alex Certify ಶೈಕ್ಷಣಿಕ ವರ್ಷ, ಶಾಲೆ ಅವಧಿ, ಪಠ್ಯ ಕಡಿತ ಬಗ್ಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಮುಖ್ಯ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶೈಕ್ಷಣಿಕ ವರ್ಷ, ಶಾಲೆ ಅವಧಿ, ಪಠ್ಯ ಕಡಿತ ಬಗ್ಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಮುಖ್ಯ ಮಾಹಿತಿ

ಬೆಂಗಳೂರು: ಕೊರೋನಾ ಕಾಲಘಟ್ಟದಲ್ಲಿ ಶೈಕ್ಷಣಿಕ ವರ್ಷಕ್ಕೆ ಕೇಂದ್ರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಮಾರ್ಗದರ್ಶಿ ಸೂತ್ರದ ಆಧಾರದಲ್ಲಿ ನಮ್ಮ ರಾಜ್ಯದ ಅಗತ್ಯತೆಗಳಿಗುನುಗುಣವಾಗಿ ಶಾಲಾ ಶೈಕ್ಷಣಿಕ ಚಟುವಟಿಕೆಗಳನ್ನು ರೂಪಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.

ಕೊರೋನಾ ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಹಾಜರಾಗಬೇಕಾದ ವಿದ್ಯಾರ್ಥಿಗಳಿಗೆ ಒದಗಿಸಲು ಮಾಸ್ಕ್ ಮತ್ತು ಸ್ಯಾನಿಟೈಸರ್ಗಳನ್ನು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್-ಕರ್ನಾಟಕ ಹಾಗೂ ಎಂಬೆಸಿ ಗ್ರೂಪ್ ಕಂಪನಿಗಳು ಶನಿವಾರ ಶಿಕ್ಷಣ ಇಲಾಖೆಗೆ ಹಸ್ತಾಂತರಿಸಿದ ಸಮಾರಂಭದಲ್ಲಿ ಅವರು ಮಾತನಾಡಿದ್ದಾರೆ.

ಶೈಕ್ಷಣಿಕ ವರ್ಷ, ಶಾಲಾ ಅವಧಿ, ಪಠ್ಯದ ಇತಿಮಿತಿ ಸೇರಿದಂತೆ ಶಾಲಾ ಶೈಕ್ಷಣಿಕ ಚಟುವಟಿಕೆಗಳನ್ನು ನಮ್ಮ ರಾಜ್ಯದ ಅವಶ್ಯಕತೆಗಳ ಆಧಾರದಲ್ಲಿ ರೂಪಿಸಲಾಗುವುದು. ಇಡೀ ವಿಶ್ವವೇ ಕೊರೋನಾದಿಂದಾಗಿ ಸಂಕಷ್ಟದಲ್ಲಿರುವ ಈ ಸಂದರ್ಭದಲ್ಲಿ ನಾವೆಲ್ಲರೂ ಒಟ್ಟಾಗಿ ತಂಡ ಸ್ಫೂರ್ತಿಯಿಂದ ಕೆಲಸ ಮಾಡಬೇಕಾದ ಸಂದರ್ಭ ಬಂದಿದೆ. ಹಾಗೆಯೇ ನಮ್ಮ ಎಸ್.ಎಸ್.ಎಲ್.ಸಿ. ಪರೀಕ್ಷಾರ್ಥಿಗಳೂ ಸಹ ಇಂತಹ ಸಂದರ್ಭದಲ್ಲಿ ಪರೀಕ್ಷೆ ಎದುರಿಸಬೇಕಾಗಿರುವುದರಿಂದ ನಮ್ಮೊಂದಿಗೆ ಈ ಎರಡು ಸಂಸ್ಥೆಗಳು ಕೈಜೋಡಿಸಿರುವುದು ನಮಗೆ ಇಂತಹ ಸಂದರ್ಭದಲ್ಲೂ ಮುನ್ನುಗ್ಗಿ ಆತ್ಮವಿಶ್ವಾಸದಿಂದ ಕೆಲಸ ಮಾಡಲು ಶಕ್ತಿ ಮತ್ತು ಸ್ಫೂರ್ತಿ ಬಂದಂತಾಗಿದೆ ಎಂದು ಹೇಳಿದ್ದಾರೆ.

