alex Certify ಪದವಿ ವಿದ್ಯಾರ್ಥಿಗಳಿಗೆ ಇಲ್ಲಿದೆ ಮುಖ್ಯ ಮಾಹಿತಿ: ಅತಿಥಿ ಉಪನ್ಯಾಸಕರಿಗೆ ‘ಗುಡ್ ನ್ಯೂಸ್’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪದವಿ ವಿದ್ಯಾರ್ಥಿಗಳಿಗೆ ಇಲ್ಲಿದೆ ಮುಖ್ಯ ಮಾಹಿತಿ: ಅತಿಥಿ ಉಪನ್ಯಾಸಕರಿಗೆ ‘ಗುಡ್ ನ್ಯೂಸ್’

ಬೆಂಗಳೂರು: ಉನ್ನತ ಶಿಕ್ಷಣದ ಪರೀಕ್ಷೆ ಕುರಿತು ಜೂನ್‌ ಮೊದಲ ವಾರ ವಿವರ ಹಂಚಿಕೊಳ್ಳಲಾಗುವುದು.  ಪರಿಸ್ಥಿತಿಗೆ ಅನುಗುಣವಾಗಿ ಮುಂದಿನ ನಿರ್ಧಾರಗಳನ್ನು ಕೈಗೊಳ್ಳಲಾಗುವುದು ಎಂದು ಉನ್ನತ ಶಿಕ್ಷಣ ಸಚಿವರಾದ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥ್ ನಾರಾಯಣ ಹೇಳಿದ್ದಾರೆ.

ಉನ್ನತ ಶಿಕ್ಷಣದ ಪಠ್ಯಕ್ರಮ, ಪರೀಕ್ಷೆ, ಆನ್‌ಲೈನ್‌ ಶಿಕ್ಷಣ, ಉಪನ್ಯಾಸಕರ ವರ್ಗಾವಣೆ ಸೇರಿದಂತೆ ಹಲವು ವಿಷಯಗಳ ಕುರಿತು ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ವಿಧಾನಪರಿಷತ್ ಸದಸ್ಯರೊಂದಿಗೆ ಗುರುವಾರ ಸಭೆ ನಡೆಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಕೊವಿಡ್‌ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಎದುರಿಸುತ್ತಿರುವ ಆತಂಕ ಪರಿಹರಿಸುವ ನಿಟ್ಟಿನಲ್ಲಿ ಸದಸ್ಯರು ನೀಡಿರುವ ಸಲಹೆಗಳನ್ನು ಪರಿಗಣಿಸಿ ಸಮಸ್ಯೆಗಳಿದ್ದರೆ ಅವುಗಳನ್ನು ಬಗೆಹರಿಸಲಾಗುವುದು ಎಂದು ತಿಳಿಸಿದ್ದಾರೆ.

ಪ್ರಥಮ, ದ್ವಿತೀಯ ಮತ್ತು ಅಂತಿಮ ವರ್ಷದ ಪದವಿ ತರಗತಿಗಳು, ಪಠ್ಯಕ್ರಮ ಹಾಗೂ ಪರೀಕ್ಷೆಯಲ್ಲಿ ಬಹು ಆಯ್ಕೆ ಪ್ರಶ್ನೆಗಳಿರುವ ಸರಳ ಪರೀಕ್ಷೆ ನಡೆಸುವ ಬಗ್ಗೆಯೂ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಯಿತು. ಶೈಕ್ಷಣಿಕ ಸಾಲಿನ ರಜೆ ಕಡಿತಗೊಳಿಸಿ ಪಠ್ಯಕ್ರಮ ಪೂರ್ಣಗಳಿಸಬಹುದೆಂಬ ಸಲಹೆಯನ್ನು ವಿಧಾನ ಪರಿಷತ್ತಿನ ಸದಸ್ಯರು ನೀಡಿದ್ದಾರೆ ಎಂದು ಹೇಳಿದ್ದಾರೆ.

