alex Certify ಕದಂಬರ ವೈಭವದ ರಾಜಧಾನಿ ಬನವಾಸಿ ನೋಡಿದ್ದೀರಾ…..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕದಂಬರ ವೈಭವದ ರಾಜಧಾನಿ ಬನವಾಸಿ ನೋಡಿದ್ದೀರಾ…..?

ಚಾಗದ ಭೋಗದಕ್ಕರದ ಗೇಯದ ಗೊಟ್ಟಿಯಲಂಪಿ ನಿಂಪುಗಳ್ಗಾರವಾದ ಮಾನಿಸರೆ ಮಾನಿಸರಂತವರಾಗಿ ಪುಟ್ಟಲೇನಾಗಿಯುಮೇನೊ ತೀರ್ದಪುದೇ ತೀರದೊಡಂ ಮರಿದುಂಬಿಯಾಗಿ ಮೇಣ್‌ ಕೋಗಿಲೆಯಾಗಿ ಪುಟ್ಟುವುದು ನಂದನದೊಳ್‌ ಬನವಾಸಿ ದೇಶದೊಳ್‌ ಎಂದು ಆದಿಕವಿ ಪಂಪ ಹೇಳಿದ ಮಾತು ನಿಮಗೆ ನೆನಪಿರಬಹುದು. ದೇಶ ಕಂಡ ಪ್ರಪ್ರಥಮ ಕನ್ನಡ ಸಾಮ್ರಾಜ್ಯ ಕದಂಬರು ಕಟ್ಟಿ ಬೆಳೆಸಿದ ನಾಡಿನ ರಾಜಧಾನಿ ಈ ಬನವಾಸಿಯಾಗಿದೆ.

ಕ್ರಿ. ಪೂ 4000 ವರ್ಷಗಳ ಹಿಂದಿನ ಇತಿಹಾಸ ಹೊಂದಿರುವ ದೇವಾಲಯ, ನಗರವನ್ನ ಹೊಂದಿರುವ ಈ ಬನವಾಸಿ ಉತ್ತರ ಕನ್ನಡ ಜಿಲ್ಲೆಯ ವರದಾ ನದಿಯ ದಡದಲ್ಲಿ ಇದೆ.

ಬನವಾಸಿಗೆ ರಾಜ್ಯ ಕಂಡ ಅತ್ಯಂತ ಹಳೆಯ ಪಟ್ಟಣ ಎಂಬ ಖ್ಯಾತಿ ಇದೆ. ಅಲ್ಲದೇ ಇಲ್ಲಿ ರಾಜ್ಯವನ್ನಾಳಿದ ಕದಂಬರೇ ಕನ್ನಡವನ್ನ ಆಡಳಿತ ಭಾಷೆಯನ್ನಾಗಿ ಮಾಡಿದವರಂತೆ. ಅರಣ್ಯದಲ್ಲಿ ಈ ಪಟ್ಟಣವು ಸ್ಥಿತವಾಗಿದ್ದರಿಂದ ಇದಕ್ಕೆ ಬನವಾಸಿ ಎಂದು ಹೆಸರು ಬಂದಿದೆ. ಕಾಡು ಹಾಗೂ ವಸಂತ ಎಂಬ ಅರ್ಥಗಳ ಮೂಲಕ ಈ ಊರಿಗೆ ಬನವಾಸಿ ಎಂದು ನಾಮಕರಣ ಮಾಡಲಾಗಿದೆ.

ಬನವಾಸಿಗೆ ತಿಲಕವಿಟ್ಟಂತೆ ಇರುವ ಸ್ಥಳವೆಂದರೆ 9ನೇ ಶತಮಾನದಲ್ಲಿ ನಿರ್ಮಾಣಗೊಂಡ ಚೆನ್ನಕೇಶ್ವರ ದೇವಾಲಯ. ಈ ದೇಗುಲದಲ್ಲಿ ರಾಜ್ಯ ಸರ್ಕಾರದ ವತಿಯಿಂದ ಪ್ರತಿವರ್ಷ ಕದಂಬೋತ್ಸವವನ್ನ ಅದ್ಧೂರಿಯಾಗಿ ನಡೆಸಲಾಗುತ್ತದೆ. ಹೀಗಾಗಿ ಈ ದೇಗುಲಕ್ಕೆ ಡಿಸೆಂಬರ್​ ತಿಂಗಳಲ್ಲಿ ಭೇಟಿ ನೀಡೋದು ಹೆಚ್ಚು ಸೂಕ್ತ ಎನಿಸಲಿದೆ.

ಕದಂಬ ವಂಶಕ್ಕೆ ಸೇರಿದ ರವಿವರ್ಮ ತನ್ನ 38 ವರ್ಷಗಳ ಅಧಿಕಾರಾವಧಿಯಲ್ಲಿ ಕಾವೇರಿಯಿಂದ ನರ್ಮದಾ ನದಿ ತೀರದವರೆಗೂ ಕನ್ನಡ ನಾಡನ್ನ ವಿಸ್ತರಿಸಿದ್ದನಂತೆ. ಈ ಬಗ್ಗೆ ಕವಿರಾಜ ಮಾರ್ಗದಲ್ಲಿ ಉಲ್ಲೇಖವಿದೆ.

ಬನವಾಸಿಗೆ ಭೇಟಿ ನೀಡಲು ನೀವು ಸಾರಿಗೆ ಸೌಕರ್ಯಕ್ಕೆ ಯಾವುದೇ ಕಷ್ಟ ಪಡಬೇಕಿಲ್ಲ. ಶಿರಸಿ ಬಸ್​ ನಿಲ್ದಾಣದಿಂದ ಬನವಾಸಿಗೆ ಕಾಲ ಕಾಲಕ್ಕೆ ಬಸ್​ ಇರೋದ್ರಿಂದ ಇದರ ಮೂಲಕವೇ ನೀವು ಈ ಕ್ಷೇತ್ರಕ್ಕೆ ಭೇಟಿ ನೀಡಬಹುದು. ಇಲ್ಲವಾದಲ್ಲಿ ಖಾಸಗಿ ವಾಹನದ ಮೂಲಕವೂ ಬನವಾಸಿಗೆ ವಿಸಿಟ್​ ನೀಡಬಹುದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...