ಎರಡು ಸಂಸ್ಥೆಗಳು ನೀಡಿರುವ ಕೊಡುಗೆಗಳನ್ನು ನಾವು ಯಾವುದೇ ಲೋಪವಾಗದಂತೆ ನಮ್ಮ ಮಕ್ಕಳಿಗೆ ನೇರವಾಗಿ ತಲುಪಿಸುತ್ತೇವೆ. ಭಾರತ್ ಸ್ಕೌಟ್ಸ್-ಗೈಡ್ಸ್ ಸಂಸ್ಥೆಯು ನೀಡಿದ ಮಾಸ್ಕ್ ಗಳನ್ನು ಆ ಸಂಸ್ಥೆಯ ಸದಸ್ಯರಾದ ನಾಡಿನ ಮಕ್ಕಳು ಮತ್ತು ಶಿಕ್ಷಕರೇ ಉಚಿತವಾಗಿ ಹೊಲಿದು ಕೊಟ್ಟಿದ್ದು, ಅವುಗಳಲ್ಲಿ ಅವರ ಪ್ರೀತಿ, ಶ್ರಮ, ಸಮಯಗಳಿರುವುದರಿಂದ ಅವುಗಳಿಗೆ ಕೊರೋನಾ ಹೆಮ್ಮಾರಿಯನ್ನು ಹಿಮ್ಮೆಟ್ಟಿಸುವ ಸಾಮಥ್ರ್ಯವಿದೆ ಎಂದು ತಿಳಿಸಿದ್ದಾರೆ.

ಭಾರತ್ ಸ್ಕೌಟ್ಸ್-ಗೈಡ್ಸ್ ಕರ್ನಾಟಕ ಸಂಸ್ಥೆಯ ರಾಜ್ಯ ಮುಖ್ಯ ಆಯುಕ್ತ ಹಾಗೂ ಮಾಜಿ ಸಚಿವ ಪಿ.ಜಿ.ಆರ್. ಸಿಂಧ್ಯಾ ಮಾಸ್ಕ್ ಗಳನ್ನು ಹಸ್ತಾಂತರಿಸಿ ಮಾತನಾಡಿ, ಮಕ್ಕಳಿಗೆ ಒಂದು ಸಣ್ಣ ಸಹಾಯ ಹಸ್ತ ಚಾಚಲು ಸಾಧ್ಯವಾಗಿರುವುದು ನಿಜಕ್ಕೂ ನಮಗೆ ಅಭಿಮಾನದ ವಿಷಯವಾಗಿದೆ ಎಂದು ಹೇಳಿದ್ದಾರೆ.

ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್.ಆರ್. ಉಮಾಶಂಕರ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ ಡಾ. ಕೆ.ಜಿ. ಜಗದೀಶ್, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಉಪಾಧ್ಯಕ್ಷ ಷಣ್ಮುಖಪ್ಪ ಕೊಂಡಜ್ಜಿ, ಮಂಜುಳಾ, ಎಂ.ಕೆ.ಖಾನ್, ಬಾಲಾಜಿ, ಶ್ರೀನಿಧಿ, ಎಂಬೆಸ್ಸಿ ಕಂಪನಿಯ ಸಿಇಒ ಮಿಲ್ಕೆ ಹಾಲೆಂಡ್, ಸಿಎಸ್ಆರ್ ಹೆಡ್ ಶೈನಾ ಗಣಪತಿ, ದೀಪಕ್ ಪ್ರಭು, ಪ್ರದೀಪ್ ಲಾಲಾ ಮತ್ತಿತರರು ಭಾಗವಹಿಸಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...