ಆನ್‌ಲೈನ್‌ ತರಗತಿ ಬಗ್ಗೆ ಮೆಚ್ಚುಗೆ

ಕೊವಿಡ್‌ ಸಂಕಷ್ಟದ ಸಂದರ್ಭದಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕೆ ಸರ್ಕಾರ ಆಯೋಜಿಸಿದ್ದ ಆನ್‌ಲೈನ್‌ ತರಗತಿ, ಯೂಟ್ಯೂಬ್‌ ಪಾಠ, ವಾಟ್ಸಾಪ್‌ ಮೂಲಕ ಪಠ್ಯ ಸಾರಾಂಶ, ಸಿಇಟಿ ಹಾಗೂ ನೀಟ್‌ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗಾಗಿ ಗೆಟ್ ಸೆಟ್ ಗೋ ತರಬೇತಿ ಬಗ್ಗೆ ಮೇಲ್ಮನೆ ಸದಸ್ಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜತೆಗೆ, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸರ್ಕಾರ ಕೈಗೊಳ್ಳುವ ಯಾವುದೇ ನಿರ್ಧಾರಕ್ಕೆ ತಮ್ಮ ಬೆಂಬಲ ಇರುವುದಾಗಿ ಭರವಸೆ ನೀಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಪಠ್ಯಕ್ರಮ ಪರಿಷ್ಕರಣೆ

ಹೊಸ ಶಿಕ್ಷಣ ನೀತಿ ಜಾರಿ ಹಿನ್ನೆಲೆಯಲ್ಲಿ ಅದರ ಅನುಷ್ಠಾನಕ್ಕೆ ಅನುಕೂಲವಾಗುವಂತೆ ಟಾಸ್ಕ್‌ ಫೋರ್ಸ್‌ ರಚನೆ ಮಾಡಲಾಗಿದೆ. ಹೊಸ ಶಿಕ್ಷಣ ನೀತಿ ಅನುಷ್ಠಾನಕ್ಕೆ ಅಗತ್ಯ ಸಿದ್ದತೆ ಮಾಡಿಕೊಳ್ಳಲಾಗಿದೆ. ಡಿಪ್ಲೊಮಾ ಪಠ್ಯಕ್ರಮದಲ್ಲಿ ಬದಲಾವಣೆ ತರುವ ಮೂಲಕ ಅದನ್ನು ಉದ್ಯೋಗ ಆಧರಿತ ಕೋರ್ಸ್‌ ಆಗಿ ಪರಿವರ್ತಿಸಲಾಗುವುದು. ಡಿಪ್ಲೊಮಾ ಕೋರ್ಸ್‌ ಅನ್ನು ಮತ್ತಷ್ಟು ಪರಿಣಾಮಕಾರಿ ರೂಪಿಸಲು ನಾಸ್ಕಂ ಜತೆ ಈಗಾಗಲೇ ಒಪ್ಪಂದ ಮಾಡಿಕೊಳ್ಳಲಾಗಿದೆ. ಜತೆಗೆ, ಪದವಿ ತರಗತಿಗಳ ಪಠ್ಯಕ್ರಮ ಪರಿಷ್ಕರಣೆ ಮಾಡಲಾಗುವುದು ಎಂದು ವಿವರಿಸಿದ್ದಾರೆ.

ಸಂಬಳ ವಿಳಂಬವಾಗದಂತೆ ಕ್ರಮ

ಅತಿಥಿ ಉಪನ್ಯಾಸಕರ ಸಂಬಳ ತಡವಾಗುತ್ತಿರುವ ವಿಚಾರದ ಬಗ್ಗೆ ಈಗಾಗಲೇ ಗಮನಹರಿಸಲಾಗಿದೆ. ಇದು ಬಹಳ ಹಳೆಯ ಸಮಸ್ಯೆಯಾಗಿದ್ದು, ಪರಿಹರಿಸಲು ಯೋಜನಾ ಬದ್ಧವಾಗಿ ಕ್ರಮ ಕೈಗೊಳ್ಳಬೇಕಾಗುತ್ತದೆ. ಆದ್ದರಿಂದ ಅತಿಥಿ ಉಪನ್ಯಾಸಕರ ವೇತನಕ್ಕೆ ವ್ಯವಸ್ಥಿತವಾಗಿ ಬಜೆಟ್ ರೂಪಿಸುವ ಮೂಲಕ ಪರಿಹಾರ ಕಂಡುಕೊಳ್ಳಲಾಗುವುದು. ಜುಲೈ ತಿಂಗಳಲ್ಲಿ ಈ ಕುರಿತು ಸ್ಪಷ್ಟ ನಿರ್ಧಾರಕ್ಕೆ ಬರಲಾಗುವುದು ಎಂದು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...