ಧಾರವಾಡ: ಬೆಂಬಲ ಬೆಲೆಯಡಿ ಕಡಲೆ ಖರೀದಿ ಮಾಡಿದ್ದು ರೈತರ ಖಾತೆಗಳಿಗೆ ಶೀಘ್ರವೇ ಹಣ ಜಮಾ ಮಾಡಲಾಗುವುದು ಎಂದು ಸಚಿವ ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಕಡಲೆ ಖರೀದಿಸಿದ್ದ ರೈತರ ಖಾತೆಗೆ ಹಣ ಜಮಾ ಆಗದಿರುವುದು ಗಮನಕ್ಕೆ ಬಂದಿದೆ. ತಾಂತ್ರಿಕ ಕಾರಣದಿಂದ ಈ ರೀತಿ ಆಗಿದ್ದು ಆದಷ್ಟು ಬೇಗನೆ ಕಡಲೆ ಮಾರಿದ ರೈತರ ಖಾತೆಗಳಿಗೆ ಹಣ ಜಮಾ ಮಾಡಲಾಗುವುದು ಎಂದು ಹೇಳಿದ್ದಾರೆ.
ಸದ್ಯದ ಪರಿಸ್ಥಿತಿಯಲ್ಲಿ ಸರ್ಕಾರದಿಂದ ಮೆಕ್ಕೆಜೋಳ ಖರೀದಿಸಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಮೆಕ್ಕೆಜೋಳ ಬೆಳೆದ ರೈತರಿಗೆ 5000 ರೂಪಾಯಿ ಸಬ್ಸಿಡಿ ನೀಡಲು ಸರ್ಕಾರ ನಿರ್ಧರಿಸಿದೆ. ಕೆಎಂಎಫ್ ವತಿಯಿಂದ ಮೆಕ್ಕೆಜೋಳ ಖರೀದಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಮಾರುಕಟ್ಟೆಯಲ್ಲಿ ಮೆಕ್ಕೆಜೋಳಕ್ಕೆ 1400 ರೂಪಾಯಿ ಬೆಲೆ ಇದ್ದು, ಸರ್ಕಾರ ಖರೀದಿ ಕೇಂದ್ರದ ಮೂಲಕ ಮೆಕ್ಕೆಜೋಳ ಖರೀದಿಸುವುದಿಲ್ಲ ಎಂದು ಸಚಿವರು ಹೇಳಿದ್ದಾರೆ.