ದೋಸೆ ಮಾಡಿದಾಗ, ಇಡ್ಲಿ ಮಾಡಿದಾಗ ನೆಂಚಿಕೊಳ್ಳಲು ಚಟ್ನಿ ಇದ್ದರೆ ಸಾಕು. ಹಾಗೇ ಬಿಸಿ ಅನ್ನಕ್ಕೆ ಸ್ವಲ್ಪ ತುಪ್ಪ ಹಾಕಿಕೊಂಡು ಚಟ್ನಿ ಹಾಕಿಕೊಂಡು ಊಟ ಮಾಡುತ್ತಿದ್ದರೆ ಕೂಡ ರುಚಿ ಹೆಚ್ಚುತ್ತದೆ. ಇಲ್ಲಿ ಸುಲಭವಾಗಿ ಟೊಮೆಟೊ ಹಾಗೂ ಕ್ಯಾಪ್ಸಿಕಂ ಚಟ್ನಿ ಮಾಡುವ ವಿಧಾನ ಇದೆ. ಮಾಡಿ ನೋಡಿ.
ಬೇಕಾಗುವ ಸಾಮಗ್ರಿಗಳು:
ಟೊಮೆಟೊ – 1.5 ಕಪ್, ಕ್ಯಾಪ್ಸಿಕಂ – 1/2 ಕಪ್, ಹಸಿಮೆಣಸು – 5, ಕೊತ್ತಂಬರಿಸೊಪ್ಪು – 1/2 ಕಟ್, ಅರಿಶಿನ – 1/2 ಟೀ ಸ್ಪೂನ್, ಉಪ್ಪು – ರುಚಿಗೆ ತಕ್ಕಷ್ಟು, ಎಣ್ಣೆ – 1 ಟೇಬಲ್ ಸ್ಪೂನ್.
ಒಗ್ಗರಣೆಗೆ: ಸಾಸಿವೆ – 1 ಟೀ ಸ್ಪೂನ್, ಕರಿಬೇವು – 5 ಎಸಳು, ಇಂಗು – ಚಿಟಿಕೆ, ಎಣ್ಣೆ – 1 ಟೇಬಲ್ ಸ್ಪೂನ್.
ಮಾಡುವ ವಿಧಾನ:
ಗ್ಯಾಸ್ ಮೇಲೆ ಒಂದು ಪ್ಯಾನ್ ಇಟ್ಟು ಅದಕ್ಕೆ ಎಣ್ಣೆ ಹಾಕಿ ನಂತರ ಅರಿಶಿನ ಪುಡಿ, ಹಸಿಮೆಣಸು, ಟೊಮೆಟೊ, ಕ್ಯಾಪ್ಸಿಕಂ, ಕೊತ್ತಂಬರಿಸೊಪ್ಪು, ಉಪ್ಪು ಹಾಕಿ ಮಿಕ್ಸ್ ಮಾಡಿ ಒಂದು ಪ್ಲೇಟ್ ಮುಚ್ಚಿ 10 ನಿಮಿಷಗಳ ಕಾಲ ಹದ ಉರಿಯಲ್ಲಿ ಬೇಯಿಸಿಕೊಳ್ಳಿ.
ನಂತರ ಗ್ಯಾಸ್ ಆಫ್ ಮಾಡಿ ಇದನ್ನು ತಣ್ಣಗಾಗಲು ಬಿಟ್ಟು ಬಿಡಿ. ಈ ಮಿಶ್ರಣವನ್ನು ಒಂದು ಮಿಕ್ಸಿ ಜಾರಿಗೆ ಹಾಕಿ ನಯವಾಗಿ ರುಬ್ಬಿಕೊಳ್ಳಿ. ಒಗ್ಗರಣೆ ಪಾತ್ರೆಗೆ 1 ಟೇಬಲ್ ಸ್ಪೂನ್ ಎಣ್ಣೆ ಹಾಕಿಕೊಂಡು ಅದಕ್ಕೆ ಸಾಸಿವೆ, ಕರಿಬೇವು, ಇಂಗು ಹಾಕಿ ಅದನ್ನು ರುಬ್ಬಿಕೊಂಡ ಮಿಶ್ರಣಕ್ಕೆ ಹಾಕಿ ಸರ್ವ್ ಮಾಡಿ.