alex Certify ಹಿಂಸಾಚಾರದ ಕಿಚ್ಚಿನಲ್ಲಿರುವ ಮಣಿಪುರದಲ್ಲಿ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಿಂಸಾಚಾರದ ಕಿಚ್ಚಿನಲ್ಲಿರುವ ಮಣಿಪುರದಲ್ಲಿ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ

ಮೀಸಲಾತಿ ವಿಚಾರವಾಗಿ ಉದ್ವಿಗ್ನತೆ ಸ್ಥಿತಿಯಲ್ಲಿರುವ ಮಣಿಪುರ ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿಯಾಗಿದೆ.
ಇದುವರೆಗೆ ಕನಿಷ್ಠ 80 ಜನರನ್ನು ಬಲಿತೆಗೆದುಕೊಂಡಿರುವ ಹಿಂಸಾಚಾರದ ನಡುವೆ ತ್ರಿಪುರಾ ಕೇಡರ್‌ನ ಭಾರತೀಯ ಪೊಲೀಸ್ ಸೇವೆ (ಐಪಿಎಸ್) ರಾಜೀವ್ ಸಿಂಗ್ ಅವರನ್ನು ಮಣಿಪುರದ ಹೊಸ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ರಾಗಿ ನೇಮಿಸಲಾಗಿದೆ.

ಈ ಹಿಂದೆ ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್‌ನ (CRPF) ಇನ್ಸ್ ಪೆಕ್ಟರ್ ಜನರಲ್ ಆಗಿದ್ದ ರಾಜೀವ್ ಸಿಂಗ್ ಅವರನ್ನು ಮಣಿಪುರಕ್ಕೆ ಇಂಟರ್-ಕೇಡರ್ ಡೆಪ್ಯುಟೇಶನ್‌ನಲ್ಲಿ ಕಳುಹಿಸಲಾಗಿದೆ. ಪ್ರಸ್ತುತ ಡಿಜಿಪಿ ಪಿ ಡೌಂಗೆಲ್ ಅವರನ್ನು ಗೃಹ ಇಲಾಖೆಗೆ ವರ್ಗಾಯಿಸಲಾಗಿದೆ.

ಯಾವುದೇ ಸಂಭಾವ್ಯ ವಿವಾದವನ್ನು ತಪ್ಪಿಸುವ ಉದ್ದೇಶದಿಂದ ಬುಡಕಟ್ಟು ಅಲ್ಲದ, ಮೈತಿಯೇತರ ಸಮುದಾಯದ ಪೊಲೀಸ್ ಮುಖ್ಯಸ್ಥರನ್ನು ಕರೆತರುವ ಮೂಲಕ ಪರಿಸ್ಥಿತಿ ನಿಭಾಯಿಸಲು ಗೃಹ ವ್ಯವಹಾರಗಳ ಸಚಿವಾಲಯ ಈ ಕ್ರಮ ಕೈಗೊಂಡಿರುವುದಾಗಿ ತಿಳಿದುಬಂದಿದೆ.

ಮೇ 3 ರಂದು ರಾಜ್ಯದಲ್ಲಿ ಹಿಂಸಾಚಾರ ಭುಗಿಲೆದ್ದ ತಕ್ಷಣ, ಕೇಂದ್ರ ಸರ್ಕಾರವು ಸಿಆರ್‌ಪಿಎಫ್‌ನ ಮಾಜಿ ಮುಖ್ಯಸ್ಥ ಕುಲ್ದೀಪ್ ಸಿಂಗ್ ಅವರನ್ನು ಮಣಿಪುರ ಸರ್ಕಾರದ ಭದ್ರತಾ ಸಲಹೆಗಾರರನ್ನಾಗಿ ನೇಮಿಸಿತು.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಘರ್ಷಣೆಯ ಕುರಿತು ನ್ಯಾಯಾಂಗ ತನಿಖೆಯ ಘೋಷಣೆ ಮತ್ತು ನಡೆಯುತ್ತಿರುವ ಬಿಕ್ಕಟ್ಟನ್ನು ಪರಿಹರಿಸಲು ಶಾಂತಿ ಸಮಿತಿಯನ್ನು ಸ್ಥಾಪಿಸಿದ ಬೆನ್ನಲ್ಲೇ ಈ ಬದಲಾವಣೆಯಾಗಿದೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಮಿತ್ ಶಾ ಹಿಂಸಾಚಾರವನ್ನು ಕೊನೆಗೊಳಿಸಲು ಸಂವಾದವು ಪ್ರಮುಖವಾಗಿದೆ ಎಂದು ಒತ್ತಿ ಹೇಳಿದರು.

ನಿವೃತ್ತ ಹೈಕೋರ್ಟ್ ಮುಖ್ಯ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆಯನ್ನು ಶೀಘ್ರದಲ್ಲೇ ಘೋಷಿಸಲಾಗುವುದು. ಶಾಂತಿ ಸಮಿತಿಯು ಮಣಿಪುರದ ಗವರ್ನರ್ ಅನುಸೂಯಾ ಯುಕೆ ಅವರ ನೇತೃತ್ವದಲ್ಲಿರುತ್ತದೆ. ಇದು ಎಲ್ಲಾ ರಾಜಕೀಯ ಪಕ್ಷಗಳ ಪ್ರತಿನಿಧಿಗಳನ್ನು ಒಳಗೊಂಡಿರುತ್ತದೆ. ಕುಕಿ ಮತ್ತು ಮೈತಿ ಸಮುದಾಯಗಳು ಮತ್ತು ಸಾಮಾಜಿಕ ಸಂಸ್ಥೆಗಳು ಸೇರಿರುತ್ತವೆ ಎಂದು ಹೇಳಿದ್ದರು.

ಪರಿಶಿಷ್ಟ ಪಂಗಡದ (ಎಸ್‌ಟಿ) ಸ್ಥಾನಮಾನಕ್ಕಾಗಿ ಬಹುಸಂಖ್ಯಾತ ಮೈತಿ ಸಮುದಾಯದ ಬೇಡಿಕೆಯನ್ನು ಪ್ರತಿಭಟಿಸಲು ಮೇ 3 ರಂದು ‘ಬುಡಕಟ್ಟು ಒಗ್ಗಟ್ಟಿನ ಮೆರವಣಿಗೆ’ ಆಯೋಜಿಸಿದ ನಂತರ ಮಣಿಪುರದಲ್ಲಿ ಮೊದಲ ಬಾರಿಗೆ ಜನಾಂಗೀಯ ಹಿಂಸಾಚಾರ ಪ್ರಾರಂಭವಾಯಿತು. ಮೈತಿ ಸಮುದಾಯದವರನ್ನ ಎಸ್ ಟಿಗೆ ಸೇರಿಸಲು ಕುಕಿ ಸಮುದಾಯದವರು ಬಲವಾಗಿ ವಿರೋಧಿಸಿದ್ದು ಅಂದಿನಿಂದ ಹಿಂಸಾಚಾರ ರಾಜ್ಯವನ್ನ ಹೊತ್ತಿ ಉರಿಯುವಂತೆ ಮಾಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...