alex Certify ಅಜ್ಜಿ ಶವವನ್ನ ವಾರ್ಡ್ ರೋಬ್ ನಲ್ಲಿ ಬಚ್ಚಿಟ್ಟು ಪರಾರಿ; 5 ವರ್ಷದ ಬಳಿಕ ತಾಯಿ-ಮಗ ಸೆರೆಯಾಗಿದ್ದೇಗೆ ಗೊತ್ತಾ ? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಜ್ಜಿ ಶವವನ್ನ ವಾರ್ಡ್ ರೋಬ್ ನಲ್ಲಿ ಬಚ್ಚಿಟ್ಟು ಪರಾರಿ; 5 ವರ್ಷದ ಬಳಿಕ ತಾಯಿ-ಮಗ ಸೆರೆಯಾಗಿದ್ದೇಗೆ ಗೊತ್ತಾ ?

ಕೊಲೆ ಪ್ರಕರಣ ಪತ್ತೆಯಾದ 5 ವರ್ಷದ ಬಳಿಕ ಬೆಂಗಳೂರು ಪೊಲೀಸರು ಆರೋಪಿಗಳಾದ ತಾಯಿ ಮತ್ತು ಮಗನನ್ನ ಬಂಧಿಸಿದ್ದ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಚಾರ್ಜ್‌ ಶೀಟ್‌ ಸಲ್ಲಿಸಲಾಗಿದೆ. ಗಮನಾರ್ಹ ವಿಷಯವೆಂದರೆ ಪೊಲೀಸರಿಗೆ ಸಿಕ್ಕಿಹಾಕಿಕೊಳ್ಳಬಾರದೆಂದು ಎಂಜಿನಿಯರಿಂಗ್ ಮಾಡಿದ್ದ ಆರೋಪಿ ಹೊರರಾಜ್ಯದಲ್ಲಿ ಹೋಟೆಲ್ ನಲ್ಲಿ ಸಪ್ಲೈಯರ್ ಆಗಿ ಕೆಲಸ ಮಾಡುತ್ತಿದ್ದ.

27 ವರ್ಷ ವಯಸ್ಸಿನ ಸಂಜಯ್ ವಾಸುದೇವ್ ರಾವ್ ಮತ್ತಾತನ ತಾಯಿ ಆಗಸ್ಟ್ 2016 ರಲ್ಲಿ ತನ್ನ ಅಜ್ಜಿಯನ್ನ ಕೊಲೆ ಮಾಡಿ ಶವವನ್ನ ವಾರ್ಡ್ ರೋಬ್ ಗೋಡೆಯಲ್ಲಿ ಹಾಕಿ ನಂತರ ಪರಾರಿಯಾಗಿದ್ದರು. ಈ ಕೊಲೆ ಪ್ರಕರಣ ಪತ್ತೆಯಾದ 5 ವರ್ಷದ ಬಳಿಕ ಆರೋಪಿಗಳಾದ ಸಂಜಯ್ ಮತ್ತು ಆತನ ತಾಯಿ ಶಶಿಕಲಾ ಅವರನ್ನ ಬೆಂಗಳೂರು ಪೊಲೀಸರು ಕೊಲ್ಹಾಪುರದಿಂದ ಬಂಧಿಸಿ ಕರೆತಂದಿದ್ದರು.

ಕೆಂಗೇರಿ ಸ್ಯಾಟಲೈಟ್ ಟೌನ್ ನಿವಾಸಿ ಶಶಿಕಲಾ ಅವರ ಪುತ್ರ ಸಂಜಯ್ ವಾಸುದೇವ್ ರಾವ್ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಆಗಿದ್ದರು. ಕುಂಬಳಗೋಡಿನ ಎಸಿಎಸ್ ಕಾಲೇಜಿನಲ್ಲಿ ಎಂಜಿನಿಯರಿಂಗ್ ಅಧ್ಯಯನ ಮಾಡುತ್ತಿದ್ದರು.

ಅಧ್ಯಯನಶೀಲ ಮತ್ತು ಚೆನ್ನಾಗಿ ಮಾತನಾಡುವ ಸಂಜಯ್ ನೆರೆಹೊರೆಯಲ್ಲಿ ಉತ್ತಮ ನಡವಳಿಕೆಗೆ ಹೆಸರುವಾಸಿಯಾಗಿದ್ದರು. ಚಿಕ್ಕ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡು ತಾಯಿ ಹಾಗೂ ಅಜ್ಜಿ ಶಾಂತಾ ಕುಮಾರಿ (70) ಜತೆ ವಾಸವಾಗಿದ್ದರು. ಸಂಪ್ರದಾಯಸ್ಥ ಮಹಿಳೆ ಶಾಂತಾ ಕುಮಾರಿ, ಹೊರಗಿನಿಂದ ಮನೆಗೆ ಆಹಾರ ತಂದ್ರೆ ಮೊಮ್ಮಗನೊಂದಿಗೆ ಯಾವಾಗಲೂ ಜಗಳವಾಡುತ್ತಿದ್ದರು.

