ಕೊರೊನಾ ವೈರಸ್ ಬಿಸಿ 13ನೇ ಆವೃತ್ತಿಯ ಏರೋ ಇಂಡಿಯಾ ಶೋಗೂ ತಟ್ಟಿದ್ದು ವೈಮಾನಿಕ ಪ್ರದರ್ಶನದಲ್ಲಿ ಜನಸಂದಣಿಯನ್ನ ನಿಯಂತ್ರಿತ ಸಂಖ್ಯೆಗೆ ಇಳಿಸಿದೆ. ಬೆಂಗಳೂರು ಹೊರವಲಯದ ಯಲಹಂಕ ವಾಯುನೆಲೆಯಲ್ಲಿ ನಡೆಯಲಿರುವ ವೈಮಾನಿಕ ಪ್ರದರ್ಶನವನ್ನ ಆನ್ಲೈನ್ ಹಾಗೂ ಟೆಲಿವಿಷನ್ ಮುುಖಾಂತರ ನೋಡಬಹುದಾಗಿದೆ.
ಫೆಬ್ರವರಿ 3ರಿಂದ ಐದು ದಿನಗಳ ಕಾಲ ಯಲಹಂಕ ವಾಯುನೆಲೆಯಲ್ಲಿ 13ನೇ ಆವೃತ್ತಿಯ ಏರ್ ಶೋ ನಡೆಯಲಿದೆ. ಈವರೆಗೆ 532 ಪ್ರದರ್ಶಕರು ಈವೆಂಟ್ಗಾಗಿ ನೋಂದಾಯಿಸಿಕೊಂಡಿದ್ದಾರೆ.
ಆದರೆ ಇದರಲ್ಲಿ ಕೇವಲ 75 ವಿದೇಶಿ ಸಂಸ್ಥೆಗಳಿವೆ. ಕಳೆದ ಬಾರಿ 165 ವಿದೇಶಿ ಪ್ರದರ್ಶಕರು ನೋಂದಾಯಿಸಿಕೊಂಡಿದ್ದರು.
ಕಳೆದ ತಿಂಗಳು ನವದೆಹಲಿಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪ್ರದರ್ಶನದ ದಿನವನ್ನ ಕಡಿಮೆ ಮಾಡಲು ನಿರ್ಧರಿಸಲಾಗಿತ್ತು. ಸಾಮಾಜಿಕ ಅಂತರ ಕಾಪಾಡುವುದು, ಎಲ್ಲ ಪ್ರವೇಶ ದ್ವಾರಗಳಲ್ಲಿ ಥರ್ಮಲ್ ಸ್ಕ್ರೀನಿಂಗ್ ಕಡ್ಡಾಯ, ಸ್ಯಾನಿಟೈಸರ್ ಸೇರಿದಂತೆ ಕೊರೊನಾ ಸಂಬಂಧಿ ಎಲ್ಲ ಮಾರ್ಗಸೂಚಿಗಳನ್ನ ಕೈಗೊಳ್ಳುವ ಬಗ್ಗೆ ಸೂಚಿಸಲಾಗಿದೆ.