alex Certify ಏಕಕಾಲದಲ್ಲಿ 2 ಸರ್ಕಾರಿ ಹುದ್ದೆ…! ಬೆಚ್ಚಿಬೀಳಿಸುವಂತಿದೆ ಬಾವ – ಬಾಮೈದುನನ ಸ್ಟೋರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಏಕಕಾಲದಲ್ಲಿ 2 ಸರ್ಕಾರಿ ಹುದ್ದೆ…! ಬೆಚ್ಚಿಬೀಳಿಸುವಂತಿದೆ ಬಾವ – ಬಾಮೈದುನನ ಸ್ಟೋರಿ

ಸರ್ಕಾರಿ ನೌಕರಿ ಪಡೆಯೋದು ಸುಲಭದ ಕೆಲಸವಂತೂ ಅಲ್ಲವೇ ಅಲ್ಲ. ಪರಿಶ್ರಮ, ಶ್ರದ್ಧೆ, ಅದೃಷ್ಟ ಇವೆಲ್ಲವೂ ಒಟ್ಟಿಗೆ ಇದ್ದಾಗ ಮಾತ್ರ ಇಂತಹದ್ದೊಂದು ಸಾಧನೆ ಮಾಡಬಹುದು. ಒಂದು ಸರ್ಕಾರಿ ಕೆಲಸವನ್ನ ಪಡೆಯೋದೇ ಕಷ್ಟವಾಗಿರೋ ಈ ಕಾಲದಲ್ಲಿ ಇಲ್ಲೊಬ್ಬ ವ್ಯಕ್ತಿ ಒಟ್ಟಿಗೆ ಎರಡೆರಡು ಸರ್ಕಾರಿ ಕೆಲಸ ಮಾಡಲು ಹೋಗಿ ಸಿಕ್ಕಿ ಬಿದ್ದಿದ್ದಾನೆ.

2016ರಿಂದ ಅನಿಲ್​ ಕುಮಾರ್​ ಎಂಬವರು ಮುಜಾಫರ್​ನಗರದ ಗ್ರಾಮದಲ್ಲಿ ಪ್ರಾಥಮಿಕ ಶಾಲೆಯ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿದ್ದರು. ಆದರೆ ಈ ಐದು ವರ್ಷಗಳಲ್ಲಿ ಅನಿಲ್​ ಕುಮಾರ್​ ಕೇವಲ ಶಿಕ್ಷಕನಾಗಿ ಮಾತ್ರವಲ್ಲದೇ ಅಲ್ಲಿಂದ 140 ಕಿ.ಮೀ. ದೂರದಲ್ಲಿರುವ ಮೊರಾದಾಬಾದ್​ನಲ್ಲಿ ಪೊಲೀಸ್​ ಇಲಾಖೆಯಲ್ಲೂ ಸೇವೆ ಸಲ್ಲಿಸುತ್ತಿದ್ದರು. ಮೊದಲೇ ಪೊಲೀಸ್​ ಇಲಾಖೆಯಲ್ಲಿ ನೇಮಕಗೊಂಡಿದ್ದ ಅನಿಲ್​ ಕುಮಾರ್​ ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿಯೂ ಪಾಸ್​ ಆಗಿದ್ದರು. ಶಿಕ್ಷಕನಾಗಿ ನೇಮಕವಾದ ಬಳಿಕವೂ ಅನಿಲ್​ ತಮ್ಮ ಹಿಂದಿನ ಸರ್ಕಾರಿ ಕೆಲಸಕ್ಕೆ ರಾಜೀನಾಮೆಯನ್ನ ನೀಡಿರಲಿಲ್ಲ. ಬದಲಾಗಿ ಶಿಕ್ಷಕ ವೃತ್ತಿಯನ್ನ ತಾನು ಮಾಡುತ್ತಾ ಪೊಲೀಸ್​ ಇಲಾಖೆಯ ತುರ್ತು ಪ್ರತಿಕ್ರಿಯೆ ವಿಭಾಗದ ಕೆಲಸವನ್ನ ತನ್ನ ಸೋದರ ಸಂಬಂಧಿಗೆ ನೀಡಿದ್ದರು.