2016ರ ಆಗಸ್ಟ್ ಎರಡನೇ ಅಥವಾ ಮೂರನೇ ವಾರದಲ್ಲಿ ಸಂಜಯ್ ಗೋಬಿ ಮಂಚೂರಿಯನ್ ಅನ್ನು ಮನೆಗೆ ತಂದರು. ಈ ವಿಷಯವಾಗಿ ಅಜ್ಜಿ ಶಾಂತಾ ಜಗಳವಾಡಿದರು . ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿ ಕೋಪದ ಭರದಲ್ಲಿ ಸಂಜಯ್, ಶಾಂತಾಳ ಮೇಲೆ ಹಲ್ಲೆ ನಡೆಸಿದರು. ಪರಿಣಾಮ ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಶಶಿಕಲಾ ಈ ಕೃತ್ಯವನ್ನ ನೋಡಿದ್ದು ಸಾಕ್ಷಿಯಾಗಿದ್ದರು.

ಕೃತ್ಯದ ಬಳಿಕ ಸಂಜಯ್ ತನ್ನ ಸ್ನೇಹಿತ ನಂದೀಶನನ್ನು ಸಂಪರ್ಕಿಸಿ ಶವವನ್ನು ಶಾಂತಾಳ ತವರು ಶಿವಮೊಗ್ಗಕ್ಕೆ ಸಾಗಿಸಲು ಮತ್ತು ಅವಳು ಸ್ವಾಭಾವಿಕವಾಗಿ ಸಾವನ್ನಪ್ಪಿದ್ದಾಳೆಂದು ತೋರಿಸಲು ಯೋಜಿಸಿದರು. ಆದರೆ ಅವರ ಯೋಜನೆ ಫಲಕಾರಿಯಾಗದಿದ್ದಾಗ ವಾರ್ಡ್ ರೋಬ್ ಗೋಡೆಯನ್ನು ಅಗೆದು ಅದರಲ್ಲಿ ಇದ್ದಿಲು ತುಂಬಿ ಶವವನ್ನು ಬಚ್ಚಿಟ್ಟು ಗೋಡೆಯನ್ನು ಸಿಮೆಂಟ್ ನಿಂದ ತೇಪೆ ಹಾಕಿದ್ದರು. ಮೃತದೇಹದ ದುರ್ವಾಸನೆ ಬರದಂತೆ ತಡೆಯಲು ತಾಯಿ-ಮಗ ಇಬ್ಬರೂ ಸುಗಂಧ ದ್ರವ್ಯಗಳನ್ನು ಸಿಂಪಡಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ.

ಶಾಂತಾ ನಾಪತ್ತೆಯಾದ ಬಗ್ಗೆ ನೆರೆಹೊರೆಯವರು ವಿಚಾರಿಸಲು ಮುಂದಾದಾಗ, ಅವರು ಶಿವಮೊಗ್ಗದಲ್ಲಿರುವ ತನ್ನ ಕಿರಿಯ ಸಹೋದರನ ಮನೆಗೆ ಹೋಗಿರುವುದಾಗಿ ಹೇಳಿದರು. ಮುಂದಿನ ಆರು ತಿಂಗಳ ಕಾಲ ಶವದ ವಾಸನೆಯನ್ನು ಮರೆಮಾಚಿ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು.

ಫೆಬ್ರವರಿ 2, 2017 ರಂದು ಸಂಜಯ್ ಮತ್ತು ಶಶಿಕಲಾ ಮನೆ ಮಾಲೀಕ ನವೀನ್ ಬಳಿ 2 ಲಕ್ಷ ಸಾಲವನ್ನು ಕೇಳಿ ಮನೆಯಿಂದ ಹೊರಟು ಹೋಗಿದ್ದರು. ಆದರೂ ನವೀನ್ ತನ್ನ ತಂದೆಯ ಖಾತೆಯಿಂದ 50 ಸಾವಿರ ರೂ. ಹಣ ಕಳಿಸಿದ್ದರು. ಎರಡು ಮೂರು ದಿನಗಳ ನಂತರ ಆರೋಪಿಗಳ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿತ್ತು.

ಮೇ 7, 2017 ರಂದು ಬೆಳಿಗ್ಗೆ 8.30 ರ ಸುಮಾರಿಗೆ ಸಂಜಯ್ ಮತ್ತು ಶಶಿಕಲಾ ಇದ್ದ ಮನೆಯ ಕೊಠಡಿಯಿಂದ ವಾಸನೆ ಬರುತ್ತಿತ್ತು. ಇದನ್ನು ಗಮನಿಸಿದ ನವೀನ್ ಪೊಲೀಸರಿಗೆ ಮಾಹಿತಿ ನೀಡಿದರು.ಪೊಲೀಸರು ವಾರ್ಡ್ ರೋಬ್ ಒಡೆದು ನೋಡಿದಾಗ ಕೊಳೆತ ಸ್ಥಿತಿಯಲ್ಲಿದ್ದ ಶಾಂತಾ ಶವ ಪತ್ತೆಯಾಗಿದೆ. ಶವವನ್ನು ನೀಲಿ ಡ್ರಮ್‌ನೊಳಗೆ ಇರಿಸಲಾಗಿದ್ದು, ಅದರ ಮೇಲೆ ಇದ್ದಿಲು ಮತ್ತು ಇತರ ವಸ್ತುಗಳನ್ನು ಸುರಿಯಲಾಗಿತ್ತು.

