ಹತ್ಯೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚುನಾವಣೆಗೂ ಮುನ್ನ ಭೀಕರ ಕೃತ್ಯ: ಗುಂಡಿಕ್ಕಿ ಯುಪಿ ಸಚಿವರ ಆಪ್ತನ ಹತ್ಯೆ

ಛಾಟಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಉತ್ತರ ಪ್ರದೇಶದ ಸಚಿವ ಲಕ್ಷ್ಮೀ ನರೇನ್ ಚೌಧರಿ ಅವರ ಆಪ್ತ ರಾಮ್‌ವೀರ್ ಸಿಂಗ್ ಅವರನ್ನು ಬೈಕ್‌ನಲ್ಲಿ ಬಂದ ಮೂವರು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಇದು ಮಥುರಾದಲ್ಲಿ ನಡೆದಿರುವ ಮತದಾನ ಸಂಬಂಧಿತ ಹಿಂಸಾಚಾರದ ಮೊದಲ ಪ್ರಕರಣವಾಗಿದೆ.

ಪೈಗಾಂವ್ ಗ್ರಾಮದ ಮುಖಂಡರೂ ಆಗಿರುವ ಬಿಜೆಪಿ ಕಾರ್ಯಕರ್ತ ಮೃತ ರಾಮ್‌ವೀರ್ ಸಿಂಗ್, ಶನಿವಾರದಂದು ಕೋಸಿ ಕಾಲನ್ ಪ್ರದೇಶದ ಕೋಕಿಲವನದಲ್ಲಿರುವ ಶನಿದೇವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಪರಿಕ್ರಮ ಮಾಡಲು ಹೋಗುತ್ತಿದ್ದಾಗ ಈ ಘಟನೆ ನಡೆದಿದೆ. ಸಿಂಗ್ ಅವರು ಪರಿಕ್ರಮ ಮಾಡಲು ಹೋಗುತ್ತಿದ್ದಾಗ ಇಬ್ಬರು ವ್ಯಕ್ತಿಗಳು ಅವರನ್ನು ಹಿಂಬಾಲಿಸಿ, ಕೊಂದಿದ್ದಾರೆ. ಮೂರನೆಯವ ಬೈಕ್‌ನಲ್ಲಿ ಹೊರಗೆ ಕಾದು ಕುಳಿತಿದ್ದ. ದಾಳಿಕೋರರು ಹಲವು ಸುತ್ತು ಗುಂಡು ಹಾರಿಸಿದ್ದಾರೆ. ಕನಿಷ್ಠ ನಾಲ್ಕು ಗುಂಡುಗಳು ಅವರ ತಲೆಗೆ ತಗುಲಿದ ನಂತರ ಸಿಂಗ್ ಕೆಳಗೆ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದರು. ಕೃತ್ಯದ ನಂತರ ದಾಳಿಕೋರರು ಸ್ಥಳದಿಂದ ಪರಾರಿಯಾದರು ಎಂದು ಪ್ರತ್ಯಕ್ಷದರ್ಶಿಗಳು ಪೊಲೀಸರಿಗೆ ತಿಳಿಸಿದ್ದಾರೆ.

ಕಣ್ಣಿನ‌ ಮುಂದೆಯೆ ರಾಮ್‌ವೀರ್ ಸಿಂಗ್ ಅವರು ಸಾವಿಗೀಡಾದದ್ದನ್ನು ಕಂಡ ಸ್ಥಳೀಯ ನಿವಾಸಿಗಳು, ತಕ್ಷಣ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿ ಸುಮಾರು ಎರಡು ಗಂಟೆಗಳ ಕಾಲ ಆಗ್ರಾ-ದೆಹಲಿ ರಾಷ್ಟ್ರೀಯ ಹೆದ್ದಾರಿಯನ್ನು ತಡೆದು ಪ್ರತಿಭಟನೆ ನಡೆಸಿದರು. ಹಂತಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಲಕ್ಷ್ಮೀ ನಾರಾಯಣ ಚೌಧರಿ ಭರವಸೆ ನೀಡುವವರೆಗೂ ಅವರ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಪೊಲೀಸರಿಗೆ ಹಸ್ತಾಂತರಿಸಲು ಪ್ರತಿಭಟನಾಕಾರರು ಸಿದ್ಧರಿರಲಿಲ್ಲ. ಆದಷ್ಟು ಬೇಗ ಶಂಕಿತರನ್ನು ಬಂಧಿಸುವಂತೆ ಮತ್ತು ಸಿಂಗ್ ಅವರ ಕುಟುಂಬಕ್ಕೆ ತಕ್ಷಣ ಪೊಲೀಸ್ ಭದ್ರತೆಯನ್ನು ಒದಗಿಸುವಂತೆ ಚೌಧರಿ ಅವರು ಜಿಲ್ಲಾ ಮ್ಯಾಜಿಸ್ಟ್ರೇಟ್ ಮತ್ತು ಎಸ್‌ಎಸ್‌ಪಿ ಅವರನ್ನು ಕೇಳಿಕೊಂಡ ನಂತರವೇ ಪ್ರತಿಭಟನೆ ಕೈಬಿಟ್ಟಿದ್ದಾರೆ.

