alex Certify ಇಲ್ಲಿದೆ ʼಟಿಕ್‌ ಟಾಕ್ʼ ಅಪ್ಲಿಕೇಶನ್ ನಿಷೇಧಿಸಿರುವ ದೇಶಗಳ ಪಟ್ಟಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿದೆ ʼಟಿಕ್‌ ಟಾಕ್ʼ ಅಪ್ಲಿಕೇಶನ್ ನಿಷೇಧಿಸಿರುವ ದೇಶಗಳ ಪಟ್ಟಿ

ಚೀನಾ ಮೂಲದ ಟಿಕ್‌ಟಾಕ್ ಅಪ್ಲಿಕೇಶನ್‌ಗೆ ಜಾಗತಿಕ ಮಟ್ಟದಲ್ಲಿ ಭಾರೀ ಮನ್ನಣೆ ಸಿಕ್ಕಿದೆ. ಆದರೆ ಇದೇ ಟಿಕ್‌ಟಾಕ್‌ ಬಳಕೆಯಿಂದಾಗಿ ದೇಶದ ಭದ್ರತೆ ಸಂಬಂಧಿಸಿದಂತೆ ಹೊಸ ಹೊಸ ಸವಾಲುಗಳು ಸೃಷ್ಟಿಯಾಗುತ್ತಿರುವುದನ್ನು ಮನಗಂಡ ಅನೇಕ ದೇಶಗಳು ಈ ಅಪ್ಲಿಕೇಶನ್‌ಅನ್ನು ನಿಷೇಧಿಸಿವೆ.

ಟಿಕ್‌ಟಾಕ್‌ನ ಪೋಷಕ ಸಂಸ್ಥೆ ಬೈಟ್‌ಡ್ಯಾನ್ಸ್ ಮೂಲಕ ಚೀನೀ ಏಜೆನ್ಸಿಗಳು ಬಳಕೆದಾರರ ಲೊಕೇಷನ್ ಹಾಗೂ ಸಂಪರ್ಕದ ಮಾಹಿತಿಗಳನ್ನು ಕದಿಯುತ್ತಿದ್ದಾರೆ ಎಂಬ ದೂರುಗಳ ಆಧಾರದ ಮೇಲೆ ಟಿಕ್‌ಟಾಕ್‌ ನಿಷೇಧ ಮಾಡಿದ ದೇಶಗಳ ಪಟ್ಟಿಗೆ ಫ್ರಾನ್ಸ್ ಹೊಸದಾಗಿ ಸೇರ್ಪಡೆಯಾಗಿದೆ.

ಭಾಗಶಃ ಅಥವಾ ಸಂಪೂರ್ಣವಾಗಿ ಟಿಕ್‌ಟಾಕ್‌ ನಿಷೇಧ ಮಾಡಿದ ದೇಶಗಳ ಪಟ್ಟಿ ಇಂತಿದೆ:

ಅಫ್ಘಾನಿಸ್ತಾನ: ಸಂಪೂರ್ಣ ನಿಷೇಧ

ದೇಶದ ಯುವಕರು ದಾರಿ ತಪ್ಪುವುದನ್ನು ತಡೆಯುವ ಉದ್ದೇಶದಿಂದ ತಾಲಿಬಾನ್ ಆಡಳಿತ ಟಿಕ್‌ಟಾಕ್ ಮೇಲೆ ಸಂಪೂರ್ಣ ನಿಷೇಧ ಹೇರಿದೆ. ಟಿಕ್‌ಟಾಕ್ ಮಾತ್ರವಲ್ಲದೇ ಪಬ್‌ಜಿ ಗೇಮ್‌ ಸಹ ಅಫ್ಘಾನಿಸ್ತಾನದಲ್ಲಿ ಬ್ಯಾನ್ ಆಗಿದೆ.

ಬೆಲ್ಜಿಯಂ: ಆರು ತಿಂಗಳ ಮಟ್ಟಿಗೆ ನಿಷೇಧ

ದೇಶದ ಸೈಬರ್‌ ಭದ್ರತೆ, ಖಾಸಗೀತನ ಹಾಗೂ ಸುಳ್ಳು ಮಾಹಿತಿ ಹಬ್ಬುವಿಕೆಯ ಭೀತಿಯಿಂದ ಪ್ರಧಾನ ಮಂತ್ರಿ ಅಲೆಕ್ಸಾಂಡರ್‌ ಡ ಕ್ರೋ ಟಿಕ್‌ಟಾಕ್ ಮೇಲೆ ಆರು ತಿಂಗಳ ನಿಷೇಧ ಹೇರಿದ್ದಾರೆ.

3. ಡೆನ್ಮಾರ್ಕ್: ಸರ್ಕಾರೀ ಸಾಧನಗಳಲ್ಲಿ ನಿಷೇಧ

ಸೈಬರ್‌ ಭದ್ರತೆಯ ಕ್ರಮವಾಗಿ ಡೆನ್ಮಾರ್ಕ್‌ನ ರಕ್ಷಣಾ ಸಚಿವಾಲಯವು ತನ್ನ ಉದ್ಯೋಗಿಗಳು ತಂತಮ್ಮ ಅಧಿಕೃತ ಫೋನ್‌ಗಳಲ್ಲಿ ಟಿಕ್‌ಟಾಕ್ ಬಳಸಬಾರದು ಎಂದು ನಿಯಮ ಜಾರಿಗೊಳಿಸಿದೆ. ಈ ವಿಡಿಯೋ ಶೇರಿಂಗ್ ಅಪ್ಲಿಕೇಶನ್‌ ಬಳಸಬೇಡಿ ಎಂದು ದೇಶದ ಸಂಸತ್ತು ಇದೇ ಫೆಬ್ರವರಿಯಲ್ಲಿ ಸದಸ್ಯರಿಗೆ ಸೂಚಿಸಿತ್ತು.

4. ಅಮೆರಿಕ: ಸರ್ಕಾರಿ ಸಾಧನಗಳಲ್ಲಿ ನಿಷೇಧ

ಡೇಟಾ ಸುರಕ್ಷತೆ ಕಳಕಳಿಯಿಂದಾಗಿ ಅಮೆರಿಕ ಸರ್ಕಾರವು ಸರ್ಕಾರದ ಅಧಿಕೃತ ಸಾಧನಗಳು ಹಾಗೂ ಸಿಸ್ಟಂಗಳಿಂದ ಟಿಕ್‌ಟಾಕ್‌ ಡಿಲೀಟ್ ಮಾಡಲು 30 ದಿನಗಳ ಗಡುವು ಕೊಟ್ಟಿತ್ತು. ಸದ್ಯಕ್ಕೆ ಸರ್ಕಾರೀ ಸಾಧನಗಳ ಮೇಲೆ ಇರುವ ಈ ನಿಷೇಧವನ್ನು ದೇಶಾದ್ಯಂತ ತರಬೇಕೆಂದು ಜನಪ್ರತಿನಿಧಿಗಳು ಆಗ್ರಹಿಸುತ್ತಿದ್ದಾರೆ.

ಈ ನಡೆಯಿಂದ ಅದಾಗಲೇ ಹಳಸಿರುವ ಅಮೆರಿಕ-ಚೀನಾ ಸಂಬಂಧದಲ್ಲಿ ಇನ್ನಷ್ಟು ಟೆನ್ಷನ್ ಸೃಷ್ಟಿಯಾಗಿದೆ. ಅಮೆರಿಕದ 50 ರಾಜ್ಯಗಳ ಪೈಕಿ ಅರ್ಧಕ್ಕಿಂತ ಹೆಚ್ಚಿನವು ಟಿಕ್‌ಟಾಕ್‌ಅನ್ನು ಅದಾಗಲೇ ನಿಷೇಧಿಸಿವೆ.

5. ಕೆನಡಾ: ಸರ್ಕಾರಿ ಸಾಧನಗಳಲ್ಲಿ ನಿಷೇಧ

ತನಿಖೆಯೊಂದರ ವರದಿ ಬಳಿಕ, ಟಿಕ್‌ಟಾಕ್‌ನಿಂದ ಖಾಸಗಿತನ ಹಾಗೂ ಭದ್ರತೆಗೆ ಭಾರೀ ಪೆಟ್ಟು ಬೀಳುತ್ತದೆ ಎಂದು ತಿಳಿದು ಬಂದಿರುವುದಾಗಿ ದೇಶದ ಮುಖ್ಯ ಮಾಹಿತಿ ಅಧಿಕಾರಿ ತಿಳಿಸಿದ್ದಾರೆ. ಸರ್ಕಾರದಿಂದ ವಿತರಿಸಲಾದ ಸಾಧನಗಳಲ್ಲಿ ಟಿಕ್‌ಟಾಕ್ ಬಳಕೆ ಮಾಡಬಾರದು ಎಂದು ಇದರ ಬೆನ್ನಿಗೇ ಘೋಷಿಸಲಾಗಿದೆ.

