alex Certify ತನ್ನ ಮಗುವಿಗಾಗಿ ಈ ಕೆಲಸ ಶುರು ಮಾಡಿದ ಮಹಿಳೆ ಈಗ ದೊಡ್ಡ ಉದ್ಯಮಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತನ್ನ ಮಗುವಿಗಾಗಿ ಈ ಕೆಲಸ ಶುರು ಮಾಡಿದ ಮಹಿಳೆ ಈಗ ದೊಡ್ಡ ಉದ್ಯಮಿ

ʼಹನಿ ಹನಿಗೂಡಿ ಹಳ್ಳ, ತೆನೆ ತೆನೆ ಕೂಡಿ ಬಳ್ಳʼ ಎಂಬ ಗಾದೆಗೆ ಈ ಮಹಿಳೆ ಜೀವಂತ ನಿದರ್ಶನ. ತನ್ನ ಮಗುವಿನ ಕಾಳಜಿಗೋಸ್ಕರ ಸಣ್ಣ ಸಣ್ಣ ಉತ್ಪನ್ನಗಳನ್ನು ತಯಾರಿಸಲು ಆರಂಭಿಸಿದ ಈಕೆ ಈಗ ಲಕ್ಷಾಂತರ ರೂಪಾಯಿ ಬೆಲೆಬಾಳುವ ಕಂಪನಿಯ ಒಡತಿ…!

ಈಕೆಯ ಹೆಸರು ಐಶ್ವರ್ಯ ರವಿ. ಬೆಂಗಳೂರು ನಿವಾಸಿಯಾಗಿರುವ 29 ವರ್ಷದ ಐಶ್ವರ್ಯ ರವಿ ಇವರಿಗೆ 2015ರಲ್ಲಿ ತಮ್ಮ ಮಗಳ ಆರೋಗ್ಯದ ಕುರಿತು ಬಹಳ ಚಿಂತೆಯಾಗಿತ್ತು. ಏಕೆಂದರೆ ಇವರ ಮಗಳಿಗೆ ಚರ್ಮದ ಮೇಲೆ ಗುಳ್ಳೆಗಳು ಏಳಲು ಆರಂಭಿಸಿದ್ದವು. ಇದಕ್ಕಾಗಿ ವೈದ್ಯರನ್ನು ಸಂಪರ್ಕಿಸಿದಾಗ ವೈದ್ಯರು ನಿಮ್ಮ ಮಗುವಿನ ಚರ್ಮಕ್ಕೆ ಮಾರುಕಟ್ಟೆಯಲ್ಲಿ ಸಿಗುವ ಯಾವ ಉತ್ಪನ್ನಗಳೂ ಹೊಂದುವುದಿಲ್ಲ. ಅದರಲ್ಲಿರುವ ಯಾವುದೋ ಕೆಮಿಕಲ್ ನಿಂದಲೇ ಮಗುವಿಗೆ ಸ್ಕಿನ್ ಅಲರ್ಜಿ ಆಗುತ್ತದೆ ಅವಳಿಗೆ ಸ್ಪಂಜ್ ಬಾತ್ ಮಾತ್ರ ಮಾಡಿಸಿ ಎಂದು ಸಲಹೆ ನೀಡಿದ್ದರು.

ವೈದ್ಯರ ಸಲಹೆ ಪಡೆದ ಮೇಲೆಯೂ ಐಶ್ವರ್ಯ ಅವರಿಗೆ ಮಗಳ ಕುರಿತು ಚಿಂತೆ ದೂರವಾಗಲಿಲ್ಲ. ಯಾವುದೇ ಸೋಪು ಅಥವಾ ಶಾಂಪೂ ಬಳಸದೇ ಮಗುವಿಗೆ ಹೇಗೆ ಸ್ನಾನ ಮಾಡಿಸುವುದು ? ಎಷ್ಟು ದಿನ ಸ್ಪಂಜ್ ಬಾತ್ ಮುಂದುವರೆಸುವುದು ? ಇಂಥ ಹತ್ತು ಹಲವು ಸಮಸ್ಯೆಗಳೇ ಐಶ್ವರ್ಯ ಅವರ ಹೊಸ ಬದುಕಿಗೆ ದಾರಿ ತೋರಿಸಿತು. ಅವರು ಅವರ ಅಮ್ಮ ಮತ್ತು ಅಜ್ಜಿಯನ್ನು ಸಂಪರ್ಕಿಸಿದರು. ಅವರು ರಾಸಾಯನಿಕ ಉತ್ಪನ್ನಗಳಿಗೆ ಬದಲಾಗಿ ಪರ್ಯಾಯ ಉಪಾಯ ಕೊಡಬಹುದೆಂಬ ನಂಬಿಕೆ ಐಶ್ವರ್ಯ ಅವರಿಗಿತ್ತು.

