alex Certify ದೋಷಯುಕ್ತ ಮೊಬೈಲ್ ಸರಬರಾಜು ಮಾಡಿದ ಆಸಿಸ್ ಕಂಪನಿಗೆ : 78 ಸಾವಿರ ರೂ. ದಂಡ ಮತ್ತು ಪರಿಹಾರ! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೋಷಯುಕ್ತ ಮೊಬೈಲ್ ಸರಬರಾಜು ಮಾಡಿದ ಆಸಿಸ್ ಕಂಪನಿಗೆ : 78 ಸಾವಿರ ರೂ. ದಂಡ ಮತ್ತು ಪರಿಹಾರ!

ಧಾರವಾಡ : ದೋಷಯುಕ್ತ ಮೊಬೈಲ್ ಸರಬರಾಜು ಮಾಡಿದ ಆಸಿಸ್ ಕಂಪನಿಗೆ ಗ್ರಾಹಕರ ಆಯೋಗವು ರೂ.78 ಸಾವಿರ ದಂಡ ಮತ್ತು ಪರಿಹಾರ ನೀಡುವಂತೆ ಆದೇಶಿಸಿದೆ.

ಧಾರವಾಡ ಸರಸ್ವತಪುರದ ವಾಸಿ ಕೇತನ ಚಿಕ್ಕಮಠ ಎನ್ನುವ ವಿಧ್ಯಾರ್ಥಿ ತನ್ನ ವಿಧ್ಯಾಭ್ಯಾಸಕ್ಕಾಗಿ ರೂ.57,999/- ಹಣಕೊಟ್ಟು ಉತ್ತಮ ಸೌಲಭ್ಯ ಇದೆ ಅನ್ನುವ ಆಸಿಸ್ ಕಂಪನಿಯ, ಆಸಿಸ್ ರಾಗ್-5 ಮೊಬೈಲ್‍ನ್ನು ಜೂನ್ 05, 2021 ರಂದು ಖರೀದಿಸಿದ್ದರು. ಮೊಬೈಲ್ ಖರೀದಿಸಿದ 6 ತಿಂಗಳ ಒಳಗೆ ಅದರಲ್ಲಿ ದೋಷಗಳು ಕಂಡು ಬಂದು ಅದು ಸರಿಯಾಗಿ ಕೆಲಸ ನಿರ್ವಹಿಸುತ್ತಿರಲಿಲ್ಲ. ಅದಕ್ಕಾಗಿ ದೂರುದಾರ ಸದರಿ ಮೊಬೈಲ್‍ನ್ನು ಆಸಿಸ್ ಕಂಪನಿಯ ಹುಬ್ಬಳ್ಳಿಯ ವಿಧ್ಯಾನಗರದಲ್ಲಿರುವ ಅಧಿಕೃತ ಸರ್ವಿಸ್ ಸೆಂಟರ್‍ಗೆ ಅದರ ಪರಿಶೀಲನೆ ಮತ್ತು ದುರಸ್ತಿಗಾಗಿ ಹಲವಾರು ಬಾರಿ ಕೊಟ್ಟಿದ್ದರು. ಅವರು ಆ ಮೊಬೈಲ್‍ನ್ನು ಪರಿಶೀಲಿಸಿ ಅದರ ಮದರ್ ಬೊರ್ಡ್ ಬದಲಾಯಿಸಿ ಕೊಟ್ಟರೂ ಕೆಲವೇ ದಿನಗಳಲ್ಲಿ ಮತ್ತೆ ಮತ್ತೆ ಮೊಬೈಲ್‍ನಲ್ಲಿ ದೋಷ ಕಾಣಿಸಿಕೊಂಡಿತು. ಆದ್ದರಿಂದ ದೂರುದಾರ ಸದರಿ ಆಸಿಸ್ ಕಂಪನಿಯ ಉತ್ಪಾದಕರು ತನಗೆ  ದೋಷಯುಕ್ತ ಮೊಬೈಲ್ ಸರಬರಾಜು ಮಾಡಿದ್ದಾರೆ ಹಾಗೂ ಸರ್ವಿಸ್ ಸೆಂಟರ್ ನವರು ತನಗೆ ಸೂಕ್ತ ಸೇವೆ ನೀಡದೆ ಸೇವಾ ನ್ಯೂನ್ಯತೆ ಎಸಗಿ ಮೋಸ ಮಾಡಿದ್ದಾರೆ ಅಂತಾ ಹೇಳಿ ಅವರಿಬ್ಬರ ವಿರುದ್ಧ ಗ್ರಾಹಕರ ಸಂರಕ್ಷಣಾ ಕಾಯ್ದೆ ಅಡಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕೋರಿ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.

ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ  ಈಶಪ್ಪ.ಭೂತೆ,  ಸದಸ್ಯರುಗಳಾದ ವಿಶಾಲಾಕ್ಷಿ.ಅ. ಬೋಳಶೆಟ್ಟಿ ಹಾಗೂ ಪ್ರಭು.ಸಿ ಹಿರೇಮಠ ಅವರು ಸದರಿ ಮೋಬೈಲ್‍ನ್ನು ಖರೀದಿಸಿದ ಕೆಲವೇ ತಿಂಗಳುಗಳಲ್ಲಿ ಅದರಲ್ಲಿ ದೋಷ ಕಂಡು ಬಂದಿದ್ದರಿಂದ ಮತ್ತು ಆ ಬಗ್ಗೆ ದೂರಿದರೂ ಇಬ್ಬರೂ ಎದುರುದಾರರು ಅದರ ದೋಷ ಸರಿಪಡಿಸಿಲ್ಲವಾದ್ದರಿಂದ ಆ ಮೊಬೈಲ್‍ನಲ್ಲಿ ಉತ್ಪಾದನಾ ದೋಷ ಮೇಲ್ನೊಟಕ್ಕೆ ಕಂಡು ಬಂದಿದೆ ಅಂತಾ ಆಯೋಗ ಅಭಿಪ್ರಾಯಪಟ್ಟು ತೀರ್ಪು ನೀಡಿದೆ. ದೂರುದಾರ ತನ್ನ ವಿಧ್ಯಾಭ್ಯಾಸಕ್ಕೆ ಅನುಕೂಲವಾಗಲೆಂದು ಆ  ಮೊಬೈಲ್ ಖರೀದಿಸಿದ್ದರು ಅದರಲ್ಲಿ ಉತ್ಪಾದನಾ ದೋಷ ಕಂಡುಬಂದಿದ್ದರಿಂದ ದೂರುದಾರ/ ಗ್ರಾಹಕನಿಗೆ ತೊಂದರೆ ಮತ್ತು ಅನಾನುಕೂಲ ಆಗಿದೆ ಅಂತಾ ಆಯೋಗ ಅಭಿಪ್ರಯಾಪಟ್ಟಿದೆ. ಆ ಮೊಬೈಲ್‍ನಲ್ಲಿ ಉತ್ಪಾದನಾ ದೋಷ ಕಂಡುಬಂದಿದ್ದರಿಂದ ಅದನ್ನು ತಯಾರಿಸಿದ ಆಸಿಸ್ ಕಂಪನಿಯವರು ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ಹೊಸ ಮೊಬೈಲ್ ದೂರುದಾರರಿಗೆ ಕೊಡಬೇಕು ಅಂತಾ ತೀರ್ಪಿನಲ್ಲಿ ಆಯೋಗ ತಿಳಿಸಿದೆ. ಒಂದು ತಿಂಗಳ ಒಳಗಾಗಿ ಎದುರುದಾರರು ಮೊಬೈಲ್ ಬದಲಾವಣೆ ಮಾಡಿಕೊಡಲು ವಿಫಲರಾದಲ್ಲಿ ಅವರು ಆ ಮೊಬೈಲ್‍ನ ಬೆಲೆ ರೂ.57,999/- ಹಾಗೂ ಅದರ ಮೇಲೆ ಶೇ.8 ರಂತೆ ಈ ತೀರ್ಪು ನೀಡಿದ ದಿನದಿಂದ ಹಣ ಸಂದಾಯವಾಗುವವರೆಗೆ ಲೆಕ್ಕ ಹಾಕಿ ದೂರುದಾರರಿಗೆ ಕೊಡುವಂತೆ ಅವರಿಗೆ ಆಗಿರುವ ಅನಾನುಕೂಲ ಮತ್ತು ಮಾನಸಿಕ ತೊಂದರೆಗಾಗಿ ಎದುರುದಾರ/ಉತ್ಪಾದಕರು ರೂ.15,000/-ಗಳ ಪರಿಹಾರ ಹಾಗೂ ರೂ.5,000/- ಪ್ರಕರಣದ ಖರ್ಚು ವೆಚ್ಚ ನೀಡುವಂತೆ ಆಸಿಸ್ ಮೊಬೈಲ್ ಕಂಪನಿಗೆ ಆಯೋಗ ನಿರ್ದೇಶಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...