6. ಬ್ರಿಟನ್: ಸರ್ಕಾರಿ ಸಾಧನಗಳಲ್ಲಿ ನಿಷೇಧ

ತನ್ನ ಜಾಲದಲ್ಲಿರುವ ಎಲ್ಲ ಸಾಧನಗಳಲ್ಲೂ ಟಿಕ್‌ಟಾಕ್ ನಿಷೇಧಿಸುವುದಾಗಿ ಬ್ರಿಟನ್‌ನ ಸಂಸತ್ತು ಮಾರ್ಚ್ 23ರಂದು ಘೋಷಿಸಿದೆ. ಭದ್ರತೆಯ ಕಾರಣಗಳಿಂದಾಗಿ ಟಿಕ್‌ಟಾಕ್ ಮೇಲೆ ನಿಷೇಧ ಹೇರಿದ ಪಾಶ್ಚಾತ್ಯ ದೇಶಗಳ ಸಾಲಿಗೆ ಲೇಟೆಸ್ಟ್‌ ಆಗಿ ಎಂಟ್ರಿ ಕೊಟ್ಟಿದೆ ಬ್ರಿಟನ್.

7. ಆಸ್ಟ್ರೇಲಿಯಾ: ಕೆಲವು ಸರ್ಕಾರಿ ಸಂಸ್ಥೆಗಳಲ್ಲಿ ನಿಷೇಧ

ಭದ್ರತೆಯ ಕಾರಣಗಳಿಂದಾಗಿ ಆಸ್ಟ್ರೇಲಿಯಾದ ಕೆಲವು ಸರ್ಕಾರೀ ಸಂಸ್ಥೆಗಳು ಟಿಕ್‌ಟಾಕ್‌ ನಿಷೇಧಕ್ಕೆ ಮುಂದಾಗಿವೆ. ಅಮೆರಿದಲ್ಲಿ ಇದೇ ಕ್ರಮ ತೆಗೆದುಕೊಂಡ ಬೆನ್ನಿಗೇ ಆಸ್ಟ್ರೇಲಿಯಾದಲ್ಲೂ ಸಹ ಇದೇ ರೀತಿ ಮಾಡುವಂತೆ ಕೂಗೆದ್ದಿದೆ.

ಹವಾಮಾನ ಬದಲಾವಣೆ, ಇಂಧನ, ಪರಿಸರ ಹಾಗು ಜಲಶಕ್ತಿ, ಕೃಷಿ, ಮೀನುಗಾರಿಕೆ ಹಾಗೂ ಅರಣ್ಯ ಇಲಾಖೆಗಳು ತಮ್ಮ ಉದ್ಯೋಗಿಗಳು ಟಿಕ್‌ಟಾಕ್ ಬಳಸದಂತೆ ನಿಷೇಧ ಹೇರಿವೆ.

8. ನ್ಯೂಜ಼ೀಲೆಂಡ್: ಸರ್ಕಾರಿ ಸಾಧನಗಳಲ್ಲಿ ನಿಷೇಧ

ದೇಶದ ಸಂಸತ್ತಿನ ಜಾಲಕ್ಕೆ ಬೆಸೆದುಕೊಂಡಿರುವ ಎಲ್ಲಾ ಸಾಧನಗಳಲ್ಲೂ ಮಾರ್ಚ್ ಅಂತ್ಯದ ವೇಳಗೆ ಟಿಕ್‌ಟಾಕ್ ನಿಷೇಧಿಸುವುದಾಗಿ ನ್ಯೂಜ಼ೀಲೆಂಡ್ ಇತ್ತೀಚೆಗೆ ಘೋಷಿಸಿದೆ.

9. ನಾರ್ವೇ: ಸರ್ಕಾರಿ ಸಾಧನಗಳಲ್ಲಿ ನಿಷೇಧ

ಐರೋಪ್ಯ ಒಕ್ಕೂಟದ ಅನೇಕ ದೇಶಗಳಂತೆ ನಾರ್ವೇಯನ್ ಸಂಸತ್ತು ತನ್ನ ಅಧಿಕೃತ ಸಾಧನಗಳಲ್ಲಿ ಟಿಕ್‌ಟಾಕ್ ಬಳಕೆ ನಿಷೇಧಿಸಿದೆ. ತಮ್ಮ ಅಧಿಕೃತ ಸಾಧನಗಳಲ್ಲಿ ಈ ಅಪ್ಲಿಕೇಶನ್ ಬಳಸದಂತೆ ನಾರ್ವೇಯನ್ ನ್ಯಾಯಾಂಗ ಇಲಾಖೆ ಎಚ್ಚರಿಕೆ ರವಾನೆ ಮಾಡಿದೆ.

10: ಫ್ರಾನ್ಸ್: ಸರ್ಕಾರಿ ಸಾಧನಗಳಲ್ಲಿ ನಿಷೇಧ

ದೇಶದ ಸಾರ್ವಜನಿಕ ಸ್ವಾಮ್ಯದಲ್ಲಿ ಕೆಲಸ ಮಾಡುವ ಉದ್ಯೋಗಿಗಳು ಟಿಕ್‌ಟಾಕ್ ಸೇರಿದಂತೆ ಯಾವುದೇ ’ಮನೋರಂಜಾತ್ಮ ಅಪ್ಲಿಕೇಶನ್‌’ಗಳನ್ನು ಅಧಿಕೃತ ಸಾಧನಗಳಲ್ಲಿ ಬಳಸುವಂತಿಲ್ಲ ಎಂದು ಮಾರ್ಚ್ 24ರಂದು ಫ್ರಾನ್ಸ್‌ ಆದೇಶ ಹೊರಡಿಸಿದೆ.

11. ಐರೋಪ್ಯ ಒಕ್ಕೂಟ: ಸರ್ಕಾರಿ ಸಾಧನಗಳಲ್ಲಿ ನಿಷೇಧ

ಐರೋಪ್ಯ ಒಕ್ಕೂಟವು ತನ್ನ ಸಿಬ್ಬಂದಿಯ ಫೋನ್‌ಗಳಲ್ಲಿ ಟಿಕ್‌ಟಾಕ್ ಬಳಕೆಯನ್ನು ನಿಷೇಧಿಸಿದೆ. ಮಾರ್ಚ್ 20 ರಿಂದ ಆರಂಭಗೊಳ್ಳುವಂತೆ, ಈ ನಿಷೇಧವು ಒಕ್ಕೂಟದ ಮೊಬೈಲ್ ನಿರ್ವಹಣಾ ಅಪ್ಲಿಕೇಶನ್‌ನಲ್ಲಿ ನೋಂದಣಿಯಾದ ಮೊಬೈಲ್ ಫೋನ್‌ಗಳು, ಟ್ಯಾಬ್ಲೆಟ್‌ಗಳಿಗೆ ಅನ್ವಯವಾಗುತ್ತದೆ ಎಂದು ಸಂಸತ್ತಿನ ವಕ್ತಾರರು ತಿಳಿಸಿದ್ದಾರೆ.

12. ಥೈವಾನ್: ಸರ್ಕಾರಿ ಸಾಧನಗಳಲ್ಲಿ ನಿಷೇಧ

ಸಾರ್ವಜನಿಕ ವಲಯದ ಉದ್ಯೋಗಿಗಳು ಅಧಿಕೃತ ಸಾಧನಗಳಲ್ಲಿ ಟಿಕ್‌ಟಾಕ್‌ ಬಳಸುವಂತಿಲ್ಲ ಎಂದು ಡಿಸೆಂಬರ್‌ 2022ರಲ್ಲಿ ಆದೇಶಿಸಲಾಗಿದೆ. ಟಿಕ್‌ಟಾಕ್‌ನಿಂದ ರಾಷ್ಟ್ರೀಯ ಭದ್ರತೆಗೆ ದೊಡ್ಡ ಸವಾಲು ಸೃಷ್ಟಿಯಾಗಿದೆ ಎಂದು ಎಫ್‌ಬಿಐ ತಿಳಿಸಿದ ಬೆನ್ನಿಗೇ ಈ ನಡೆಗೆ ಮುಂದಾಗಿದೆ ಥೈವಾನ್. ಚೀನೀ ನಿರ್ಮಿತ ಸಾಫ್ಟ್‌ವೇರ್‌ಗಳಾದ ಟಿಕ್‌ಟಾಕ್, ಡೌಯುನ್, ಅಥವಾ ಶಿಯಾಂಗ್‌ಶೂ ಸೇರಿದಂತೆ ಅನೇಕ ತಂತ್ರಾಂಶಗಳನ್ನು ಥೈವಾನ್ ನಿಷೇಧಿಸಿದೆ.

13. ಇಂಡೋನೇಷ್ಯಾ: ನಿಷೇಧಿಸಿ ಬಳಿಕ ನಿಷೇಧ ಹಿಂಪಡೆತ

’ಧರ್ಮವಿರೋಧಿ, ಅಸಭ್ಯ ಹಾಗೂ ಪೋರ್ನೋಗ್ರಾಫಿ ಕಂಟೆಂಟ್ ಇದ್ದ ಕಾರಣ’ 2018ರಲ್ಲಿ ಟಿಕ್‌ಟಾಕ್ ಮೇಲೆ ನಿಷೇಧ ಹೇರಿದ್ದ ಇಂಡೋನೇಷ್ಯಾ, ಇದೀಗ ನಿಷೇಧ ಹಿಂಪಡೆದಿದ್ದು, ’ನಕಾರಾತ್ಮಕ ಕಂಟೆಂಟ್‌’ ಅನ್ನು ಸೆನ್ಸಾರ್‌ ಮಾಡುವುದಾಗಿ ತಿಳಿಸಿದೆ.