ಚುನಾವಣೆ ಬಿಟ್ಟು ಮಥುರಾ ರಸ್ತೆಯಲ್ಲಿ ಪ್ರತಿಭಟನೆ ನಡೆಸುತ್ತೇನೆ..!

ಈ ವೇಳೆ ಮಾತನಾಡಿರುವ ಸಚಿವ ಚೌಧರಿ, ಪ್ರಕರಣವನ್ನು ತಕ್ಷಣ ಬಗೆಹರಿಸದಿದ್ದರೆ, ನಾನು ಚುನಾವಣೆಯನ್ನು ಬಿಟ್ಟು ಮಥುರಾದ ರಸ್ತೆಗಳಲ್ಲಿ ಪ್ರತಿಭಟನೆ ನಡೆಸುತ್ತೇನೆ.‌ ಈಗ ಸಿಂಗ್ ಅವರ ಕುಟುಂಬದ ಜವಾಬ್ದಾರಿ ನನ್ನ ಮೇಲಿದೆ. ಸಿಂಗ್ ನನ್ನ ಮಗುವಿನಂತೆ. ನಾನು ಅವರಿಗೆ ಋಣಿಯಾಗಿರುತ್ತೇನೆ. ಅವರ ಸಾವಿಗೆ ನ್ಯಾಯ ಒದಗಿಸುವ ಮೂಲಕ ಅವರು ನನಗೆ ಮಾಡಿದ ಸಹಾಯಕ್ಕೆ ಮರುಪಾವತಿ ಮಾಡಲು ಪ್ರಯತ್ನಿಸುತ್ತೇನೆ. ಸಿಂಗ್ ಅವರು ಕಳೆದ ಹಲವಾರು ವರ್ಷಗಳಿಂದ ನನ್ನ ಚುನಾವಣಾ ಪ್ರಚಾರಕರಾಗಿದ್ದರು. ಇದು ನಿಜವಾಗಿಯೂ ನನ್ನ ಮೇಲಿನ ದಾಳಿಯಾಗಿದೆ ಎಂದು ಸಚಿವ ಚೌಧರಿ ಭಾವುಕರಾಗಿ ನುಡಿದಿದ್ದಾರೆ.

ಇನ್ನು, ಪ್ರಕರಣವನ್ನು ಭೇದಿಸಿ ಆರೋಪಿಗಳನ್ನು ಬಂಧಿಸಲು ತಂಡಗಳನ್ನು ರಚಿಸಲಾಗಿದೆ. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ದಾಳಿಕೋರರ ಸುಳಿವು ಪಡೆಯಲು ಕೃತ್ಯ ನಡೆದ ಸ್ಥಳದ ಎಲ್ಲಾ ಸಿಸಿ ಟಿವಿ ಕ್ಯಾಮೆರದ ದೃಶ್ಯಾವಳಿಗಳನ್ನು ಸ್ಕ್ಯಾನ್ ಮಾಡಲಾಗುತ್ತಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಮೃತರ ಕುಟುಂಬದ ಸದಸ್ಯರೊಂದಿಗೆ ಸಂಪರ್ಕದಲ್ಲಿದ್ದೇವೆ ಎಂದು ಎಸ್‌ಎಸ್‌ಪಿ ಗೌರವ್ ಗ್ರೋವರ್ ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...