ಅಮೆಜಾನ್ ಪ್ರೈಮ್, ಡಿಸ್ನೆ ಪ್ಲಸ್ ಹಾಟ್ಸ್ಟಾರ್ ಸೇರಿದಂತೆ ವಿವಿಧ ವಿಡಿಯೋ ಆನ್ ಡಿಮ್ಯಾಂಡ್ ಪ್ಲೇಯರ್ಗಳ ತೀವ್ರ ಪೈಪೋಟಿ ನಡುವೆಯೇ ತನ್ನ ಬಳಕೆದಾರರ ಸಂಖ್ಯೆಯನ್ನು ಹೆಚ್ಚಿಸುವ ಪ್ರಯತ್ನದಲ್ಲಿ ನೆಟ್ಫ್ಲಿಕ್ಸ್ ತನ್ನ ಚಂದಾದಾರಿಕೆ ಯೋಜನೆಗಳ ಬೆಲೆಯನ್ನು ಇಳಿಕೆ ಮಾಡಿದೆ.
ಕಂಪನಿಯು ಪ್ರತಿ ತಿಂಗಳಿಗೆ 199 ರೂಪಾಯಿ ಇದ್ದ ಮೊಬೈಲ್ ಪ್ಲಾನ್ನ್ನು 149 ರೂಪಾಯಿಗಳಿಗೆ ಇಳಿಕೆ ಮಾಡಲಾಗಿದೆ. ಈ ಹಿಂದೆ 499 ರೂಪಾಯಿ ಇದ್ದ ಬೇಸಿಕ್ ಪ್ಲಾನ್ ಇನ್ಮುಂದೆ 199 ರೂಪಾಯಿಗೆ ಲಭ್ಯವಿರಲಿದೆ. 649 ರೂಪಾಯಿ ಇದ್ದ ಸ್ಟಾಂಡರ್ಡ್ ಪ್ಲಾನ್ 499 ರೂಪಾಯಿಗೆ ಇಳಿಕೆ ಮಾಡಲಾಗಿದೆ. ತಿಂಗಳಿಗೆ 799 ರೂಪಾಯಿ ಇದ್ದ ಪ್ರೀಮಿಯಂ ಪ್ಲಾನ್ ಇದೀಗ 649 ರೂಪಾಯಿಗೆ ಸಿಗಲಿದೆ.
ಅಮೆಜಾನ್ ಪ್ರೈಮ್ 1 ತಿಂಗಳ ಚಂದಾದಾರಿಕೆ 129 ರೂಪಾಯಿಗಳಿಗೆ ಲಭ್ಯವಿದ್ದರೆ ಡಿಸ್ನೆ ಪ್ಲಸ್ ಹಾಟ್ಸ್ಟಾರ್ ಪ್ರತಿ ವರ್ಷಕ್ಕೆ ಪ್ರೀಮಿಯಂ ಸರ್ವೀಸ್ 1499 ರೂಪಾಯಿ ಹಾಗೂ ಮೊಬೈಲ್ಗೆ 499 ರೂಪಾಯಿಗಳಿಗೆ ಲಭ್ಯವಿದೆ.
ಈ ಪರಿಷ್ಕೃತ ಪ್ಲಾನ್ ದರಗಳಿಗೆ ನೆಟ್ಫ್ಲಿಕ್ಸ್ ಕಂಪನಿಯು ಹ್ಯಾಪಿ ನ್ಯೂ ಪ್ರೈಸಸ್ ಎಂದು ಹೆಸರು ನೀಡಿದೆ. ಈ ಪರಿಷ್ಕೃತ ದರವು ಇಂದಿನಿಂದ ಲಭ್ಯವಿದೆ.
ಇನ್ನು ಈ ವಿಚಾರವಾಗಿ ಮಾತನಾಡಿದ ನೆಟ್ಫ್ಲಿಕ್ಸ್ ಇಂಡಿಯಾ ಕಟೆಂಟ್ ಉಪಾಧ್ಯಕ್ಷರಾದ ಮೋನಿಕಾ ಶೆರ್ಗಿಲ್ ದರ ಕಡಿತವು ಮುಂಬರುವ ಹೊಸ ವಿಷಯಗಳೊಂದಿಗೆ ಸಂಬಂಧ ಹೊಂದಿದೆ. ಕಳೆದ ಮೂರು ವಾರಗಳಿಂದ ನಾವು ದೊಡ್ಡ ದೊಡ್ಡ ಟೈಟಲ್ಗಳನ್ನು ಹೊರತರುತ್ತಿದ್ದೇವೆ. ಈ ವಿಚಾರವನ್ನು ಹೊಸ ಪ್ರೇಕ್ಷಕರಿಗೆ ನೀಡಲು ಸಿದ್ಧರಾಗಿದ್ದೇವೆ ಎಂದು ಹೇಳಿದ್ರು.