14. ಪಾಕಿಸ್ತಾನ: ನಿಷೇಧಿಸಿ ಬಳಿಕ ನಿಷೇಧ ಹಿಂಪಡೆತ

ಈ ವಿಚಾರವಾಗಿ ಗೊಂದಲದಲ್ಲೇ ಇರುವಂತೆ ಕಾಣುವ ಪಾಕಿಸ್ತಾನ ಟಿಕ್‌ಟಾಕ್‌ ನಿಷೇಧಿಸಿ ಆ ನಿಷೇಧವನ್ನು ಹಿಂಪಡೆಯುವ ಕೆಲಸವನ್ನು ಅನೇಕ ಬಾರಿ ಮಾಡಿದೆ. ಅಕ್ಟೋಬರ್‌ 2020ರಲ್ಲಿ ಮೊದಲ ಬಾರಿಗೆ ಟಿಕ್‌ಟಾಕ್ ನಿಷೇಧಿಸಿದ್ದ ಪಾಕಿಸ್ತಾನ, ’ಅಸಭ್ಯತೆ ಪಸರಿಸುವ ಖಾತೆಗಳನ್ನು ಡಿಲೀಟ್ ಮಾಡುವುದಾಗಿ’ ಕಂಪನಿ ಭರವಸೆ ಕೊಟ್ಟ ಬೆನ್ನಿಗೆ, ಕೇವಲ 10 ದಿನಗಳಲ್ಲಿ ಈ ನಿಷೇಧ ಹಿಂಪಡೆದಿತ್ತು. ಇದಾದ ಬಳಿಕ ಕನಿಷ್ಠ ಮೂರು ಬಾರಿ ಹೀಗೆ ನಿಷೇಧಿಸಿ, ನಿಷೇಧ ಹಿಂಪಡೆಯುವ ಕೆಲಸವನ್ನು ಪಾಕಿಸ್ತಾನ ಮಾಡಿದೆ.

15. ಭಾರತ: ಸಂಪೂರ್ಣ ನಿಷೇಧ

ಭಾರತದಲ್ಲಿ ಟಿಕ್‌ಟಾಕ್ ಬಳಕೆಯ ಮೇಲೆ ಸಂಪೂರ್ಣ ನಿಷೇಧವಿದೆ. 2020ರಲ್ಲಿ ಟಿಕ್‌ಟಾಕ್ ಸೇರಿ ವೀಚಾಟ್‌ನಂತೆ ಡಜ಼ನ್‌ಗಟ್ಟಲೇ ಚೀನೀ ಅಪ್ಲಿಕೇಶನ್‌ಗಳನ್ನು ಖಾಸಗಿತನ ಹಾಗೂ ಭದ್ರತೆಗಳ ಕಾರಣದಿಂದ ನಿಷೇಧಿಸಲಾಗಿದೆ.

2020ರ ಜೂನ್‌ನಲ್ಲಿ ಚೀನೀ ಪಡೆಗಳು ಗಲ್ವಾನ್‌ನಲ್ಲಿ ಭಾರತೀಯ ಸೈನಿಕರೊಂದಿಗೆ ಕದನಕ್ಕೆ ಮುಂದಾದ ಬೆನ್ನಿಗೇ ಈ ನಡೆಗೆ ಮುಂದಾದ ಕೇಂದ್ರ ಸರ್ಕಾರ, ಚೀನಾ ಮೂಲದ 59 ಮೊಬೈಲ್ ಅಪ್ಲಿಕೇಶನ್‌ಗಳನ್ನು ನಿಷೇಧಿಸಿದೆ.

ಖಾಸಗಿತನ ಹಾಗೂ ಭದ್ರತೆ ಸಂಬಂಧ ಎದ್ದ ಪ್ರಶ್ನೆಗಳಿಗೆ ಉತ್ತರಿಸಲು ಈ ಕಂಪನಿಗಳಿಗೆ ಅವಕಾಶ ನೀಡಲಾಗಿದ್ದರೂ ಸಹ ಜನವರಿ 2021ರಂದು ಈ ನಿಷೇಧವನ್ನು ಶಾಶ್ವತ ಮಾಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...