ಭಾರತದ ಸ್ಟಾರ್ ಆರ್ಚರಿ ಆಟಗಾರ್ತಿಯರಾದ ದೀಪಿಕಾ ಕುಮಾರಿ ಹಾಗೂ ಅಟಾನು ದಾಸ್ ಒಲಿಂಪಿಕ್ಸ್ ಪಂದ್ಯಾವಳಿಗೂ ಮುನ್ನ ಟೋಕಿಯೋದಲ್ಲಿ ತರಬೇತಿಯನ್ನ ಆರಂಭಿಸಿದ್ದಾರೆ. ರವಿವಾರ ಭಾರತದ ಮೊದಲ ಒಲಿಂಪಿಕ್ಸ್ ಬ್ಯಾಚ್ ಟೋಕಿಯೋಗೆ ಬಂದಿಳಿದಿತ್ತು. ಮೊದಲ ಬ್ಯಾಚ್ನಲ್ಲಿದ್ದ ಭಾರತದ ಈ ಇಬ್ಬರು ಸ್ಟಾರ್ ಆರ್ಚರಿ ಆಟಗಾರರು ಇದೀಗ ತಮ್ಮ ತರಬೇತಿಗೆ ಅಣಿಯಾಗಿದ್ದಾರೆ.
ಶನಿವಾರ ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೋಕಿಯೋಗೆ ತೆರಳಬೇಕಿದ್ದ ಒಲಿಂಪಿಕ್ಸ್ ತಂಡದ ಮೊದಲ ಬ್ಯಾಚ್ ಆಟಗಾರರಿಗೆ ಔಪಚಾರಿಕ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಲಾಗಿತ್ತು. ಈ ಆಟಗಾರರೆಲ್ಲ ಪ್ರಸ್ತುತ ಜಪಾನ್ನ ಒಲಿಂಪಿಕ್ಸ್ ಕ್ರೀಡಾ ಗ್ರಾಮದಲ್ಲಿದ್ದಾರೆ. 88 ಆಟಗಾರರಿದ್ದ ಈ ಬ್ಯಾಚ್ನ ಪ್ರತಿಯೊಬ್ಬ ಸದಸ್ಯರನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದ್ದು ಎಲ್ಲರ ವರದಿ ನೆಗೆಟಿವ್ ಬಂದಿದೆ.
ಟೋಕಿಯೋ ಒಲಿಂಪಿಕ್ಸ್ನಲ್ಲಿ 5 ವಿಭಾಗಗಳಲ್ಲಿ ಆರ್ಚರಿ ಪಂದ್ಯ ನಡೆಯಲಿದೆ. ಪುರುಷರ ವಿಭಾಗ, ಮಹಿಳೆಯ ವಿಭಾಗ, ಪುರುಷರ ಗುಂಪು, ಮಹಿಳೆಯರ ಗುಂಪು ಹಾಗೂ ಮಿಶ್ರ ಡಬಲ್ಸ್ನಲ್ಲಿ ಈ ಆರ್ಚರಿ ಪಂದ್ಯ ನಡೆಯಲಿದೆ. ಯುಮೆನೋಶಿಮಾ ಪಾರ್ಕ್ನ ಆರ್ಚರಿ ಮೈದಾನದಲ್ಲಿ ಜುಲೈ 23ರಿಂದ ಆರಂಭವಾಗುವ ಈ ಪಂದ್ಯಗಳು ಜುಲೈ 31ರವರೆಗೂ ನಡೆಯಲಿದೆ.
ಆರ್ಚರಿ ವಿಭಾಗದಲ್ಲಿ ಇಲ್ಲಿಯವರೆಗೂ ಭಾರತ ಒಲಿಂಪಿಕ್ಸ್ ಪದಕವನ್ನ ಸಂಪಾದಿಸಿಲ್ಲ. ಈ ಬಾರಿ ಸ್ಟಾರ್ ಆಟಗಾರರನ್ನೇ ಹೊಂದಿರುವ ಭಾರತ ಆರ್ಚರಿಯಲ್ಲಿ ವಿಶೇಷ ಸಾಧನೆಯನ್ನ ಮಾಡುವ ವಿಶ್ವಾಸದಲ್ಲಿದೆ.