alex Certify ತಂತ್ರಜ್ಞಾನದಲ್ಲಿ ಕನ್ನಡ ಹೆಚ್ಚು ಬಳಕೆಯಿಂದ ಭಾಷೆ ವ್ಯಾಪಕ ಬೆಳವಣಿಗೆಗೆ ಸಹಕಾರಿ: ಟಿ.ಎಸ್ ನಾಗಾಭರಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಂತ್ರಜ್ಞಾನದಲ್ಲಿ ಕನ್ನಡ ಹೆಚ್ಚು ಬಳಕೆಯಿಂದ ಭಾಷೆ ವ್ಯಾಪಕ ಬೆಳವಣಿಗೆಗೆ ಸಹಕಾರಿ: ಟಿ.ಎಸ್ ನಾಗಾಭರಣ

ಬೆಳಗಾವಿ: ಭವಿಷ್ಯದ ಕನ್ನಡ ಕಟ್ಟಬೇಕಾದರೆ ತಂತ್ರಾಂಶಗಳಲ್ಲಿ ಹೆಚ್ಚಾಗಿ ಕನ್ನಡ ಬಳಕೆ ಮಾಡಬೇಕು. ಜೊತೆಗೆ ಎಲ್ಲರೂ ದಿನನಿತ್ಯ ಕಾರ್ಯ ಚಟುವಟಿಕೆಗಳಲ್ಲಿ ಸದಾ ಕನ್ನಡ ಭಾಷೆ ಬಳಸಿದರೆ ಭವಿಷ್ಯದಲ್ಲಿ ಕನ್ನಡ ವ್ಯಾಪಕವಾಗಿ ಬೆಳವಣಿಗೆಯಾಗುವುದರ ಮೂಲಕ  ಪ್ರಾಬಲ್ಯ ಸಾಧಿಸಲಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಟಿ.ಎಸ್ ನಾಗಾಭರಣ ಅವರು ತಿಳಿಸಿದರು.

ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಭಾನುವಾರ ನಡೆದ ಕನ್ನಡ ನುಡಿನಡೆ, ಕಾಯಕ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಹಲವು ವರ್ಷಗಳಿಂದ ಕನ್ನಡ ಕನ್ನಡ ಉಳಿವಿಗೆ ಅನೇಕ ಹೋರಾಟಗಳು ನಡೆದಿವೆ. ವರ್ತಮಾನದಲ್ಲಿ ಹಾಗೂ ಭವಿಷ್ಯದಲ್ಲಿ ಕನ್ನಡ ಕಟ್ಟುವ ಕೆಲಸ ಪ್ರಾಧಿಕಾರ, ಸಂಘಟನೆಗಳಿಗೆ ಮಾತ್ರ ಬಿಡದೆ ನಮ್ಮ ನಿತ್ಯ ಜೀವನದಲ್ಲಿ ಕನ್ನಡ ಬಳಕೆ ಮಾಡುವ ಮೂಲಕ ಸಮುದಾಯದ ಪ್ರತಿಯೊಬ್ಬರೂ ಕನ್ನಡವನ್ನು ಬೆಳೆಸುವ ಕೆಲಸ ಮಾಡಬೇಕು ಎಂದು ತಿಳಿಸಿದರು.

ಕನ್ನಡ ಭಾಷೆಯ ಬಳಕೆಯನ್ನು ಮತ್ತಷ್ಟು ಹೆಚ್ಚಿಸುವ ಅನಿವಾರ್ಯತೆ ಈ ದಿನಗಳಲ್ಲಿದೆ. ಮೊಬೈಲ್‌ ಬಳಕೆ ಸರ್ವವ್ಯಾಪಿಯಾಗುತ್ತಿರುವುದರಿಂದ ಮೊಬೈಲ್‌ನಲ್ಲಿಯೇ ಕನ್ನಡ ಲಿಪಿಯ ಪರಿಣಾಮಕಾರಿ ಬಳಕೆಗೆ ನಾವೆಲ್ಲರೂ ಒತ್ತು ನೀಡಬೇಕು. ಆಧುನಿಕ ತಂತ್ರಜ್ಞಾನ ಮೂಲಕ ಕನ್ನಡವನ್ನು ಬೆಳೆಸುವ ಕಾರ್ಯಕ್ಕೆ ಮುಂದಾಗಬೇಕು ಎಂದು ತಿಳಿಸಿದರು.