ಗುರುವಾರ ಮೊರಾದಾಬಾದ್​ನ ಠಾಕೂರ್​ದ್ವಾರ ಪೊಲೀಸ್​ ಠಾಣೆಗೆ ಕರೆಯೊಂದು ಬಂದಿತ್ತು. ಇದರಲ್ಲಿ ಎಸ್​ಹೆಚ್​​ಒ ಸತ್ಯೇಂದ್ರ ಸಿಂಗ್​ ನೀಡಿದ ದೂರಿನ ಆಧಾರದಲ್ಲಿ ಎಫ್​ಐಆರ್​ ದಾಖಲಿಸಲಾಗಿದ್ದು ಪೊಲೀಸ್​ ಸಿಬ್ಬಂದಿ ಅನಿಲ್​ ಕುಮಾರ್​​ರ ಗುರುತಿನ ಕಾರ್ಡ್​ನ್ನು ಬೇರೊಬ್ಬರು ಬಳಕೆ ಮಾಡ್ತಿದ್ದಾರೆ ಎಂದು ಉಲ್ಲೇಖಿಸಲಾಗಿತ್ತು. ಈ ದೂರಿನ ಬಳಿಕ 112 ಘಟಕದ ಸಾರ್ವಜನಿಕ ಪ್ರತಿಕ್ರಿಯೆ ವಾಹನದಲ್ಲಿ ಸೇವೆ ಸಲ್ಲಿಸುತ್ತಿದ್ದ ಅನಿಲ್​ರನ್ನ ಕರೆಸಲಾಯ್ತು. ಅನಿಲ್​ ಬಳಿ ಸಾಕಷ್ಟು ಪ್ರಶ್ನೆಗಳನ್ನೂ ಕೇಳಲಾಯ್ತು. ಅನಿಲ್​ ಶೌಚಾಲಯಕ್ಕೆ ಹೋಗಲು ಅನುಮತಿ ಕೇಳಿದ ವೇಳೆಯಲ್ಲಿ ಪೊಲೀಸ್​ ಮುಂದೆ ನಿಂತಿರುವ ಅನಿಲ್​ಗೂ ಹಾಗೂ ಸರ್ಕಾರಿ ದಾಖಲೆಗಳಲ್ಲಿ ಇರುವ ಅನಿಲ್​ ಮುಖಕ್ಕೂ ಹೋಲಿಕೆ ಇಲ್ಲ ಎಂಬ ವಿಚಾರ ಬೆಳಕಿಗೆ ಬಂದಿದೆ. ಹೆಚ್ಚಿನ ವಿಚಾರಣೆ ವೇಳೆ ಈತ ಅನಿಲ್​​ರ ಪತ್ನಿಯ ಅಣ್ಣ ಸುನಿಲ್​ ಕುಮಾರ್​ ಎಂದು ತಿಳಿದಿದೆ.

ಅನಿಲ್​ ಹಾಗೂ ಸುನಿಲ್​ 12ನೇ ತರಗತಿಯಿಂದಲೇ ಒಬ್ಬರನ್ನೊಬ್ಬರು ಬಲ್ಲವರಾಗಿದ್ದರು. ಅನಿಲ್​​ ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ ಉತ್ತೀರ್ಣನಾಗುತ್ತಿದ್ದಂತೆಯೇ ತನ್ನ ಪೊಲೀಸ್​ ಇಲಾಖೆಯ ಕೆಲಸದ ಜಾಗಕ್ಕೆ ಸುನೀಲ್​ನ್ನು ಕಳಿಸಿದ್ದ. ತನ್ನ ಗುರುತು ಯಾರಿಗೂ ಸಿಗಬಾರದು ಎಂಬ ಕಾರಣಕ್ಕೆ ಅನಿಲ್​ ಮೊರಾದಾಬಾದ್​ಗೆ ವರ್ಗಾವಣೆ ಕೇಳಿದ್ದ. ಅನಿಲ್​ ಜಾಗದಲ್ಲಿ ಸುನೀಲ್​ ಮೊರಾದಾಬಾದ್​ನಲ್ಲಿ ಸೇವೆ ಸಲ್ಲಿಸಲು ತೆರಳಿದ್ದ.

ಮುಜಾಫರ ನಗರದಲ್ಲಿ ಶಿಕ್ಷಕನಾಗಿದ್ದ ಅನಿಲ್​​ 2017ರಲ್ಲಿ ಸುನೀಲ್​ ಸಹೋದರಿಯನ್ನ ವಿವಾಹವಾಗಿದ್ದ. ಅನಿಲ್​ ತನ್ನ ಸರ್ವೀಸ್​ ರಿವಾಲ್ವರ್​​ನ್ನೂ ಸುನೀಲ್​ಗೆ ನೀಡಿದ್ದ ಎನ್ನಲಾಗಿದೆ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಪೊಲೀಸರು ಇಬ್ಬರನ್ನೂ ಜೈಲಿಗೆ ಅಟ್ಟಿದ್ದಾರೆ. ಹಾಗೂ ಇವರಿಬ್ಬರ ಈ ಕಳ್ಳಾಟಕ್ಕೆ ಇನ್ನೂ ಯಾರ್ಯಾರ ಪ್ರೇರಣೆ ಇದೆ ಅನ್ನೋದರ ಬಗ್ಗೆ ತನಿಖೆ ಮುಂದುವರಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...