alex Certify ಪಡಿತರ ಚೀಟಿದಾರರು, ಸುಳ್ಳು ಮಾಹಿತಿ ನೀಡಿ BPL ಕಾರ್ಡ್ ಪಡೆದುಕೊಂಡವರಿಗೆ ಸಚಿವರಿಂದ ಸೂಚನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಡಿತರ ಚೀಟಿದಾರರು, ಸುಳ್ಳು ಮಾಹಿತಿ ನೀಡಿ BPL ಕಾರ್ಡ್ ಪಡೆದುಕೊಂಡವರಿಗೆ ಸಚಿವರಿಂದ ಸೂಚನೆ

ಕಲಬುರಗಿ: ಉಳ್ಳವರು ಬಿ.ಪಿ.ಎಲ್. ಪಡಿತರ ಚೀಟಿ ಹಿಂದಿರುಗಿಸಬೇಕು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ಕೆ. ಗೋಪಾಲಯ್ಯ ತಿಳಿಸಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕೊರೊನಾ ಆರಂಭದ ಮುನ್ನ 63 ಸಾವಿರ ಅಕ್ರಮ ಪಡಿತರ ಚೀಟಿ ರದ್ದುಗೊಳಿಸಿದಲ್ಲದೆ, 93 ಲಕ್ಷ ರೂ. ದಂಡ ವಿಧಿಸಲಾಗಿದೆ. ಕೊರೋನಾ ಸಾಂಕ್ರಾಮಿಕ ಸೋಂಕಿನ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಸೂಚನೆಯಂತೆ ಕಳೆದ 3 ತಿಂಗಳಿನಲ್ಲಿ ಯಾವುದೆ ಕಾರ್ಡ್ ರದ್ದತಿಗೆ ಕ್ರಮ ಕೈಗೊಂಡಿಲ್ಲ. ಉಳ್ಳವರು ಬಿ.ಪಿ.ಎಲ್. ಪಡಿತರ ಚೀಟಿ ಹೊಂದಿದಲ್ಲಿ ಸ್ವಯಂಪ್ರೇರಿತರಾಗಿ ಮುಂದೆ ಬಂದು ಕಾರ್ಡ್ ಮರಳಿಸಬೇಕು ಎಂದು ಸಚಿವರು ಮನವಿ ಮಾಡಿದ್ದಾರೆ.

ಬಡವರಿಗೆ ದಕ್ಕಬೇಕಾದ ಅಕ್ಕಿ ಕಾಳಸಂತೆಯಲ್ಲಿ ಮಾರಾಟವಾಗದಂತೆ ನಿಗಾ ವಹಿಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ. ಅಕ್ರಮ ಪಡಿತರ ಸಾಗಾಣಿಕೆ ಮತ್ತು ಸೋರಿಕೆ ತಡೆಯುವ ನಿಟ್ಟಿನಲ್ಲಿ ಪ್ರತಿ ತಿಂಗಳು ಐದು ಜಿಲ್ಲೆಗಳಿಗೆ ಭೇಟಿ ನೀಡಿ ಪ್ರಗತಿ ಪರಿಶೀಲನೆ ನಡೆಸಲು ನಿರ್ಧರಿಸಿದ್ದೇನೆ. ಯಾವುದೇ ಗೋಡೌನ್‍ನಲ್ಲಿ ಅಕ್ರಮ ಪಡಿತರ ದಾಸ್ತಾನು ಕಂಡುಬಂದು ಪ್ರದೇಶದ ಡಿಪೋ ದಾಸ್ತಾನಿನಲ್ಲಿ ಸಂಗ್ರಹಣೆ ಕಡಿಮೆಯಿದ್ದಲ್ಲಿ ಅಂತಹ ಡಿಪೋ ಅಧಿಕಾರಿಗಳ ಮೇಲೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಬಡವರಿಗೆ ದೊರಕಬೇಕಾದ ಆಹಾರಧಾನ್ಯ ಉಳ್ಳವರ ಪಾಲಾಗಿ ಅಕ್ರಮ ದಾಸ್ತಾನು ಮತ್ತು ಸಾಗಾಟ ಕಂಡುಬಂದಲ್ಲಿ ಅಂತಹವರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದ್ದಾರೆ.

ಕಳೆದ ಏಪ್ರಿಲ್ ನಿಂದ ಸರಿಯಾಗಿ ಪಡಿತರ ವಿತರಣೆ ಮಾಡದ ಅರೋಪದ ಹಿನ್ನೆಲೆಯಲ್ಲಿ 185 ಪಡಿತರ ಅಂಗಡಿಗಳನ್ನು ಅಮಾನತ್ತು ಮಾಡಲಾಗಿದೆ. 50 ಪಡಿತರ ಅಂಗಡಿಗಳ ಮೇಲೆ ಕೇಸ್ ಹಾಕಿದ್ದು, ಸುಮಾರು 500 ಅಂಗಡಿಗಳಿಗೆ ನೋಟಿಸ್ ನೀಡಲಾಗಿದೆ. ಸೋರಿಕೆ ತಡೆಯಲು ಇಲಾಖೆ ಎಲ್ಲಾ ಕ್ರಮ ಕೈಗೊಳ್ಳುತ್ತಿದೆ ಎಂದು ತಿಳಿಸಿದ್ದಾರೆ.

ಜೂನ್ 30 ರೊಳಗೆ ಆಹಾರ ಧಾನ್ಯ ಪಡೆಯಿರಿ: ಕೊರೋನಾ ಲಾಕ್ ಡೌನ್ ಸಂದರ್ಭದಲ್ಲಿ ಸರ್ಕಾರ ಘೋಷಿಸಿದ ಏಪ್ರಿಲ್, ಮೇ ಮತ್ತು ಜೂನ್ ತಿಂಗಳ ಪಡಿತರವನ್ನು ಇನ್ನೂ ಪಡೆಯದವರು ಜೂನ್ 30 ರೊಳಗೆ ಬಂದು ಪಡೆಯಬಹುದಾಗಿದೆ ಎಂದು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...