ತಂತ್ರಜ್ಞಾನದಲ್ಲಿ ಕನ್ನಡ ಬಳಕೆ:

ಮೊಬೈಲ್ ನಲ್ಲಿ ಟೈಪ್ ಮಾಡುವ ಕೀಬೋರ್ಡ್‌ನಿಂದ ಹಿಡಿದು ಫೇಸ್ಬುಕ್-ವಾಟ್ಸ್ಯಪ್‌, ನೋಟ್ಸ್ ಟೈಪ್, ಮೆಸೇಜ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡ ರಾರಾಜಿಸುತ್ತಿರುವ ಈ ಹೊತ್ತಿನಲ್ಲಿ ತಂತ್ರಜ್ಞಾನದಲ್ಲಿ ಕನ್ನಡ ಬಳಸಲು ಎಲ್ಲರೂ ಒತ್ತು ನೀಡಬೇಕು ಇದರಿಂದ ಭವಿಷ್ಯದಲ್ಲಿ ಕನ್ನಡವನ್ನು ವ್ಯಾಪಕವಾಗಿ ಬೆಳೆಸಲು ಸಹಾಯವಾಗಲಿದೆ ಎಂದು ಹೇಳಿದರು.

ಕನ್ನಡ ಬಳಕೆ ನಿರಂತರ:

ಕನ್ನಡದ ಉಳಿವಿಗಾಗಿ ಹೆಚ್ಚು ಕನ್ನಡ ಭಾಷೆಯನ್ನು ಬಳಸಬೇಕು. ದೈನಂದಿನ ಜೀವನದಲ್ಲಿ ಕನ್ನಡ ಮಾತಾಡಬೇಕು, ಬರೆಯಬೇಕು. ಮನೆಗಳಲ್ಲಿ ಮಕ್ಕಳ ಜತೆ ಕನ್ನಡದಲ್ಲಿಯೇ ಮಾತನಾಡುವುದರಿಂದ, ಹೆಚ್ಚೆಚ್ಚು ಕನ್ನಡ ಭಾಷೆಯನ್ನು ಬಳಕೆ ಮಾಡುವುದರಿಂದ ನಮ್ಮ ಭಾಷೆ ಜೀವಂತವಾಗಿರುತ್ತದೆ. ಬಳಸಿದ ಹಾಗೆಯೇ ಭಾಷೆ ಬೆಳೆಯುತ್ತದೆ ಎಂದು ತಿಳಿಸಿದರು.

ಕನ್ನಡ ಭಾಷೆಯನ್ನು ಸದಾ ಕಾಲ ಬಳಕೆಯಲ್ಲಿರುವಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮದಾಗಿದೆ. ಯುವಕರು ಕನ್ನಡ ಭಾಷೆ ಬಳಕೆ ಮಾಡುವುದರ ಮೂಲಕ ಕನ್ನಡ ಬೆಳವಣಿಗೆಗೆ ಶ್ರಮಿಸಬೇಕು. ಪ್ರತಿನಿತ್ಯ ವಿದ್ಯಾರ್ಥಿಗಳಿಗೆ ಪಾಠ ಮಾಡುವ ಶಿಕ್ಷಕರು ಕೂಡ ಕನ್ನಡ ಭಾಷೆಯನ್ನು ಹೆಚ್ಚಾಗಿ ಬಳಕೆ ಮಾಡಬೇಕು ಎಂದು ನಾಗಾಭರಣ ಅವರು ಹೇಳಿದರು.

ಕನ್ನಡ ಸಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗಿಯಾದ ವಿದ್ಯಾರ್ಥಿಗಳ ಶಾಲಾ-ಕಾಲೇಜು ಮುಖ್ಯಸ್ಥರಿಗೆ ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಡಾ. ಸಂತೋಷ ಹಾನಗಲ್, ಲೇಖಕರು ಹಾಗೂ ರಂಗಕರ್ಮಿ ನಿರ್ದೇಶಕ ಶ್ರೀಪತಿ ಮಂಜನಬೈಲು, ಕನ್ನಡ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ವಿದ್ಯಾರ್ಥಿ ಭಜಂತ್ರಿ, ಕೆ.ಎಸ್.ಆರ್ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಬಿ.ಜಿ ಧಾರವಾಡ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಪ್ರಾಸ್ತಾವಿಕವಾಗಿ ಡಾ. ಅರವಿಂದ ಕುಲಕರ್ಣಿ ಮಾತನಾಡಿದರು, ಗೋಗಟೆ ವಾಣಿಜ್ಯ ಮಹಾವಿದ್ಯಾಲಯದ ವಿದ್ಯಾರ್ಥಿಗಳು ನಾಡಗೀತೆ ಹಾಗೂ ವಿನಾಯಕ ಮೊರೆ ಸ್ವಾಗತ ಗೀತೆ ಪ್ರಸ್ತುತಪಡಿಸಿದರು, ಜ್ಯೋತಿ ಬಾದಾಮಿ ಸ್ವಾಗತ ಕೋರಿದರು, ನಿರ್ಮಲ ಬಟ್ಟಲ ನಿರೂಪಿಸಿ ವಂದಿಸಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...