ಕೊರೊನಾ ವೈರಸ್ನ ಹೊಸ ರೂಪಾಂತರಿಯಾದ ಓಮಿಕ್ರಾನ್ ಡೆಲ್ಟಾ ರೂಪಾಂತರಿಗಿಂತ ಮೂರು ಪಟ್ಟು ಹೆಚ್ಚಿನ ವೇಗದಲ್ಲಿ ಸೋಂಕನ್ನು ಹರಡುವ ಸಾಮರ್ಥ್ಯ ಹೊಂದಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮುಖ್ಯ ವಿಜ್ಞಾನಿ ಸೌಮ್ಯ ಸ್ವಾಮಿನಾಥನ್ ಹೇಳಿದ್ದಾರೆ.
ಪ್ರಕರಣಗಳ ಹೆಚ್ಚಳ ಹಾಗೂ ಆಸ್ಪತ್ರೆಗೆ ದಾಖಲಾಗುವ ಸಂಖ್ಯೆಯಲ್ಲಿ ಹೆಚ್ಚಳ ಈ ಎರಡರ ನಡುವೆ ವಿಳಂಬವಿದೆ ಎಂದು ಸ್ವಾಮಿನಾಥನ್ ಹೇಳಿದರು. ಸೋಂಕು ಹರಡಿದ ಎರಡು ಮೂರು ವಾರಗಳ ಬಳಿಕ ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆಯಲ್ಲಿ ಏರಿಕೆ ಕಂಡಿದ್ದು ಇದರಿಂದಲೇ ನೀವು ರೋಗದ ತೀವ್ರತೆಯನ್ನು ಕಂಡುಹಿಡಿಯಬಹುದಾಗಿದೆ ಎಂದು ಹೇಳಿದ್ರು.
ದಕ್ಷಿಣ ಆಫ್ರಿಕಾದಲ್ಲಿ ಓಮಿಕ್ರಾನ್ ಕಾಲಿಟ್ಟಾಗಿನಿಂದ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡುಬಂದಿದೆ. ಅಲ್ಲದೆ ದಕ್ಷಿಣ ಆಫ್ರಿಕಾದಲ್ಲಿ ಹೆಚ್ಚಾಗಿ ಮಕ್ಕಳಿಗೆ ಈ ರೂಪಾಂತರಿಯಿಂದ ಸೋಂಕು ಬರುತ್ತಿದೆ ಎಂದು ಸೌಮ್ಯ ಸ್ವಾಮಿನಾಥನ್ ಹೇಳಿದರು.
ಮಕ್ಕಳು ಹಾಗೂ ಲಸಿಕೆ ಹಾಕಿಸಿಕೊಳ್ಳದೇ ಇರುವವರೇ ಹೆಚ್ಚಾಗಿ ಸೋಂಕಿಗೆ ಒಳಗಾಗುತ್ತಿದ್ದು ಈ ವಿಚಾರದ ಬಗ್ಗೆ ಹೆಚ್ಚಿನ ಗಮನ ನೀಡಬೇಕಿದೆ ಎಂದು ಹೇಳಿದ್ರು. ಈ ನಡುವೆ ಸಿಂಗಾಪುರದ ಆರೋಗ್ಯ ಸಚಿವಾಲಯವು ಜಾಗತಿಕವಾಗಿ ಆರಂಭಿಕ ಹಂತದಲ್ಲಿ ಮಾಡಲಾದ ವೈದ್ಯಕೀಯ ಅವಲೋಕನವು ಕೋವಿಡ್ 19 ಓಮಿಕ್ರಾನ್ ರೂಪಾಂತರವು ಹೆಚ್ಚಾಗಿ ಹರಡುತ್ತದೆ ಹಾಗೂ ಡೆಲ್ಟಾ ಹಾಗೂ ಬೀಟಾ ರೂಪಾಂತರಿಗಳಿಗೆ ಹೋಲಿಕೆ ಮಾಡಿದರೆ ಮರು ಸೋಂಕಿನ ಅಪಾಯವನ್ನು ಹೆಚ್ಚಾಗಿ ಹೊಂದಿದೆ ಎಂದು ಹೇಳಿದೆ.
ಅಂದರೆ ಇದರರ್ಥ ಕೋವಿಡ್ 19ನಿಂದ ಚೇತರಿಸಿಕೊಂಡವರೂ ಸಹ ಒಮಿಕ್ರಾನ್ ರೂಪಾಂತರದಿಂದ ಮರುಸೋಂಕಿಗೆ ಒಳಗಾಗುವ ಸಂಭಾವ್ಯತೆ ಹೆಚ್ಚಿನ ಪ್ರಮಾಣದಲ್ಲಿ ಇದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ.