ಕಾಮಗಾರಿಯನ್ನು ಮಾಡದಿದ್ದರೂ ನಕಲಿ ಬಿಲ್ ಸೃಷ್ಟಿಸಿ ಕೋಟ್ಯಾಂತರ ರೂಪಾಯಿ ಕೊಳ್ಳೆ ಹೊಡೆಯುವವರ ಸಂಖ್ಯೆಗೇನೂ ಕಡಿಮೆ ಇಲ್ಲ. ಇಂತಹ ಅಕ್ರಮಗಳಿಗೆ ಕಡಿವಾಣ ಹಾಕಲೆಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಪಾರದರ್ಶಕ ಆಡಳಿತಕ್ಕೆ ಒತ್ತು ನೀಡುತ್ತಿರುವುದಾಗಿ ಘೋಷಣೆಗಳನ್ನು ಮಾಡುತ್ತ ಬಂದಿದ್ದಾರೆ. ಆದರೆ, ಅಕ್ರಮ ಮಾಡುವವರು ಮಾತ್ರ ಲೀಲಾಜಾಲವಾಗಿ ವಂಚಿಸುತ್ತಾ ಮತ್ತಷ್ಟು ಶ್ರೀಮಂತರಾಗುತ್ತಿದ್ದಾರೆ.
ಇದಕ್ಕೊಂದು ತಾಜಾ ಉದಾಹರಣೆ ಎಂದರೆ, ತಮಿಳುನಾಡಿನ ಪುದುಕೋಟೈ ಜಿಲ್ಲೆಯಲ್ಲಿ ಸರ್ಕಾರದ ವತಿಯಿಂದ ಮನೆಗಳನ್ನು ನಿರ್ಮಿಸದಿದ್ದರೂ ನಿರ್ಮಾಣವಾಗಿವೆ ಎಂದು ನಕಲಿ ಬಿಲ್ ತೋರಿಸಿ ಫಲಾನುಭವಿಗಳ ಹೆಸರಿನಲ್ಲಿ ಹಣವನ್ನು ಪಡೆಯಲಾಗಿದೆ. ಅದೂ ಕೂಡ ಪ್ರಧಾನ ಮಂತ್ರಿ ಆವಾಸ್ ಯೋಜನೆ(ಪಿಎಂಎವೈ)ಯ ಹೆಸರಿನಲ್ಲಿ ಈ ಗೋಲ್ ಮಾಲ್ ನಡೆದಿದೆ.
ನಕಲಿ ಬಿಲ್ ಸೃಷ್ಟಿಸಿ ಹಣ ಲಪಟಾಯಿಸಲಾಗಿದೆ ಎಂಬ ದೂರು ಬಂದ ಹಿನ್ನೆಲೆಯಲ್ಲಿ ಅಲ್ಲಿನ ಜಿಲ್ಲಾಧಿಕಾರಿ ಕವಿತಾ ರಾಮು ಅವರು ತನಿಖೆ ನಡೆಸಿದ ಪರಿಣಾಮ ಈ ಪ್ರಕರಣ ಬೆಳಕಿಗೆ ಬಂದಿದೆ.
BIG NEWS: ವಕೀಲೆ ಸಂಗೀತಾ ಮೇಲೆ ಹಲ್ಲೆ ಪ್ರಕರಣಕ್ಕೆ ಮತ್ತೊಂದು ತಿರುವು; ಹಲ್ಲೆಗೂ ಮುನ್ನ ನಡೆದ ಘಟನೆ ವಿಡಿಯೋ ವೈರಲ್
ಜಿಲ್ಲೆಯ ಅವುಡೈಯರಕೊಯಿಲ್ ಬ್ಲಾಕ್ ನಲ್ಲಿ ಪಿಎಂಎವೈ ಯೋಜನೆಯಡಿ ನೂರಾರು ಮನೆಗಳ ನಿರ್ಮಾಣಕ್ಕೆ ಸರ್ಕಾರದಿಂದ ಅನುಮೋದನೆ ದೊರೆತ್ತಿತ್ತು. ಕೆಲವು ದಿನಗಳ ನಂತರ ಫಲಾನುಭವಿಗಳ ಪಟ್ಟಿಯೊಂದು ಸಿದ್ಧವಾಯಿತು ಮತ್ತು ಆ ಪಟ್ಟಿಯನ್ವಯ ಫಲಾನುಭವಿಗಳಿಗೆ ಹಣವನ್ನೂ ಬಿಡುಗಡೆ ಮಾಡಲಾಯಿತು. ಈ ಎಲ್ಲಾ ಅಂಕಿಅಂಶಗಳು ಸರ್ಕಾರದ ದಾಖಲೆಯಲ್ಲಿ ಮಾತ್ರ ನಮೂದಾಗಿದ್ದವು. ಮನೆಗಳು ಮಾತ್ರ ನಿರ್ಮಾಣವಾಗಿರಲಿಲ್ಲ.
ಈ ಬ್ಲಾಕ್ ನಲ್ಲಿ ಒಟ್ಟು 869 ಮನೆಗಳನ್ನು ನಿರ್ಮಾಣ ಮಾಡಬೇಕಿತ್ತು. ಈ ಪೈಕಿ 435 ಮನೆಗಳ ನಿರ್ಮಾಣವೂ ಆಗಿಲ್ಲ ಅಥವಾ ಕಾಮಗಾರಿಯೂ ಆರಂಭವಾಗಿಲ್ಲ. ಆದರೆ, ನಿರ್ಮಾಣವಾಗಿದೆ ಎಂದು ಹಣ ಮಾತ್ರ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಬಿಡುಗಡೆಯಾಗಿತ್ತು. ಈ ಬಗ್ಗೆ ತನಿಖೆ ನಡೆಸಿದ್ದು, ಅವ್ಯವಹಾರದಿಂದ ಸರ್ಕಾರದ ಬೊಕ್ಕಸಕ್ಕೆ 6.97 ಕೋಟಿ ರೂಪಾಯಿ ನಷ್ಟವಾಗಿರುವುದು ಪತ್ತೆಯಾಗಿದೆ.