ಪೊಲೀಸರು ಶವವನ್ನು ಪತ್ತೆಹಚ್ಚಿದ ಕೂಡಲೇ ಸಂಜಯ್, ಗೆಳೆಯ- ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದ ನಂದೀಶ್ ವಿಚಾರಣೆ ನಡೆಸಿದ್ದರು. ಸಂಜಯ್ ಮತ್ತು ನಂದೀಶ್ ನಡುವಿನ ಮೊಬೈಲ್ ಫೋನ್ ಸಂಭಾಷಣೆಗಳಲ್ಲಿ ವಾರ್ಡ್ ರೋಬ್ ಗೋಡೆಯಲ್ಲಿ ಶಾಂತಾ ಶವ ಬಚ್ಚಿಡುವಲ್ಲಿ ಈತನ ಪಾತ್ರವಿದ್ದುದನ್ನ ಕಂಡುಕೊಂಡರು.

ಪೊಲೀಸರು ನಂದೀಶ್‌ನನ್ನು ಬಂಧಿಸಿದರೂ ಸಂಜಯ್ ಮತ್ತು ಶಶಿಕಲಾ ಎಲ್ಲಿದ್ದಾರೆ ಎಂಬ ಬಗ್ಗೆ ಸುಳಿವು ಸಿಕ್ಕಿರಲಿಲ್ಲ. ಕೋವಿಡ್ ಮುಗಿದ ಬಳಿಕ 2022 ರಲ್ಲಿ ತನಿಖೆ ಮುಂದುವರೆಸಿದ ಪೊಲೀಸರು ಸಂಜಯ್ ಅವರ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ವಿವರಗಳನ್ನು ಎಲ್ಲಿಯಾದರೂ ಬ್ಯಾಂಕ್ ಖಾತೆಗಳನ್ನು ತೆರೆಯಲು ಬಳಸಲಾಗಿದೆಯೇ ಎಂದು ಕಂಡುಹಿಡಿಯಲು ಅವರು ಬ್ಯಾಂಕ್‌ಗಳನ್ನು ಸಂಪರ್ಕಿಸಿದರು.

ಅಕ್ಟೋಬರ್ 2022 ರಲ್ಲಿ, ಮಹಾರಾಷ್ಟ್ರದ ಕೊಲ್ಲಾಪುರದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯೊಂದರಲ್ಲಿ ಸಂಜಯ್ ಅವರ ರುಜುವಾತುಗಳೊಂದಿಗೆ ಖಾತೆಯನ್ನು ತೆರೆಯಲಾಗಿದೆ ಎಂದು ಪೊಲೀಸರು ತಿಳಿದುಕೊಂಡರು. ಬಳಿಕ ಅವರು ಸಂಜಯ್ ಮತ್ತು ಶಶಿಕಲಾ ಅವರನ್ನು ಕೊಲ್ಲಾಪುರದಿಂದ ಬಂಧಿಸಿದರು. ಅಲ್ಲಿ ಸಂಜಯ್ ರೆಸ್ಟೋರೆಂಟ್‌ನಲ್ಲಿ ಸಪ್ಲೈಯರ್ ಆಗಿದ್ರೆ, ಆತನ ತಾಯಿ ಮನೆಕೆಲಸದವರಾಗಿದ್ದರು.

ಉತ್ತಮ ವಿದ್ಯಾರ್ಥಿಯಾಗಿದ್ದ ಸಂಜಯ್ ತನ್ನ ಅಧ್ಯಯನದಲ್ಲಿ ಉತ್ತೀರ್ಣನಾಗಿದ್ದನು ಮತ್ತು 10 ಮತ್ತು 12 ನೇ ತರಗತಿಯಲ್ಲಿ ಶೇಕಡಾ 90 ಕ್ಕಿಂತ ಹೆಚ್ಚು ಅಂಕ ಗಳಿಸಿದ್ದನು. ಆದರೆ ಈ ಘಟನೆಯ ನಂತರ ತನ್ನ ಮತ್ತು ತನ್ನ ತಾಯಿಯನ್ನು ಬಂಧನದಿಂದ ರಕ್ಷಿಸಲು ಅವನು ಓಡಿಹೋಗಿದ್ದ. ಕೊಲ್ಲಾಪುರದಲ್ಲಿ ಲೋ ಪ್ರೊಫೈಲ್ ಜೀವನ ನಡೆಸುತ್ತಿದ್ದರು. ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದು ಸಂಜಯ್ ಮತ್ತು ಶಶಿಕಲಾ ಜೈಲಿನಲ್ಲಿದ್ದಾರೆ. ಪ್ರಕರಣ ವಿಚಾರಣೆ ಹಂತದಲ್ಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...