ಅಮ್ಮ ಮತ್ತು ಅಜ್ಜಿಯ ಸಲಹೆಯಿಂದ ಗೃಹಬಳಕೆ ಉತ್ಪನ್ನಗಳಾದ ಮೊಟ್ಟೆ, ಕಡಲೆಹಿಟ್ಟು, ಎಣ್ಣೆ ಮುಂತಾದವುಗಳನ್ನು ಬಳಸಿ ಬೇಬಿ ಪೌಡರ್ ತಯಾರಿಸಲು ಆರಂಭಿಸಿದರು. ಇಂತಹ ಉತ್ಪನ್ನಗಳನ್ನು ಮೊದಲು ಅವರು ಬಳಸಿ, ಅದರಿಂದ ಯಾವುದೇ ಸೈಡ್ ಎಫೆಕ್ಟ್ ಆಗುವುದಿಲ್ಲ ಎಂದು ತಿಳಿದ ಮೇಲೆಯೇ ಅದನ್ನು ಮಗುವಿಗೆ ಹಚ್ಚಿದರು. ಅದನ್ನು ಬಳಸಿದ ಮೇಲೆ ಮಗುವಿನ ಚರ್ಮದ ಮೇಲೆ ಯಾವುದೇ ಗುಳ್ಳೆಗಳು ಕಾಣಿಸದೇ ಇದ್ದಾಗ ಐಶ್ವರ್ಯ ಅವರ ಸಂತೋಷಕ್ಕೆ ಪಾರವೇ ಇರಲಿಲ್ಲ.

ಐಶ್ವರ್ಯ ಅವರು ತಮ್ಮ ಮಗಳಿಗೆಂದು ಉತ್ಪನ್ನಗಳನ್ನು ತಯಾರಿಸಿ ಅಷ್ಟಕ್ಕೇ ಸುಮ್ಮನೆ ಕೂರಲಿಲ್ಲ. ಇದು ಇನ್ನೂ ಹಲವು ಮಕ್ಕಳಿಗೆ ತಲುಪಬೇಕೆಂದು ಹಠ ಹೊತ್ತರು. ಅವರ ಗೆಳತಿ ಹರಿಣಿ ಸುಕುಮಾರನ್ ಅವರ ನೆರವಿನಿಂದ ಫೇಸ್ ಬುಕ್ ಪೇಜ್ ಆರಂಭಿಸಿದರು. ದಿನ ಕಳೆಯುತ್ತಿದ್ದಂತೆ ಅವರ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಹೆಸರುಮಾಡಿತು. ಹೆಚ್ಚಿನ ಜನ ಖರೀದಿಸಲು ಆರಂಭಿಸಿದರು.

ಈಗ ಐಶ್ವರ್ಯ ಅವರು ‘ನೇಚರ್ ಡೆಸ್ಟಿನಿ’ ಎಂಬ ಕಂಪನಿಯನ್ನು ಆರಂಭಿಸಿ ಬೇಬಿ ಸೋಪು, ಶಾಂಪೂ, ಪೌಡರ್ ಲಿಫ್ ಬಾಮ್ ಇಂತಹ 65 ವಿವಿಧ ರೀತಿಯ ಉತ್ಪನ್ನಗಳನ್ನು ತಯಾರಿಸುತ್ತಾರೆ. ಇದರಿಂದ ಅವರು ತಿಂಗಳಿಗೆ ಸುಮಾರು 5 ಲಕ್ಷ ಸಂಪಾದಿಸುತ್ತಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...