alex Certify SHOCKING: ಪೊಲೀಸ್ ಠಾಣೆ ಎದುರಲ್ಲೇ ಗ್ಯಾಂಗ್ ರೇಪ್ ಸಂತ್ರಸ್ತೆ ವಿಷ ಕುಡಿದು ಸಾವು, SHO ಸಸ್ಪೆಂಡ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING: ಪೊಲೀಸ್ ಠಾಣೆ ಎದುರಲ್ಲೇ ಗ್ಯಾಂಗ್ ರೇಪ್ ಸಂತ್ರಸ್ತೆ ವಿಷ ಕುಡಿದು ಸಾವು, SHO ಸಸ್ಪೆಂಡ್

ಲಖ್ನೋ: ಸಾಮೂಹಿಕ ಅತ್ಯಾಚಾರಕ್ಕೊಳಗಾದ ಯುವತಿ ಪೊಲೀಸ್ ನಿಷ್ಕ್ರಿಯತೆ ವಿರೋಧಿಸಲು ಪೊಲೀಸ್ ಠಾಣೆಯ ಮುಂದೆಯೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಉತ್ತರಪ್ರದೇಶದ ಅಜಮ್‌ಗಢದಲ್ಲಿ ಶನಿವಾರ ಘಟನೆ ನಡೆದಿದೆ. ಘಟನೆಯ ನಂತರ ತನಿಖೆಯಲ್ಲಿ ನಿರ್ಲಕ್ಷ್ಯ ತೋರಿದ ಕಾರಣ ಸಂಬಂಧಪಟ್ಟ ಪೊಲೀಸ್ ಠಾಣೆಯ ಎಸ್‌ಹೆಚ್‌ಒ ಅವರನ್ನು ಪೊಲೀಸ್ ವರಿಷ್ಠಾಧಿಕಾರಿ ಸುಧೀರ್ ಕುಮಾರ್ ಸಿಂಗ್ ಅಮಾನತು ಮಾಡಿದ್ದಾರೆ. ಆರೋಪಿಗಳನ್ನು ಬಂಧಿಸಲು ಮೂರು ತಂಡಗಳನ್ನು ರಚಿಸಲಾಗಿದೆ.

54 ವರ್ಷದ ಮಹಿಳೆ, ಮೆಹನಾಜಪುರ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯ ನಿವಾಸಿಯಾಗಿದ್ದು, ತನ್ನ ದೂರನ್ನು ದಾಖಲಿಸಲು ಕಳೆದ ಹಲವು ದಿನಗಳಿಂದ ಪ್ರಯತ್ನಿಸುತ್ತಿದ್ದರು. ಆದರೆ, ಪೊಲೀಸರು ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳಲು ನಿರ್ಲಕ್ಷ್ಯ ತೋರಿದ್ದರು. ಇದರಿಂದ ವಿಚಲಿತರಾದ ಸಂತ್ರಸ್ತೆ ವಿಷ ಸೇವಿಸಿದ ನಂತರ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು. ಆಕೆಯ ಪರಿಸ್ಥಿತಿ ಹದಗೆಟ್ಟಿದ್ದರಿಂದ, ಅವಳನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಯಿತು ಆದರೆ, ಆಸ್ಪತ್ರೆಗೆ ತೆರಳುವ ಮಾರ್ಗಮಧ್ಯೆ ಮೃತಪಟ್ಟಿದ್ದಾಳೆ.

ಮಹಿಳೆ ಅಕ್ಟೋಬರ್ 5 ರಂದು ಪೊಲೀಸ್ ತುರ್ತು ಸಂಖ್ಯೆಗೆ ಕರೆ ಮಾಡಿ ಅನಿಲ್ ಸಿಂಗ್ ಮತ್ತು ಇನ್ನೊಬ್ಬ ವ್ಯಕ್ತಿ ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಹೇಳಿದ್ದಾರೆ. ಪತಿಯ ಜೊತೆಗೆ ಸಂತ್ರಸ್ತೆ ಔಪಚಾರಿಕ ದೂರು ನೀಡಲು ಪೊಲೀಸ್ ಠಾಣೆಗೆ ಆಗಮಿಸಿ ಲಿಖಿತ ದೂರನ್ನು ಸಹ ನೀಡಿದ್ದಾರೆ. ಆದರೆ, ಸಂತ್ರಸ್ತೆಯ ಪತಿಯ ಆರೋಪದ ಪ್ರಕಾರ, ಇನ್ಸ್‌ ಪೆಕ್ಟರ್ ಚುನ್ನಾ ಎಸ್ ಮತ್ತು ಇನ್ಸ್‌ ಪೆಕ್ಟರ್ ವಿನೋದ್ ಕುಮಾರ್ ಸಂತ್ರಸ್ತೆಯನ್ನು ನಾಲ್ಕು ಗಂಟೆಗಳ ಕಾಲ ಪೊಲೀಸ್ ಠಾಣೆಯಲ್ಲಿ ಕೂರಿಸಿದ್ದಾರೆ. ಸಂಧಾನಕ್ಕಾಗಿ ಸಂತ್ರಸ್ತೆಗೆ ಒತ್ತಡ ಹೇರಿದ್ದಾರೆ.

ಘಟನೆಯ ನಾಲ್ಕು ದಿನಗಳ ನಂತರವೂ ಆರೋಪಿಗಳ ವಿರುದ್ಧ ಪೊಲೀಸ್ ಕೇಸ್ ದಾಖಲಾಗಿಲ್ಲ. ರಾಜಿ ಮಾಡಿಕೊಳ್ಳುವಂತೆ ಒತ್ತಡ ಹೇರುತ್ತಲೇ ಇದ್ದರು ಎಂದು ಸಂತ್ರಸ್ತೆಯ ಪತಿ ಆರೋಪಿಸಿದ್ದಾರೆ.

ಎಸ್ಪಿ ಸುಧೀರ್ ಕುಮಾರ್ ಸಿಂಗ್ ಅವರು, ಸಂತ್ರಸ್ತೆ ಪೊಲೀಸ್ ಠಾಣೆಯ ಮುಂದೆ ವಿಷ ಸೇವಿಸಿದ್ದಾರೆ ಎಂಬ ವರದಿಗಳನ್ನು ನಿರಾಕರಿಸಿದ್ದು, ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 376(ಅತ್ಯಾಚಾರ) ಮತ್ತು 306(ಆತ್ಮಹತ್ಯೆಗೆ ಕುಮ್ಮಕ್ಕು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪ್ರಕರಣದಲ್ಲಿ ನಿರ್ಲಕ್ಷ್ಯ ತೋರಿದ್ದಕ್ಕಾಗಿ ಇನ್ಸ್‌ ಪೆಕ್ಟರ್ ಚುನ್ನಾ ಸಿಂಗ್ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಹೇಳಿದ್ದಾರೆ.

ಘಟನೆಯ ಬಗ್ಗೆ ಸಮಾಜವಾದಿ ಪಕ್ಷದ ವರಿಷ್ಠ ಮತ್ತು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಟ್ವೀಟ್ ಮಾಡಿದ್ದು, ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಅಜಂಗಢದಲ್ಲಿ ಅತ್ಯಾಚಾರದ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳದ ಕಾರಣ ಪೊಲೀಸ್ ಠಾಣೆ ಎದುರು ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು ತುಂಬಾ ದುಃಖಕರ. ರಾಜ್ಯ ಸರ್ಕಾರ ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳು ಮತ್ತು ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...